ಭಾರತದ ಆರ್ಥಿಕ ಬೆಳವಣಿಗೆ ಕುಂಠಿತ! – ಎಕನಾಮಿಕ್ ಸರ್ವೆ ಏನ್ ಹೇಳುತ್ತೆ?
ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ. ಅದರ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6ರಿಂದ ಶೇ. 6.8ರಷ್ಟು ಅಭಿವೃದ್ಧಿ ಸಾಧಿಸಬಹುದು. ಆದರೆ ಇದು ಕಳೆದ ಮೂರು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆ ಎಂದು ವರದಿಯಾಗಿದೆ.
ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರಮ್ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಜಾಗತಿಕವಾಗಿ ಇತರ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಇನ್ನು ಉತ್ತಮವಾಗಿದೆ ಎಂದು ಈ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?
ದೇಶದಲ್ಲಿ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗಿ ಮುಂದಿನ ಮಾರ್ಚ್ 31ರವರೆಗೂ ಇರುತ್ತದೆ. ಕೇಂದ್ರ ಸರ್ಕಾರ ಪ್ರಸ್ತುತಪಡಿಸುವ ಬಜೆಟ್ ಇದೇ ಹಣಕಾಸು ವರ್ಷದ ಆಯವ್ಯಯ ಪತ್ರವಾಗಿರುತ್ತದೆ. ಇದು 2022-23 ಮತ್ತು 2023-24ರ ಹಣಕಾಸು ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜು ಲೆಕ್ಕಾಚಾರಗಳನ್ನು ಪಟ್ಟಿ ಮಾಡಿದೆ.
ಈ ಸಮೀಕ್ಷೆ ದೇಶದ ಆರ್ಥಿಕತೆ ಬಗ್ಗೆ ಅಧಿಕೃತ ರಿಪೋರ್ಟ್ ಕಾರ್ಡ್ ಆಗಿರುತ್ತದೆ. ಎರಡು ಭಾಗಗಳಲ್ಲಿ ಸಿದ್ಧವಾಗಿರುವ ಈ ವರದಿಯು ಈಗಿನ ಆರ್ಥಿಕ ಪರಿಸ್ಥಿತಿ, ಭವಿಷ್ಯದ ಸ್ಥಿತಿ ಮತ್ತು ಆರ್ಥಿಕ ನೀತಿಗಳಲ್ಲಿನ ಬದಲಾವಣೆ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಹಣದುಬ್ಬರ ಸ್ಥಿತಿ, ಫಾರೆಕ್ಸ್ ಮೀಸಲು, ವ್ಯಾಪಾರ ಅಂತರ ಇತ್ಯಾದಿ ಬಗ್ಗೆ ಮಾಹಿತಿ ಮತ್ತು ಅಂದಾಜು ಮಾಡಲಾಗುತ್ತದೆ. ನಿಗದಿತ ಕಾಲಮಾನದಲ್ಲಿ ಯಾವ ಯಾವ ವಲಯದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಕೈಗೊಳ್ಳಬೇಕೆಂದು ಸಲಹೆಗಳು ಇದರಲ್ಲಿ ಇರುತ್ತವೆ. ಕೇಂದ್ರದ ಬಜೆಟ್ ಯಾವ ರೀತಿ ಇರಲಿದೆ ಎಂಬುದಕ್ಕೆ ಈ ಆರ್ಥಿಕ ಸಮೀಕ್ಷೆಯೂ ಒಂದು ರೀತಿಯಲ್ಲಿ ದಿಕ್ಸೂಚಿಯಂತಿರುತ್ತದೆ. ಹಾಗೆಯೇ, ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ, ಮಾನವ ಅಭಿವೃದ್ಧಿ, ಹವಾಮಾನ ಇತ್ಯಾದಿ ನಿರ್ದಿಷ್ಟ ವಿಚಾರಗಳ ಬಗೆಗಿನ ವಿವರಗಳು ವರದಿಯಲ್ಲಿ ಉಲ್ಲೇಖವಾಗಿರುತ್ತದೆ.