ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂದು ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ!

ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂದು ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ!

ಭಾರತ ಮಾತ್ರವಲ್ಲದೇ ಈಗ ವಿದೇಶದಲ್ಲೂ ಹಿಜಾಬ್‌ ವಿವಾದ ಮುನ್ನೆಲೆಗೆ ಬಂದಿದೆ. ಫಾನ್ಸ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್‌, ಅಬಯಾ ಧರಿಸುವುದನ್ನು ಅಲ್ಲಿನ ಸರ್ಕಾರ ಬ್ಯಾನ್‌ ಮಾಡಿತ್ತು. ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ಯಾವುದೇ ವಸ್ತ್ರಗಳನ್ನು ಶಾಲೆಗಳಿಗೆ ಧರಿಸಿಕೊಂಡು ಬರಬಾರದು ಅಂತಾ ಆದೇಶ ಹೊರಡಿಸಿತ್ತು. ಆದರೆ ಇಂಡೋನೇಷ್ಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎಂದು 12ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ತಲೆಯನ್ನು ಅರೆ ಬೋಳಿಸಿರುವ ಘಟನೆ ನಡೆದಿದೆ.

ಏನಿದು ಘಟನೆ?

ಇಂಡೋನೇಷ್ಯಾದ ಪೂರ್ವ ಜಾವಾದ ಲಾಮೊಂಗನ್ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಜೂನಿಯರ್ ಹೈಸ್ಕೂಲ್ SMPN 1 ನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯ ಹನ್ನೆರಡಕ್ಕೂ ಹೆಚ್ಚು ವಿದ್ಯಾರ್ಥಿನಿಯರ ತಲೆಯನ್ನು ಅರೆ ಬೋಳಿಸಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹೇಳಿಕೆ ನೀಡಿದ್ದಾರೆ. ಆ ಶಾಲೆಯ ವಿದ್ಯಾರ್ಥಿನಿಯರು ತಮ್ಮ ಇಸ್ಲಾಮಿಕ್‌ ಶಿರಸ್ತ್ರಾಣವನ್ನು ತಪ್ಪಾಗಿ ಧರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ.

ಹದಿನಾಲ್ಕು ಮುಸ್ಲಿಂ ಹುಡುಗಿಯರಿಗೆ ಶಿಕ್ಷಕಿಯೊಬ್ಬರು ಕಳೆದ ಬುಧವಾರ ಕೂದಲನ್ನು ಅರೆ ಬೋಳಿಸಿದ್ದಾರೆ. ಘಟನೆಯ ನಂತರ ಹಾರ್ಟೊ ಎಂಬ ಮುಖ್ಯೋಪಾಧ್ಯಾಯರು, ಶಾಲೆಯು ಸಂಬಂಧಪಟ್ಟ ಶಿಕ್ಷಕಿಯನ್ನು ಅಮಾನತುಗೊಳಿಸುವ ಮೂಲಕ ಕ್ರಮ ಕೈಗೊಂಡಿದೆ ಮತ್ತು ಬಾಲಕಿಯರ ಪೋಷಕರ ಬಳಿ ಕ್ಷಮೆಯಾಚಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ನಿನ್ನ ಕೊನೆಯ ಆಸೆ ಏನೆಂದು ಕೇಳಿ ರಸಗುಲ್ಲಾ ತಂದುಕೊಟ್ರು – 8ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸೇರಿ ಸಹಪಾಠಿಯನ್ನೇ ಕೊಂದ್ರು

ಘಟನೆಗೆ ಕಾರಣವೇನು?

14ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸ್ಕಾರ್ಫ್‌ಗಳ ಕೆಳಗೆ ಒಳ ಟೋಪಿಗಳನ್ನು ಧರಿಸಿದ್ದರು. ಈ ಟೋಪಿಗಳನ್ನು ಧರಿಸಿದ್ದರಿಂದಾಗಿ ವಿದ್ಯಾರ್ಥಿನಿಯರ ಕೂದಲು ಗೋಚರಿಸುತ್ತಿತ್ತು. ಹೋಗಾಗಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಈ ರೀತಿಯ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿನಿಯರಿಗೆ ಹಿಜಾಬ್‌ಗಳನ್ನು ಧರಿಸಲು ಯಾವುದೇ ಕಡ್ಡಾಯ ನಿಯಮ ಇಲ್ಲದಿದ್ದರೂ, ಅಚ್ಚುಕಟ್ಟಾಗಿ ಕಾಣಿಸಿಕೊಳ್ಳಲು ಕ್ಯಾಪ್‌ಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರು, ಪೋಷಕರೊಂದಿಗೆ ಮಧ್ಯಸ್ಥಿಕೆ ಮಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿರುವುದು ವರದಿಯಾಗಿದೆ.

ಈ ಘಟನೆಯು ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮಾನವ ಹಕ್ಕುಗಳ ವಕೀಲರು ಇಂತಹ ಶಿಕ್ಷಕರನ್ನು ತೆಗೆದುಹಾಕಬೇಕೆಂದು ಒತ್ತಾಯ ಕೇಳಿಬಂದಿದೆ. ಇಂತಹ ಘಟನೆಗಳು ವಿದ್ಯಾರ್ಥಿಗಳಿಗೆ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

suddiyaana