ಲಂಕಾ ಬೇಟೆಗೆ ಮುಹೂರ್ತ ಫಿಕ್ಸ್ – ಟೀಂ ಇಂಡಿಯಾದಲ್ಲಿ ಯಾರಿಗೆ ಚಾನ್ಸ್?
ಟೀಂ ಇಂಡಿಯಾದ ಸೀನಿಯರ್ಸ್ ಟಿ-20 ವಿಶ್ವಕಪ್ ಗೆದ್ದಿದ್ದಾರೆ. ಟೀಂ ಇಂಡಿಯಾದ ಯಂಗ್ ಟೈಗರ್ಸ್ ಜಿಂಬಾಬ್ವೆ ವಿರುದ್ಧದ ಟಿ-20 ಸರಣಿ ಕೈವಶ ಮಾಡಿಕೊಳ್ಳೋ ಜೋಶ್ನಲ್ಲಿದ್ದಾರೆ. ಬಟ್ ಈಗ ಎಲ್ಲರ ಚಿತ್ತ ಭಾರತ ವರ್ಸಸ್ ಶ್ರೀಲಂಕಾ ಸರಣಿ ಮೇಲೆ ನೆಟ್ಟಿದೆ. ಜುಲೈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಈ ಸಿರೀಸ್ ಹಲವು ಕಾರಣಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ನೂತನ ಹೆಚ್ಕೋಚ್ ಗೌತಮ್ ಗಂಭೀರ್‌ಗೆ ಇದು ಪ್ರತಿಷ್ಠೆಯ ಸರಣಿ ಆಗಿದ್ರೆ ಪ್ಲೇಯಿಂಗ್ 11ನಲ್ಲೂ ಸಾಕಷ್ಟು ಬದಲಾವಣೆ ಆಗೋದಂತೂ ಫಿಕ್ಸ್. ಇದೆಲ್ಲದರ ನಡುವೆ ಲಂಕಾ ಪ್ರವಾಸಕ್ಕೆ ಬಿಸಿಸಿಐ ಬಿಗ್ ಅಪ್ಡೇಟ್ ನೀಡಿದೆ.
ಇದನ್ನೂ ಓದಿ: KING ಮೇಲೆ ಬಿದ್ದ PAK ಕಣ್ಣು – ಭಾರತವನ್ನೇ ಮರೆಯುತ್ತಾರಾ ಕೊಹ್ಲಿ?
ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಟಿ-20ಐ ಫಾರ್ಮೇಟ್ಗೆ ಗುಡ್ ಬೈ ಹೇಳಿದ್ರು. ಹಾಗೇ ಸ್ಟಾರ್ ಪ್ಲೇಯರ್ಸ್ಗಳಾದ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ವಿಶ್ರಾಂತಿ ಬಯಸಿದ್ರು. ಹೀಗಾಗಿ ಜಿಂಬಾಬ್ವೆ ಪ್ರವಾಸಕ್ಕೆ ಯುವಪಡೆಯನ್ನೇ ಕಳಿಸಲಾಗಿದೆ. ಬಟ್ ಈಗ ಟೀಂ ಇಂಡಿಯಾಗೆ ಅಸಲಿ ಚಾಲೆಂಜ್ ಶುರುವಾಗೋದೇ ಶ್ರೀಲಂಕಾ ಪ್ರವಾಸದ ಮೂಲಕ. ಟೀಂ ಇಂಡಿಯಾದ ನೂತನ ಕೂಚ್ ಗೌತಮ್ ಗಂಭೀರ್ ಅವ್ರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಗೇ ಈ ಸರಣಿಯಲ್ಲಿ ಸ್ಟಾರ್ ಪ್ಲೇಯರ್ಸ್ ಕೂಡ ಇರೋದಿಲ್ಲ. ಒಂದಷ್ಟು ಸೀನಿಯರ್ಸ್ ಮತ್ತು ಯಂಗ್ಸ್ಟರ್ಸ್ ಮಿಕ್ಅಪ್ ಆಗಿ ಸರಣಿಗೆ ಹೋಗಬೇಕು. ಇದೇ ಈಗ ಸವಾಲಾಗಲಿದೆ. ಸದ್ಯ ಬಿಸಿಸಿಐ ಲಂಕಾ ಪ್ರವಾಸದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಲಂಕಾ ಸರಣಿಗೆ ಮುಹೂರ್ತ!
ಜಿಂಬಾಬ್ವೆ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಸದ್ಯ ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ರಿಲೀಸ್ ಮಾಡಿದೆ. ವೇಳಾಪಟ್ಟಿ ಪ್ರಕಾರ ಭಾರತ ಕ್ರಿಕೆಟ್ ತಂಡವು 3 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಪಂದ್ಯಗಳ ಆತಿಥ್ಯ ವಹಿಸಲು ಪಲ್ಲಕೆಲೆ ಮತ್ತು ಕೊಲಂಬೊ ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಜುಲೈ 26ನೇ ತಾರೀಕಿನಿಂದ ಭಾರತದ ಶ್ರೀಲಂಕಾ ಪ್ರವಾಸ ಶುರುವಾಗಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಜುಲೈ 26, 27 ಮತ್ತು 29ಕ್ಕೆ ಕ್ರಮವಾಗಿ 3 ಟಿ20 ಪಂದ್ಯಗಳು ನಡೆಯಲಿವೆ. ಟಿ20 ಸರಣಿಯ ಮೂರು ಪಂದ್ಯಗಳು ರಾತ್ರಿ 7 ಗಂಟೆಗೆ ಶುರುವಾಗಲಿವೆ. ಇದಾದ ಬಳಿಕ ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. 2ನೇ ಪಂದ್ಯ ಆಗಸ್ಟ್ 4 ರಂದು ಮತ್ತು ಮೂರನೇ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಈ ಮೂರು ಪಂದ್ಯಗಳು ಮಧ್ಯಾಹ್ನ 2:30ಕ್ಕೆ ಆರಂಭವಾಗಲಿವೆ. ಪ್ರಸ್ತುತ ವೇಳಾಪಟ್ಟಿ ಪ್ರಕಟವಾಗಿದ್ದು, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟ ಮಾಡೋ ಸಾಧ್ಯತೆ ಇದೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪ್ರವಾಸದಿಂದ ಹೊರಗುಳಿಯಲ್ಲಿದ್ದಾರೆ. ಹಾಗೇ ಜಸ್ಪ್ರೀತ್ ಬುಮ್ರಾ ಅವರಿಗೂ ಪ್ರವಾಸದಿಂದ ವಿಶ್ರಾಂತಿ ನೀಡಲಾಗುವುದು ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನು ಮುನ್ನಡೆಸಲ್ಲಿದ್ದು, ಕೆಎಲ್ ರಾಹುಲ್ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ನೀಡಲಾಗುವುದು. ಇಲ್ಲಿ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಜೊತೆಗೆ ಕೋಚ್ ಆಗಿ ಗಂಭೀರ್ಗೂ ಕೂಡ ಈ ಸರಣಿ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಮಾಜಿ ಕೋಚ್ ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ಹೊಸ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್‌ಗೆ ಇದು ಮೊದಲ ಸರಣಿಯಾಗಿದೆ. ಅಧಿಕೃತವಾಗಿ ಅವರು ಈ ಸರಣಿಯ ಮೂಲಕ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಟೀಮ್ ಇಂಡಿಯಾದ ಮೇಲಿನ ಬೆಟ್ಟದಂಥ ನಿರೀಕ್ಷೆಗಳನ್ನು ಅವರು ಈಡೇರಿಸಬೇಕಿದೆ.
ಸದ್ಯ ಟೀಂ ಇಂಡಿಯಾ ಉತ್ತಮ ಫಾರ್ಮ್ನಲ್ಲಿದೆ. ಆದ್ರೆ ಶ್ರೀಲಂಕಾ ಪ್ರವಾಸ ಭಾರತದ ಪಾಲಿಗೆ ಅಷ್ಟು ಸುಲಭವಾಗಿಲ್ಲ. 2021ರಲ್ಲಿ ಭಾರತ ತಂಡ ಕೊನೆಯ ಬಾರಿಗೆ ಶ್ರೀಲಂಕಾಕ್ಕೆ ಭೇಟಿ ನೀಡಿತ್ತು. ಏಕದಿನ ಸರಣಿಯನ್ನು ಗೆದ್ದರೂ ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋಲು ಕಾಣಬೇಕಾಯ್ತು. ಇದೆಲ್ಲದರ ನಡುವೆ ಭಾರತದ ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಆತಿಥೇಯ ತಂಡದ ನಾಯಕ ವನಿಂದು ಹಸರಂಗ ತಮ್ಮ ಸ್ಥಾನವನ್ನು ತೊರೆದಿರುವುದು ದೊಡ್ಡ ಸುದ್ದಿಯಾಗಿದೆ. ಈಗ ಟೀಂ ಇಂಡಿಯಾವನ್ನು ಎದುರಿಸುವ ಮೊದಲು ಶ್ರೀಲಂಕಾ ಹೊಸ ನಾಯಕನನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಶ್ರೀಲಂಕಾ ತಂಡ ಕೂಡ ಹೊಸ ಮುಖ್ಯ ಕೋಚ್‌ನೊಂದಿಗೆ ಕಣಕ್ಕಿಳಿಯಲಿದೆ. ಶ್ರೀಲಂಕಾದ ಹಂಗಾಮಿ ಕೋಚ್ ಆಗಿ ಹಿರಿಯ ಆಟಗಾರ ಸನತ್ ಜಯಸೂರ್ಯ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಟೀಂ ಇಂಡಿಯಾದಲ್ಲಿ ರೋಹಿತ್, ವಿರಾಟ್ ಕೊಹ್ಲಿ ಮತ್ತು ಬುಮ್ರಾರಂತಹ ಸ್ಟಾರ್ ಆಟಗಾರರು ಇರೋದಿಲ್ಲ. ಹೀಗಾಗಿ ಒಂದಷ್ಟು ಸೀನಿಯರ್ ಹಾಗೇ ಜೂನಿಯರ್ ಪ್ಲೇಯರ್ಸ್ ತಂಡಗಳಿಗೆ ಸೆಲೆಕ್ಟ್ ಆಗಲಿದ್ದಾರೆ. ಟಿ-20 ಮತ್ತು ಏಕದಿನ ಪಂದ್ಯವನ್ನ ಪ್ರತ್ಯೇಕ ನಾಯಕರು ನಿಭಾಯಿಸುತ್ತಿರೋದ್ರಿಂದ ಆಟಗಾರರ ಆಯ್ಕೆ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿದೆ.