ಉಪಗ್ರಹ ಉಡಾವಣೆ ಮಾಡಲು ಅಮೆರಿಕದ ಮೊರೆ ಹೋಯ್ತಾ ಇಸ್ರೋ?
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ 3 ಸಕ್ಸಸ್ ಕಂಡಿದೆ. ಇಡೀ ವಿಶ್ವವೇ ಇಸ್ರೋದತ್ತ ತಿರುಗಿ ನೋಡುವಂತೆ ಆಗಿದೆ. ‘ಇಸ್ರೋ’ ಸಂಸ್ಥೆ ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ದೇಶಗಳು ಕೂಡ ಭಾರತದ ‘ಇಸ್ರೋ’ ಸಂಸ್ಥೆ ಮೂಲಕ ತಮ್ಮ ತಮ್ಮ ಉಪಗ್ರಹ ಉಡಾವಣೆ ಮಾಡುತ್ತಿವೆ. ಆದ್ರೆ ಇದೀಗ ಇಸ್ರೋ ಉಪಗ್ರಹ ಉಡಾವಣೆ ಮಾಡಲು ಅಮೆರಿಕದ ಸಹಾಯ ಕೇಳಿದ್ಯಂತೆ. ಭಾರತದ ಸಂಪರ್ಕ ಉಪಗ್ರಹವಾದ ಜಿಸ್ಯಾಟ್-20 ಉಪಗ್ರಹದ ಉಡಾವಣೆಗಾಗಿ ಇದೇ ಮೊದಲ ಬಾರಿಗೆ ಸ್ಪೇಸ್‌ಎಕ್ಸ್ ಸಂಸ್ಥೆಯ ಫಾಲ್ಕನ್- 9 ರಾಕೆಟನ್ನು ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ಅವಳಿ ಬಾಂಬ್ ಸ್ಫೋಟ – 100ಕ್ಕೂ ಅಧಿಕ ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾಹಿತಿ ನೀಡಿದ್ದು, ಸುಮಾರು 230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಹೆಗ್ಗಳಿಕೆ ಫಾಲ್ಕನ್-9 ರಾಕೆಟ್‍ನದ್ದಾಗಿದೆ. ಸೂಕ್ತ ಸಮಯದಲ್ಲಿ ಬೇರೆ ರಾಕೆಟ್‍ಗಳು ಲಭ್ಯವಿಲ್ಲದೇ ಇರುವುದರಿಂದ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಾಕೆಟ್ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಇಸ್ರೋದಿಂದ ವಾಣಿಜ್ಯ ಉಡಾವಣೆಗಳನ್ನು ನಡೆಸುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಏನಿದು ಜಿಸ್ಯಾಟ್-20 ಉಪಗ್ರಹ?
ಪ್ರಪಂಚದಾದ್ಯಂತ ಉಪಗ್ರಹ ಆಧಾರಿತ ಇಂಟರ್ನೆಟ್ ವ್ಯವಸ್ಥೆ ಜನಪ್ರಿಯವಾಗುತ್ತಿದೆ. ಈ ಹೊತ್ತಿನಲ್ಲಿ ಭಾರತದ ಎಲ್ಲಾ ಪ್ರದೇಶಗಳಿಗೂ ಇಂಟರ್‍ನೆಟ್ ಸೌಲಭ್ಯ ತಲುಪುವಂತೆ ಮಾಡಲು ಇಸ್ರೋ ತಯಾರಿಸಿದ ಸಂಪರ್ಕ ಉಪಗ್ರಹವೇ ಜಿಸ್ಯಾಟ್-20. ಇದು ಸೆಕೆಂಡಿಗೆ 48 ಜಿಬಿ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲಿದೆ.