ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಟೆಸ್ಟ್ ಸರಣಿ ಕ್ಲೀನ್ ಸ್ವೀಪ್

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಟೆಸ್ಟ್ ಸರಣಿ ಕ್ಲೀನ್ ಸ್ವೀಪ್

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನ ಭಾರತ ಗೆದ್ದು ಬೀಗಿದೆ. ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಇದೀಗ ದ್ವಿತೀಯ ಪಂದ್ಯದಲ್ಲೂ ಜಯಭೇರಿ ಬಾರಿಸಿದೆ.

ಇದನ್ನೂ ಓದಿ:IND Vs WI.. 5ನೇ ದಿನಕ್ಕೆ ಮ್ಯಾಚ್ – ಜಾನ್ & ಹೋಪ್ ಅಬ್ಬರಕ್ಕೆ IND ಶೇಕ್

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯನ್ನ ಭಾರತ ಗೆದ್ದಿದೆ. ಎರಡನೇ ಮತ್ತು ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯನ್ನ 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಪಂದ್ಯದ ಐದನೇ ಮತ್ತು ಕೊನೆಯ ದಿನದಂದು ಗೆಲುವಿಗಾಗಿ ಕೇವಲ 58 ರನ್‌ಗಳಿಸಬೇಕಿತ್ತು. ನಾಲ್ಕನೇ ದಿನ 1 ವಿಕೆಟ್ ಕಳೆದುಕೊಂಡು 63 ರನ್​ಗಳಿಸಿತ್ತು. 5ನೇ ದಿನ ಮತ್ತೆರಡು ವಿಕೆಟ್ ಕಳೆದುಕೊಂಡಿತು. ಕನ್ನಡಿಗ ಕೆಎಲ್ ರಾಹುಲ್​ ಅಜೇಯ ಅರ್ಧಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

4ನೇ ದಿನದಾಟದ ಅಂತ್ಯಕ್ಕೆ 30 ರನ್​ಗಳಿಸಿ ಅಜೇಯರಾಗಿ ಉಳಿದಿದ್ದ ಸಾಯಿ ಸುದರ್ಶನ್​ ಇಂದು ಕೇವಲ 7 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. 76 ಎಸೆತಗಳನ್ನೆದುರಿಸಿದ ಸಾಯಿ 5 ಬೌಂಡರಿಗಳ ಸಹಿತ 37 ರನ್​ಗಳಿಸಿ ರೋಸ್ಟನ್ ಚೇಸ್ ಬೌಲಿಂಗ್​​ನಲ್ಲಿ ಹೋಪ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಾಯಕ ಗಿಲ್ ಹೊಡಿ ಬಡಿ ಆಟಕ್ಕೆ ಮುಂದಾಗಿ ಕೇವಲ 15 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸೇರಿ 13 ರನ್​ಗಳಿಸಿ ಚೇಸ್​ಗೆ 2ನೇ ಬಲಿಯಾದರು. ಆದರೆ ಕೆಎಲ್ ರಾಹುಲ್ ಹಾಗೂ ಜುರೆಲ್ ಯಾವುದ ತಪ್ಪೆಸಗದೇ ಭಾರತವನ್ನ ಗೆಲುವಿನ ಗಡಿ ದಾಟಿಸಿದರು. ಆಕರ್ಷಕ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 108 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 58 ರನ್​ಗಳಿಸಿದರೆ, ಜುರೆಲ್ 6 ಎಸೆತಗಳಲ್ಲಿ 6 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಈ ಟೆಸ್ಟ್ ಪಂದ್ಯವು ನಾಲ್ಕನೇ ದಿನದಂದು ಕೊನೆಗೊಳ್ಳಬೇಕಿತ್ತು, ಆದರೆ ವೆಸ್ಟ್ ಇಂಡೀಸ್ 10ನೇ ವಿಕೆಟ್​ ತೋರಿದ ಅದ್ಭುತ ಬ್ಯಾಟಿಂಗ್‌ನಿಂದಾಗಿ, ಭಾರತ ತನ್ನ ಗೆಲುವಿಗಾಗಿ ಐದನೇ ದಿನಕ್ಕೆ ಹೋಗುವಂತಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 518 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರವಾಸಿ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ನಂತರ ಭಾರತ ಫಾಲೋ-ಆನ್ ಅನ್ನು ಜಾರಿಗೊಳಿಸಿತು. 2ನೇ ಇನ್ನಿಂಗ್ಸ್​​ನಲ್ಲಿ ಕೊಂಚ ಪ್ರತಿರೋಧ ತೋರಿದ ವೆಸ್ಟ್ ಇಂಡೀಸ್ ತಂಡ 390 ರನ್ ಗಳಿಸಿ ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಿತು. ಭಾರತ ಈ ಸಾಧಾರಣ ಗುರಿಯನ್ನ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

Sulekha