ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ  ಅತ್ಯಂತ ಕಲುಷಿತ ನಗರ ದೆಹಲಿ!

ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ  ಅತ್ಯಂತ ಕಲುಷಿತ ನಗರ ದೆಹಲಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ನಗರದ ನಿವಾಸಿಗಳಿಗೆ ಉಸಿರಾಡುವ ಗಾಳಿಯಿಂದಲೇ ಕಂಟಕ ಎದುರಾಗುತ್ತಿದೆ. ನೂರಾರು ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ರಾಷ್ಟ್ರರಾಜಧಾನಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಕಲುಷಿತ ವಾಯು ಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಮತ್ತೊಮ್ಮೆ ಪಾತ್ರವಾಗಿದೆ.

ಹೌದು, ಸ್ವಿಸ್ ಸಂಸ್ಥೆ IQAir 2023ನೇ ಸಾಲಿನ ವಿಶ್ವ ವಾಯು ಗುಣಮಟ್ಟ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ. ಆದರೆ ದೆಹಲಿಯು ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

ಇದನ್ನೂ ಓದಿ: ದಶಕ ಕಳೆದರೂ ಕೈಗೆ ಬಂದಿಲ್ಲ ಕಪ್..! – ನಾಲ್ಕು ಫ್ರಾಂಚೈಸಿಗಳು ಒಂದೇ ಒಂದು ಬಾರಿ ಟೂರ್ನಿಯನ್ನ ಗೆದ್ದೇ ಇಲ್ಲ

ಪ್ರತಿ ಘನ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ, ಬಾಂಗ್ಲಾದೇಶ (ಪ್ರತಿ ಘನ ಮೀಟರ್‌ಗೆ 79.9 ಮೈಕ್ರೊಗ್ರಾಂ) ಮತ್ತು ಪಾಕಿಸ್ತಾನ (73.7 ಮೈಕ್ರೋಗ್ರಾಂ ಪ್ರತಿ ಘನ ಮೀಟರ್) ನಂತರ 2023 ರಲ್ಲಿ 134 ದೇಶಗಳಲ್ಲಿ ಭಾರತವು ಮೂರನೇ-ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ.

2022 ರಲ್ಲಿ, ಪ್ರತಿ ಘನ ಮೀಟರ್‌ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು.  ಬೇಗುಸರಾಯ್ ಪ್ರತಿ ಘನ ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ನಗರವು 2022 ರ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿಲ್ಲ.

ದೇಶದಲ್ಲಿ ಅದೆಷ್ಟೋ ನಗರಗಳು ಮಾಲಿನ್ಯದಲ್ಲಿ ಮುಳುಗಿ ಹೋಗಿವೆ. ಆದರೂ ರಾಜಧಾನಿ ದೆಹಲಿ ಎಲ್ಲಾ ನಗರಗಳನ್ನೂ ಮೀರಿಸಿ ಮುನ್ನುಗ್ಗುತ್ತಿದೆ. ಅಲ್ಲಿ ವಾಸ ಮಾಡುವ ಜನಗಳಿಗೆ ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಏಕೆಂದರೆ ಅಲ್ಲಿ ಹೊಗೆ, ಮಂಜು ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ. ದೆಹಲಿ ನಿವಾಸಿಗಳ ಪೈಕಿ ಬಹುತೇಕರು ಚಳಿಗಾಲ ಬಂದಾಗ ದಕ್ಷಿಣ ಭಾರತ ಅಥವಾ ಈಶಾನ್ಯ ಭಾರತದ ಕಡೆ ಪ್ರಯಾಣ ಬೆಳೆಸುತ್ತಾರೆ. ಇದೀಗ ಈ ವರದಿಯಲ್ಲಿ ಶಾಕಿಂಗ್‌ ವಿಚಾರ ಬಯಲಾಗಿದ್ದು, ದೆಹಲಿ ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

Shwetha M