1 ಓವರ್.. 5 ಸಿಕ್ಸ್.. ಟ್ರೋಲ್! – ಐಪಿಎಲ್ TO ಟೀಂ ಇಂಡಿಯಾ ಜರ್ನಿ
ಯಶ್ ದಯಾಳ್ ಸಕ್ಸಸ್ ಸೀಕ್ರೆಟ್ ಏನು?

1 ಓವರ್.. 5 ಸಿಕ್ಸ್.. ಟ್ರೋಲ್! – ಐಪಿಎಲ್ TO ಟೀಂ ಇಂಡಿಯಾ ಜರ್ನಿಯಶ್ ದಯಾಳ್ ಸಕ್ಸಸ್ ಸೀಕ್ರೆಟ್ ಏನು?

ಸೋಲೇ ಗೆಲುವಿನ ಸೋಪಾನ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಕ್ರಿಕೆಟರ್ ಯಶ್ ದಯಾಳ್. ಒಂದೇ ಒಂದು ಓವರ್ ಬೌಲಿಂಗ್​ನಿಂದ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಕಟು ಟೀಕೆಗೆ ಒಳಗಾಗಿ ತಂಡದಿಂದಲೇ ಹೊರ ಬಿದ್ದಿದ್ದ ಅದೇ ಆಟಗಾರ ಇಂದು ಛಲ ಬಿಡದ ತ್ರಿವಿಕ್ರಮನಂತೆ ಪಣ ತೊಟ್ಟು ಸಾಧಿಸಿ ತೋರಿಸಿದ್ದಾರೆ. ಅಂದು ಟ್ರೋಲ್ ಮಾಡಿದವ್ರೇ ಇಂದು ಅವರ ಪರ್ಫಾಮೆನ್ಸ್​ನ ಕೊಂಡಾಡ್ತಿದ್ದಾರೆ. ಐಪಿಎಲ್​ ಫ್ರಾಂಚೈಸಿಯಿಂದ ಹೊರ ಬಿದ್ದು ಅವಮಾನಗೊಂಡ್ರೂ ಈಗ ಟೀಂ ಇಂಡಿಯಾ ತಂಡಕ್ಕೆ ಸೆಲೆಕ್ಟ್ ಆಗೋ ಮೂಲಕ ಲೇವಡಿ ಮಾಡಿದವ್ರಿಗೆ ತಿರುಗೇಟು ಕೊಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಸ್ಕ್ವಾಡ್ ಅನೌನ್ಸ್ ಆಗಿದ್ದು ಯಶ್ ದಯಾಳ್ ಕೂಡ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.  ಅಷ್ಟಕ್ಕೂ ಯಶ್ ದಯಾಳ್ ಅನುಭವಿಸಿದ ಯಾತನೆ ಎಂಥಾದ್ದು? ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕ್ಯಾನ್ಸರ್‌ ಔಷಧಿ ತೆರಿಗೆ ಶೇಕಡಾ12 ರಿಂದ ಶೇಕಡಾ 5 ಕ್ಕೆ ಇಳಿಸಿದ ಸರ್ಕಾರ

ಯಶ್ ದಯಾಳ್ ಗೆ ಚಾನ್ಸ್!   

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಆರ್‌ಸಿಬಿ ತಂಡದ ಬೌಲರ್‌ ಯಶ್ ದಯಾಳ್ ಅವಕಾಶ ಪಡೆದಿದ್ದಾರೆ. ಬಹುಶಃ ಟೀಂ ಇಂಡಿಯಾಗೆ ಸೆಲೆಕ್ಟ್ ಆಗ್ತೀನಿ ಅಂತಾ ದಯಾಳ್ ಕೂಡ ಇಮ್ಯಾಜಿನ್ ಮಾಡಿರಲಿಲ್ಲ ಅನ್ಸುತ್ತೆ. ಯಾಕಂದ್ರೆ ಯಶ್‌ ದಯಾಳ್‌ ಅವರ ಹೆಸರು ಕೇಳಿದ್ರೆ ಸಾಕು ಏಪ್ರಿಲ್‌ 9, 2023ರ ಐಪಿಎಲ್‌ ಪಂದ್ಯ ಥಟ್ ಅಂತಾ ಕಣ್ಮುಂದೆ ಬರುತ್ತೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಬೌಲ್ ಮಾಡಿದ ಯಶ್ ದಯಾಳ್‌ ಎದುರಾಳಿ ಬ್ಯಾಟರ್​ಗಳಿಂದ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡಿದ್ರು. ಕೆಕೆಆರ್ ಪರ ಒಂದೇ ಓವರ್​ನಲ್ಲಿ ಐದು ಸಿಕ್ಸರ್ ಬಾರಿಸಿದ ರಿಂಕು ಸಿಂಗ್‌, ಈ ಪಂದ್ಯದ ಬಳಿಕ ರಾತೋ ರಾತ್ರಿ ಹೀರೋ ಆದರು. ಆದ್ರೆ  ಪಂದ್ಯದ ಬಳಿಕ ಯಶ್‌ ದಯಾಳ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು. ಇದ್ರಿಂದಾಗಿ ಡಿಪ್ರೆಶನ್​ಗೂ ಜಾರಿದ್ರು. ಆದರೆ ತಮ್ಮ ಕ್ರೀಡಾ ಉತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ. ಆದ್ರೆ 2023ರ ಐಪಿಎಲ್‌ ಬಳಿಕ ಗುಜರಾತ್‌ ಟೈಟನ್ಸ್ ತಂಡ ದಯಾಳ್​ರನ್ನ ಕೈ ಬಿಟ್ಟಿತ್ತು. ಈ ವೇಳೆ  ಆರ್‌ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಐದು ಕೋಟಿ ರೂಪಾಯಿ ನೀಡಿ  ಖರೀದಿ ಮಾಡಿತ್ತು. ಆಗ ಎಲ್ಲರೂ ಕೂಡ ಆರ್‌ಸಿಬಿ ಈ ನಡೆಗೆ ಟೀಕೆ ಮಾಡಿದ್ರು. ಆದ್ರೆ ದಯಾಳ್ ಮಾತ್ರ  ಆರ್‌ಸಿಬಿ ಮ್ಯಾನೇಜ್ಮೆಂಟ್‌ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ಮಾಡಿ ಡೆತ್‌ ಓವರ್ ಸ್ಪೇಷಲಿಸ್ಟ್‌ ಎನಿಸಿಕೊಂಡಿದ್ರು. ಈ ಹಿಂದೆ ಆರ್‌ಸಿಬಿಗೆ ನೀಡಿದ ಸಂದರ್ಶನ ಒಂದರಲ್ಲಿ ಯಶ್ ದಯಾಳ್, ರಿಂಕು ಬಾರಿಸಿದ ಆ ಐದು ಸಿಕ್ಸರ್ ಬಗ್ಗೆ ಮಾತ್ನಾಡಿದ್ದರು. ಆ ಓವರ್‌ನ ನಂತರ ನನ್ನ ಕುಟುಂಬ ತುಂಬಾ ದುಃಖಿತವಾಗಿ, ನನ್ನ ತಾಯಿ ತುಂಬಾ ಭಾವುಕರಾಗಿದ್ರು. ನಾನೂ ಕೂಡ ಹಲವು ದಿನಗಳ ಕಾಲ ಆಹಾರ ಸೇವಿಸಿರಲಿಲ್ಲ. ಆ ಪಂದ್ಯದ ನಂತರ ನಾನು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಬೇಕಾಯಿತು. ಇದ್ರಿಂದ ಖಿನ್ನತೆಗೆ ಒಳಗಾಗಿದ್ದೆ ಅಂತಾ ಯಶ್ ದಯಾಳ್ ಸಂದರ್ಶನವೊಂದರಲ್ಲಿ ತಾನು ಅನುಭವಿಸಿದ ಯಾತನೆ ಬಗ್ಗೆ ತಿಳಿಸಿದ್ದರು. 2023ರ ಐಪಿಎಲ್ ಬಳಿಕ ಗುಜರಾತ್ ಟೈಟನ್ಸ್​ನಿಂದ ಹೊರಬಿದ್ದ ಯಶ್ ದಯಾಳ್​ಗೆ ಭರವಸೆ ಮೂಡಿಸಿದ್ದೇ ಆರ್​ಸಿಬಿ. ಇದೇ ಕಾರಣಕ್ಕೆ 2024ರಲ್ಲಿ ಯಶ್‌ ದಯಾಳ್‌ ಅಮೋಘ ಪ್ರದರ್ಶನ ನೀಡಿದ್ರು. ಆರ್‌ಸಿಬಿ ಮ್ಯಾನೇಜ್ಮೆಂಟ್ ತಮ್ಮ ಮೇಲೆ ಇಟ್ಟಿರೋ ನಂಬಿಕೆ ಉಳಿಸಿಕೊಳ್ಬೇಕು ಅಂತಾ ಕಸರತ್ತು ನಡೆಸಿದ್ರು. ಬಳಿಕ ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಅಬ್ಬರಿಸಿ ಕಳೆದ ಐಪಿಎಲ್‌ನಲ್ಲಿ 15 ವಿಕೆಟ್​ಗಳನ್ನ ಬೇಟೆಯಾಡಿದ್ರು. ಹಾಗೇ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ರನ್‌ ಡಿಫೆಂಡ್‌ ಮಾಡಿಕೊಳ್ಳುವಲ್ಲೂ ಯಶಸ್ವಿಯಾದರು.

ಅಷ್ಟಕ್ಕೂ ಯಶ್ ದಯಾಳ್ ಭಾರತ ತಂಡಕ್ಕೆ ಆಯ್ಕೆಯಾಗೋಕೆ ಕಾರಣ ದುಲೀಪ್ ಟ್ರೋಫಿ. ಭಾರತ ಬಿ ತಂಡದ ಪರ ಕಣಕ್ಕಿಳಿದಿದ್ದ ದಯಾಳ್ ಮೊದಲ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಕಬಳಿಸಿದ್ದರು. ಇದು ಅತ್ಯುತ್ತಮವಲ್ಲದಿದ್ದರೂ ಫಸ್ಟ್ ಕ್ರಿಕೆಟ್​ನಲ್ಲಿನ ಪ್ರದರ್ಶನವನ್ನು ಪರಿಗಣಿಸಿ ದಯಾಳ್ ಅವರನ್ನು ಎಡಗೈ ವೇಗಿಯಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಯಶ್ ದಯಾಳ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಈವರೆಗೆ 24 ಪಂದ್ಯಗಳಲ್ಲಿ 44 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 4415 ಎಸೆತಗಳನ್ನು ಎಸೆದಿರುವ ಅವರು 2196 ರನ್ ನೀಡಿ 76 ವಿಕೆಟ್ ಕಬಳಿಸಿದ್ದಾರೆ. ಈ ಪ್ರದರ್ಶನವನ್ನು ಪರಿಗಣಿಸಿ ಇದೀಗ ಎಡಗೈ ವೇಗಿಯಾಗಿ 26 ವರ್ಷದ ಯಶ್ ದಯಾಳ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ದಯಾಳ್ ಟೀಮ್ ಇಂಡಿಯಾ ಪರ ಹೊಸ ಇನಿಂಗ್ಸ್ ಆರಂಭಿಸುವ ವಿಶ್ವಾಸದಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *