ಇಂದಿರಾ ಕ್ಯಾಂಟೀನ್ ನ ಊಟ, ತಿಂಡಿ ಮೆನು ಬದಲಾವಣೆ – ಬ್ರೆಡ್ ಜಾಮ್, ಮಂಗಳೂರು ಬನ್ಸ್ ನೀಡಲು ತೀರ್ಮಾನ

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ಗಳಿಗೆ ಮರು ಜೀವ ಸಿಕ್ಕಂತಾಗಿದೆ. ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಲಭ್ಯವಾಗಿತ್ತಿದೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನ ಊಟ, ತಿಂಡಿಯ ಮೆನು ಬದಲಾವಣೆ ಮಾಡಿ ಗುಣಮಟ್ಟದ ಶುಚಿ-ರುಚಿ ಊಟ ನೀಡಲು ನಿರ್ಧಾರ ಮಾಡಲಾಗಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳನ್ನು ಸೇರ್ಪಡೆ ಮಾಡಲು ಸರ್ಕಾರ ಮುಂದಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಮೆನುವಿನಲ್ಲಿ ಹೊಸ ಐಟಂಗಳನ್ನು ಸೇರ್ಪಡೆ ಮಾಡಲಾಗಿದೆ. ಬೆಳಗ್ಗೆ ತಿಂಡಿ ಮೆನುವಿನಲ್ಲಿ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್ ನೀಡಲು ಕೂಡ ತೀರ್ಮಾನಿಸಲಾಗಿದೆ. ಇನ್ನು ಮಧ್ಯಾಹ್ನದ ಊಟದಲ್ಲಿ ದಕ್ಷಿಣ ಕರ್ನಾಟಕ ಶೈಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಗಲಿದೆ ಒಂದು ಸಿಹಿ ಪಾಯಸ ಅಥವಾ ಸಿಹಿ ತಿಂಡಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಮೊದಲ ದಿನ 55,000ಕ್ಕೂ ಹೆಚ್ಚು ಗ್ರಾಹಕರಿಂದ ಅರ್ಜಿ – ಆರಂಭದಲ್ಲೇ ಕಾಣಿಸಿಕೊಂಡ ಸರ್ವರ್ ಬಿಜಿ ಸಮಸ್ಯೆ
ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಮಾತನಾಡಿದ್ದು, ಇಂದಿರಾ ಕ್ಯಾಂಟಿನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಮೆನು ಪಟ್ಟಿಯಲ್ಲಿ ಹೊಸದಾಗಿ ಪಾಯಸವನ್ನು ಸೇರ್ಪಡೆ ಮಾಡಿದೆ. ಎರಡು ದಿನಕ್ಕೊಮ್ಮೆ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ, ಸಾಗು ಊಟ ನೀಡಲಾಗುತ್ತದೆ. ಊಟ ಒದಗಿಸುವ ಏಜೆನ್ಸಿಗಳು ಈ ಹೊಸ ಮೆನುವಿಗೆ ಒಪ್ಪಿಗೆ ಸೂಚಿಸಿದರೆ ಹೊಸ ಮೆನು ಪ್ರಕಾರ ಊಟ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳ್ಳಗ್ಗೆ ಇಡ್ಲಿ, ಪುಳಿಯೊಗರೆ, ಖಾರಾಬಾತ್, ಪೊಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಕೇಸರಿಬಾತ್ ನೀಡಲಾಗುತ್ತಿತ್ತು. ಈಗ ಅದಕ್ಕೆ ಹೊಸ ಸೇರ್ಪಡೆಯಾಗಿ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್ ನೀಡಲು ತೀರ್ಮಾನ ಮಾಡಲಾಗಿದೆ. ಇನ್ನು ಈವರೆಗೆ ಬೆಂಗಳೂರಿನಲ್ಲಿ ಬೆಳಗ್ಗಿನ ತಿಂಡಿಗೆ ಕೇವಲ 5 ರೂ. ಇದ್ದು, ಅದನ್ನು ರೂ.10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಇನ್ನು ಮಧ್ಯಾಹ್ನ ಊಟಕ್ಕೆ 10 ರೂ. ಬೆಲೆಯಿದೆ. ಊಟದಲ್ಲಿ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ಹೊಸದಾಗಿ ಸಿಹಿ ಪಾಯಸ ಮತ್ತು ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ.
ರಾತ್ರಿ ಊಟದ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಾತ್ರಿ ವೇಳೆ ಟೊಮೆಟೋ ಬಾತ್, ಮೊಸರನ್ನ, ವಾಂಗಿಬಾತ್, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್, ಪುಳಿಯೊಗರೆ, ಪಲಾವ್ ನೀಡಲಾಗುತ್ತಿದೆ. ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ರಾಜ್ಯದ ಎಲ್ಲ ಪ್ರಾದೇಶಿಕ ಭಾಗದ ಜನರಿಗೂ ಅನುಕೂಲ ಆಗುವಂತೆ ಆಯಾ ಶೈಲಿಯ ತಿಂಡಿಯನ್ನು ಕೊಡಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಬಡವರಿಗೆ ಹೊಟ್ಟೆ ತುಂಬ ಇಷ್ಟವಾದ ಆಹಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.