ತುರ್ತು ಭೂಸ್ಪರ್ಶ ಮಾಡಿದ್ರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ – ವಿಮಾನಯಾನದ ವೇಳೆ ಆಗಿದ್ದೇನು..?

ತುರ್ತು ಭೂಸ್ಪರ್ಶ ಮಾಡಿದ್ರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ – ವಿಮಾನಯಾನದ ವೇಳೆ ಆಗಿದ್ದೇನು..?

ವಿಮಾನಯಾನದ ವೇಳೆ ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥರಾದ ಪರಿಣಾಮ ಏರ್ ಇಂಡಿಗೋ ವಿಮಾನವನ್ನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆದರೆ ದುರಾದೃಷ್ಟವಶಾತ್ ಪ್ರಯಾಣಿಕ ಸಾವನ್ನಪ್ಪಿದ್ದಾರೆ.

ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣದಿಂದ ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ನೀಡಲಾಯಿತು. ಆದರೆ ಅಷ್ಟೊತ್ತಿಗಾಗಲೇ ಪ್ರಯಾಣಿಕ ಸಾವನ್ನಪ್ಪಿದ್ದಾಗಿ ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ. ಮೃತನನ್ನ ನೈಜೀರಿಯಾ ಮೂಲದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ವಿಮಾನದಲ್ಲಿ ಸಿಗರೇಟ್ ಹಚ್ಚಿದ ಯುವತಿ – ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು

ಇಂಡಿಗೋ ಏರ್ ಲೈನ್ ಸಂಸ್ಥೆಯ 6E-1736 ವಿಮಾನವು ದೆಹಲಿಯಿಂದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದೆ. ವಿಮಾನ ಪ್ರಯಾಣ ಆರಂಭವಾದ ಕೆಲ ಸಮಯದ ನಂತರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ಲಾ (60) ಎಂಬುವವರಿಗೆ ತೀವ್ರ ಅಸ್ವಸ್ಥತೆ ಕಾಡಿದೆ. ಅಷ್ಟು ಹೊತ್ತಿಗೆ ವಿಮಾನವು ಪಾಕಿಸ್ತಾನದ ಕಡೆಯಿಂದ ಹಾದು ಹೋಗುತ್ತಿತ್ತು. ಹೀಗಾಗಿ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ ವಿಮಾನದ ಪೈಲಟ್, ಅಬ್ದುಲ್ಲಾ ಅವರ ಪರಿಸ್ಥಿತಿಯನ್ನು ವಿವರಿಸಿ ತುರ್ತು ಭೂಸ್ಪರ್ಶನಕ್ಕಾಗಿ ಅನುಮತಿ ಕೋರಿದ್ದಾರೆ. ಇದನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮೋದಿಸಿ, ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅನುಮತಿ ನೀಡಿದ್ದಾರೆ. ಆದರೆ, ಅಷ್ಟೊತ್ತಿಗೆ ಅಬ್ದುಲ್ಲಾ ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಿಮಾನವನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸುವ ಮುನ್ನವೇ ಅಬ್ದುಲ್ಲಾ ಅಸುನೀಗಿದ್ದಾರೆ.

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಂಡಿಗೋ ಸಂಸ್ಥೆ, ‘ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಸುತ್ತಿದ್ದ ನಮ್ಮ ಸಂಸ್ಥೆಯ ವಿಮಾನವು ಮಾರ್ಗ ಮಧ್ಯೆ ಪಾಕಿಸ್ತಾನದ ಕರಾಚಿ ಕಡೆಗೆ ಪ್ರಯಾಣ ಬೆಳೆಸಿತು. ಇದಕ್ಕೆ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಬೇಕಾಗಿದ್ದೇ ಕಾರಣ ಎಂದು ಹೇಳಿದ್ದಾರೆ. ಆದರೆ, ದುರಾದೃಷ್ಟವಶಾತ್ ಆ ವ್ಯಕ್ತಿಯು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವುದಕ್ಕೂ ಮುನ್ನವೇ ಅಸುನೀಗಿದ್ದಾರೆ’ ಎಂದು ತಿಳಿಸಿದೆ.

suddiyaana