ಕಡಿಮೆ ಬೆಲೆ.. ಶುಚಿ, ರುಚಿಯಾಗಿ ಹೊಟ್ಟೆ ತುಂಬಾ ಊಟ – ಇನ್ಮುಂದೆ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ!
2017ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಳ್ಳ ಹಿಡಿದಿತ್ತು. ಹಲವು ಕ್ಯಾಂಟೀನ್ ಗಳಿಗೆ ಬೀಗ ಕೂಡ ಹಾಕಲಾಗಿತ್ತು. ಆದರೆ ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕ್ಯಾಂಟೀನ್ ಗಳಿಗೆ ಮರುಜೀವ ಬಂದಿದೆ.
ಬಡವರು, ನಿರ್ಗತಿಕರು, ಹಸಿದವರ ಪಾಲಿಗೆ ಅನ್ನಕೇಂದ್ರವಾಗಿದ್ದ ಇಂದಿರಾ ಕ್ಯಾಂಟೀನ್(Indira canteen) ಮರು ಆರಂಭಕ್ಕೆ ಇದೀಗ ಸರ್ಕಾರ ಸೂಚಿಸಿದೆ ಎಂದು ಬಿಬಿಎಂಪಿ(BBMP) ವಿಶೇಷ ಆಯುಕ್ತ ಜಯರಾಂ ರಾಯ್‌ಪುರ(Jayaram Raipura) ಹೇಳಿದ್ದಾರೆ. ಇನ್ನು ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಡಿಮಾಂಡ್ ಕಡಿಮೆ ಆಗಿತ್ತು. ಈ ಕಾರಣಕ್ಕೆ ಇರುವ ಕ್ಯಾಂಟೀನ್‌ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಕ್ಲೋಸ್ ಮಾಡಲಾಗಿತ್ತು. ಇದೀಗ 243 ಸ್ಥಳಗಳಲ್ಲೂ ಕ್ಯಾಂಟೀನ್ ಆರಂಭಿಸ್ತೇವೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಂಟೀನ್ ಅಡುಗೆ ಕೋಣೆ ವಸ್ತುಗಳನ್ನು ರೀಪ್ಲೇಸ್ ಮಾಡಬೇಕಿದೆ. ಉಪಾಹಾರ ಬೆಲೆ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ, ಅದು ಹಾಗೆಯೇ ಮುಂದುವರಿದಿದೆ. ಜೊತೆಗೆ ಇನ್ನು ಹಣ ಪಾವತಿಯಾಗಿಲ್ಲ ಅನ್ನೋ ದೂರು ಕೇಳಿಬಂದಿದೆ. ನಾವು ಮಾರ್ಷಲ್ಸ್ ನೀಡುವ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ. 1 ತಿಂಗಳಲ್ಲಿ ಟೆಂಡರ್, ಗುತ್ತಿಗೆದಾರರಿಗೆ ಹಳೇ ಪೇಮೆಂಟ್ ಆಗಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಹೇಳಿದ್ದಾರೆ.
ಇದನ್ನೂ ಓದಿ : ಬ್ಲ್ಯಾಕ್ ಲಿಸ್ಟ್ ಭಯದಲ್ಲಿ ಭಾರತದ ನೆರವು ಕೇಳಿದ ರಷ್ಯಾ – ಬೆಂಬಲ ನೀಡುವಂತೆ ಮನವಿ!
ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್ ನಿರೀಕ್ಷೆಯಂತೆ ಎಲ್ಲ ವರ್ಗದ ಜನರ ಹಸಿವು ನೀಗಿಸಿತ್ತು. ಆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆ ಮುಂದುವರೆಸಲಾಗಿತ್ತಾದ್ರೂ, ಬಿಜೆಪಿ ಆಡಳಿತದಲ್ಲಿ ಕೆಲವು ಕಡೆಗಳಲ್ಲಿ ಬಂದ್ ಮಾಡಿಸಲಾಗಿತ್ತು. ಸದ್ಯ ಸಿದ್ದರಾಮಯ್ಯ ಘೋಷಿಸಿದ್ದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದ್ದು, 5ರೂಗೆ ಉಪಹಾರ, 10 ರೂ ಗೆ ಊಟ, ಎಂತಹ ಬಡವರಾದ್ರೂ ಸಹ ಇಷ್ಟು ಹಣದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ.