ಹಣವಿಲ್ಲದೆ ಪರದಾಡುತ್ತಿದ್ದಾರೆ ಭಾರತದ ನಂಬರ್ 1 ಟೆನ್ನಿಸ್ ತಾರೆ – ಟೆನ್ನಿಸ್ ಆಟಗಾರರಿಗೆ ಭಾರತದಲ್ಲಿ ಬೆಲೆಯೇ ಇಲ್ವಾ..?

ಹಣವಿಲ್ಲದೆ ಪರದಾಡುತ್ತಿದ್ದಾರೆ ಭಾರತದ ನಂಬರ್ 1 ಟೆನ್ನಿಸ್ ತಾರೆ – ಟೆನ್ನಿಸ್ ಆಟಗಾರರಿಗೆ ಭಾರತದಲ್ಲಿ ಬೆಲೆಯೇ ಇಲ್ವಾ..?

ನಮ್ಮ ದೇಶದ ದೊಡ್ಡ ದುರಂತ ಅಂದರೆ ಕ್ರಿಕೆಟ್​​ ಬಿಟ್ಟರೆ ಇನ್ನು ಯಾವ ಕ್ರೀಡೆಗೂ ಅಷ್ಟೊಂದು ಉತ್ತೇಜನ ಸಿಗುತ್ತಿಲ್ಲ. ಜನರಿಗೂ ಅಷ್ಟೇ ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳ ಬಗ್ಗೆ ಅಷ್ಟಾಗಿ ಆಸಕ್ತಿಯೂ ಇಲ್ಲ. ಇದರ ಪರಿಣಾಮ ನಮ್ಮಲ್ಲಿ ಕೆಲ ಕ್ರೀಡೆ ಮತ್ತು ಕ್ರೀಡಾಪಟುಗಳು ದುಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಹರಿಯಾಣ ಮೂಲದ ಸುಮಿತ್ ನಗಾಲ್ ಸದ್ಯ ಭಾರತದ ನಂಬರ್ 1 ಟೆನ್ನಿಸ್ ಆಟಗಾರನೇ ಸಾಕ್ಷಿ.

ಇದನ್ನೂ ಓದಿ: ಶಾಹೀನ್ ಅಫ್ರಿದಿ ಮದುವೆಯಲ್ಲಿ ನಾಯಕ ಬಾಬರ್ ಅಝಂ – ನಮ್ಮ ನಡುವೆ ಯಾವ ಮನಸ್ತಾಪವೂ ಇಲ್ಲ ಎಂದು ತೋರಿಸಿಕೊಟ್ಟ ಪಾಕ್ ಕ್ರಿಕೆಟಿಗರು

ಸುಮಿತ್ ನಗಾಲ್, ತಮ್ಮ ಕೈಯಿಂದ ಹಣ ಹಾಕಿ ಭಾರತದ ಪರ ಎಟಿಪಿ ಟೂರ್ನಿಗಳಲ್ಲಿ ಆಡಲು ಪ್ರಯಾಣ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಎಟಿಪಿ ಟೂರ್ನಿ ಪ್ರವೇಶ ಶುಲ್ಕವನ್ನ ಕೂಡ ತಾವೇ ಭರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸ್ವಂತ ಖರ್ಚಿನಲ್ಲೇ ವಿದೇಶಗಳಲ್ಲಿ ಕೋಚಿಂಗ್ ಪಡೆದಿದ್ದರು. ಆದರೆ ದೇಶವನ್ನ ಪ್ರತಿನಿಧಿಸುತ್ತಿರುವ ಸುಮಿತ್ ನಗಾಲ್​ ಬ್ಯಾಂಕ್​ ಅಕೌಂಟ್​ನಲ್ಲಿ ಈಗ ಒಂದು ಲಕ್ಷ ರೂಪಾಯಿ ಕೂಡ ಇಲ್ಲ. ಇದರಿಂದ ನನಗೆ ಸರಿಯಾಗಿ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಅಂತಾ ಸುಮಿತ್ ನಗಾಲ್ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಹಣದ ಕೊರತೆಯಿಂದ ವಿದೇಶದಲ್ಲಿ ತರಬೇತಿ ಪಡೆಯಲು ಆಗುತ್ತಿಲ್ಲ ಎಂದಿದ್ದಾರೆ. ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ಸುಮಿತ್ ಜರ್ಮನಿಯಲ್ಲಿ ತರಬೇತಿ ಪಡೆಯುವಾಗ ಅಲ್ಲಿ ಉಳಿದುಕೊಳ್ಳಲು ಬೇಕಾದ ಖರ್ಚಿನ ಹಣವನ್ನ ಭಾರತದ ಮತ್ತೋರ್ವ ಟೆನ್ನಿಸ್ ಆಟಗಾರ ಸೋಮ್​ದೇವ್​ ದೇವ್​​ವರ್ಮನ್ ಭರಿಸಿದ್ದರು. ಈ ಮೂಲಕ ಸ್ನೇಹಿತನಿಗೆ ಸಹಾಯ ಮಾಡಿದ್ದರು. ಆದರೆ, ಈಗ ಮುಂದಿನ ದಿನಗಳಲ್ಲಿ ತರಬೇತಿ ಪಡೆಯೋದು ಬಿಡಿ, ಎಟಿಪಿ ಟೂರ್ನಿ ಆಡೋಕೆ ಕಟ್ಟಬೇಕಿರುವ ಫೀಸ್​ಗೆ ಕೂಡಾ ಸುಮಿತ್ ಬಳಿ ಹಣ ಇಲ್ಲ. ಭಾರತೀಯ ಟೆನ್ನಿಸ್​ ಬೋರ್ಡ್ ಆಟಗಾರರಿಗೆ ಯಾವುದೇ ಹಣಕಾಸು ನೆರವು ನೀಡುವುದಿಲ್ಲ. ಕ್ರಿಕೆಟ್​ನಲ್ಲಿ ಆಟಗಾರರ ಎಲ್ಲಾ ಖರ್ಚು ವೆಚ್ಚಗಳನ್ನೂ ಬಿಸಿಸಿಐ ಭರಿಸುತ್ತೆ. ಆದರೆ, ನಮ್ಮ ಟೆನ್ನಿಸ್​ ಪ್ಲೇಯರ್​​ಗಳು ಕೈಯಿಂದ ಹಣ ಹಾಕಿ, ಟೂರ್ನಿ ಗೆದ್ದು, ಅಲ್ಲಿ ಸಿಕ್ಕ ಹಣದಿಂದ ಜೀವನ ಸಾಗಿಸಬೇಕು. ಹೀಗೆಯೇ ಅವರು ಕೆರಿಯರ್ ಕಂಟಿನ್ಯೂ ಮಾಡುತ್ತಿದ್ದಾರೆ. ಅವರು ಮಹತ್ವದ ಟೂರ್ನಿ ಗೆದ್ದಾಗ ಮಾತ್ರ ದೇಶವನ್ನಾಳುವ ನಾಯಕರು, ಫೋನ್‌ ಮಾಡಿ ಅಭಿನಂದನೆ ಸಲ್ಲಿಸಿ, ಟ್ವಿಟರ್‌ನಲ್ಲಿ ಹಾಡಿಹೊಗಳುತ್ತಿರುತ್ತಾರೆ.. ಆದರೆ, ನಿಜಕ್ಕೂ ಪ್ರೋತ್ಸಾಹ ಸಿಗಬೇಕಾದ ಜಾಗದಲ್ಲಿ ಮಾತ್ರ ಟೆನ್ನಿಸ್‌ನಂತಹ ಜಾಗತಿಕ ಮನ್ನಣೆ ಹೊಂದಿರುವ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಆಟಗಾರರು ಪರದಾಡುವಂತಾಗಿರುವುದು ವಿಪರ್ಯಾಸ..

Sulekha