ನೀರು ಎಂದು ಆ್ಯಸಿಡ್ ಕುಡಿದ ಮಗು – 1 ವಾರ ಜೀವನ್ಮರಣ ಹೊರಾಟ.. ಬದುಕಲಿಲ್ಲ ಪುಟ್ಟ ಕಂದಮ್ಮ
ಮನೆಯಲ್ಲಿ ಮಕ್ಕಳಿದ್ರೆ ಅವರ ಮೇಲೊಂದು ಕಣ್ಣಿಟ್ಟಿರಬೇಕು. ಸ್ವಲ್ಪ ಮೈಮರೆತ್ರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಇಲ್ಲೊಂದು ಮಗು ಬಾಯಾರಿಕೆ ಆಯ್ತು ಅಂತಾ ಆ್ಯಸಿಡ್ ಕುಡಿದಿದ್ದು, ನರಳಾಡಿ ಜೀವ ಬಿಟ್ಟಿದೆ.
ಇದನ್ನೂ ಓದಿ: 35 ಕೋಟಿ ರೂಪಾಯಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!- ಕಾಂಗ್ರೆಸ್ ಸಚಿವ ಅರೆಸ್ಟ್
ಈ ಮನಕಲಕುವ ಘಟನೆ ಇಂದೋರ್ನಲ್ಲಿ ನಡೆದಿದೆ. ಅಲ್ಲಿನ ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್ ಅಹಿರ್ವಾರ್ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿದೆ. ಪರಿಣಾಮ 6 ವರ್ಷದ ಮಖಾನ್ ಅಸ್ವಸ್ಥನಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಂದು ವಾರಕ್ಕೂ ಹೆಚ್ಚು ದಿನ ನರಳಾಡಿ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಅಷ್ಟಕ್ಕೂ ಆಗಿದ್ದೇನು?
ಮನೆ ಸ್ವಚ್ಛಗೊಳಿಸಲು ಎಂದು ಕೈಲಾಶ್ ಆ್ಯಸಿಡ್ ತಂದಿಟ್ಟಿದ್ದರು. ಮೇ5ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಮಖಾನ್ ತನ್ನ ತಂದೆ ಬಳಿ ಮಲಗಿದ್ದನು. ಮಧ್ಯರಾತ್ರಿ ಬಾಯಾರಿಕೆಯಾಗಿದ್ದಾಗ ತಂದೆ ಕೈಲಾಶ್ ಆತನಿಗೆ ನೀರು ಕೊಟ್ಟಿದ್ದಾರೆ. ಬಳಿಕ ಆತ ತಾಯಿ ಬಳಿ ಮಲಗಿದ್ದಾನೆ. ಸುಮಾರು 1.30 ಹೊತ್ತಿಗೆ ಮತ್ತೆ ನೀರು ಕೇಳಿದ್ದಾನೆ. ಆವಾಗ ತಾಯಿ ನೀರು ಕೊಟ್ಟು ಮಲಗಿಸಿದ್ದಾರೆ. ನಂತರ 3 ಗಂಟೆಗೆ ಮತ್ತೆ ಎದ್ದಿದ್ದಾನೆ. ಈ ವೇಳೆ ಕೂಲರ್ ಬಳಿ ಇಟ್ಟಿದ್ದ ಆ್ಯಸಿಡ್ ಬಾಟಲಿಯನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ.
ಮಖಾನ್ ಆ್ಯಸಿಡ್ ಕುಡಿದು ಮಲಗಿದ ಸ್ವಲ್ಪ ಹೊತ್ತಿನ ಬಳಿಕ ಗಂಟಲಲ್ಲಿ ಉರಿ ಕಾಣಿಸಿದೆ. ತಕ್ಷಣ ತಾಯಿ ರಚನಾ ಅವರನ್ನು ಎಬ್ಬಿಸಿದ್ದಾನೆ. ವಾಂತಿ ಮಾಡಿದ್ದಾನೆ. ವಾಂತಿ ವೇಲೆ ಆ್ಯಸಿಡ್ ವಾಸನೆಯನ್ನ ಗ್ರಹಿಸಿ ತಾಯಿ ಗಾಬರಿಯಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡಿ ಮಖಾನ್ ಕೊನೆಯುಸಿರೆಳೆದಿದ್ದಾನೆ.