ಕ್ರಿಕೆಟ್ ನಲ್ಲಿ ಪಾಕ್ ನಂತಾದ ಆಸಿಸ್.. ಕೊಹ್ಲಿ ಗೇಲಿ.. ಬುಮ್ರಾ ಕೌಂಟರ್ – ಮಂಕಿ ಗೇಟ್ ನಿಂದ ಡಿಕ್ಕಿ ತನಕ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮ್ಯಾಚ್ನಲ್ಲಿ ಭಾರತ ಸೋತಾಗಿದೆ. ಟೀಂ ಇಂಡಿಯಾ ಬ್ಯಾಟರ್ಗಳ ಫ್ಲ್ಯಾಪ್ ಶೋನಿಂದಾಗಿಯೇ ತಂಡ ಸೋತಿರೋದು. ಆದ್ರೆ ಭಾರತದ ಪಾಲಿಗೆ ಈ ಪಂದ್ಯ ಬರೀ ಪಂದ್ಯ ಆಗಿರಲಿಲ್ಲ. ಪ್ರತಿಷ್ಠೆ, ಅವಮಾನಕ್ಕೆ ಸೇಡು, ತಂಡದ ಸ್ಟ್ರೆಂಥ್, ಆಸಿಸ್ ಫ್ಯಾನ್ಸ್ ಗೆ ತಿರುಗೇಟು ಹೀಗೆ ಒಂದೇ ಒಂದು ಗೆಲುವಿನಿಂದ ಈ ಎಲ್ಲಾ ಟೀಕೆಗಳಿಗೂ ಉತ್ತರ ಕೊಡ್ಬೇದಿತ್ತು. ನಾಲ್ಕನೇ ಪಂದ್ಯದ ವೇಳೆ ಭಾರತ ಅದೆಷ್ಟು ಅವಮಾನಗಳನ್ನ ಎದುರಿಸಿತ್ತು? ಆಸಿಸ್ ಫ್ಯಾನ್ಸ್ ಮಾಡಿದ ಟೀಕೆಗಳೆಷ್ಟು? ಮಂಕಿಗೇಟ್ ಪ್ರಕರಣ ಮತ್ತೆ ಸದ್ದು ಮಾಡಿದ್ದೇಕೆ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಂತೆಯೇ ಬದಲಾಗಿದ್ದೇಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸುಪ್ರೀಂನಲ್ಲಿ ದಚ್ಚು ಪವಿ ಲಾಕ್ – ಖಾಕಿ ಮೇಲ್ಮನವಿಯಲ್ಲಿ ಏನಿದೆ?
ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕೊನ್ಸ್ಟಾಸ್ ನಡುವೆ ಭುಜಬಲ ಗುದ್ದಾಟ.. ಟ್ರಾವಿಸ್ ಹೆಡ್ ಮತ್ತು ಸಿರಾಜ್ ನಡುವೆ ವಿಕೆಟ್ ಫೈಟ್.. ಆಸಿಸ್ ಅಭಿಮಾನಿಗಳ ಅತಿರೇಖದ ವರ್ತನೆ.. ವಿರಾಟ್ ಕೊಹ್ಲಿ ಕಂಡಲ್ಲೆಲ್ಲಾ ಲೇವಡಿ.. ಕ್ಯಾಪ್ಟನ್ ರೋಹಿತ್ ಶರ್ಮಾಗೂ ಕಿಂಡಲ್.. ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಮೂರು ಪಂದ್ಯಗಳು ನಾರ್ಮಲ್ ಆಗಿ ಮುಗಿದ್ರೆ ನಾಲ್ಕನೇ ಪಂದ್ಯ ಹೈವೋಲ್ಟೇಜ್ ಅಖಾಡವಾಗಿ ಮಾರ್ಪಟ್ಟಿತ್ತು. ಆಸಿಸ್ ಫ್ಯಾನ್ಸ್ ಅಂತು 4ನೇ ಆಟವನ್ನ ತೀರಾ ಪರ್ಸನಲ್ ಆಗಿ ತಗೊಂಡು ಟ್ರಿಗರ್ ಮಾಡಿದ್ದಾರೆ.
ಕೊಹ್ಲಿ ಔಟ್ ಆಗಿದ್ದಾಗ ಸಂಭ್ರಮಿಸಿದ್ದ ಸ್ಯಾಮ್ ಗೆ ಬುಮ್ರಾ ಕೌಂಟರ್!
ಮೆಲ್ಬೋರ್ನ್ನ ಪಂದ್ಯದಲ್ಲಿ ಫಸ್ಟ್ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕೊನ್ ಸ್ಟಾಸ್ ನಡುವೆ ಜಟಾಪಟಿ ನಡೆದಿತ್ತು. ಸ್ಯಾಮ್ ಗೆ ವಿರಾಟ್ ಡಿಕ್ಕಿ ಹೊಡೆದಿದ್ದು ಸಾಕಷ್ಟು ವಿವಾದವಾಗಿತ್ತು. ಬಟ್ ಈ ಇನ್ನಿಡೆಂಟ್ ಬಳಿಕ ವಿರಾಟ್ ಕೊಹ್ಲಿ ಔಟ್ ಆದಾಗ ಸೆಲೆಬ್ರೇಟ್ ಮಾಡುವಂತೆ ಸ್ಯಾಮ್ಸ್ ಅಭಿಮಾನಿಗಳಿಗೆ ಸಹ್ನೆ ಮಾಡಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಬಂದ ಸ್ಯಾಮ್ನನ್ನ ಜಸ್ಪ್ರೀತ್ ಬುಮ್ರಾ 8 ರನ್ಗಳಿಗೆ ಬೌಲ್ಡ್ ಮಾಡಿದ್ರು. ಈ ವೇಳೆ ಸೇಮ್ ಟು ಸೇಮ್ ಸ್ಯಾಮ್ ಸ್ಟೈಲಲ್ಲೇ ಸೆಲೆಬ್ರೇಟ್ ಮಾಡುವಂತೆ ಫ್ಯಾನ್ಸ್ ಗೆ ಕೈಸಹ್ನೆ ಮಾಡಿದ್ದರು.
ಪಂತ್ ವಿಕೆಟ್.. ಅಶ್ಲೀಲವಾಗಿ ಸಂಭ್ರಮಿಸಿದ ಟ್ರಾವಿಸ್ ಹೆಡ್!
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಕೂಡ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇವತ್ತು ಔಟ್ ಆದಾಗ ವಿಚಿತ್ರವಾಗಿ ಸೆಲೆಬ್ರೇಟ್ ಮಾಡಿದ್ದಾರೆ. 4ನೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟ್ರಾವಿಸ್ ಹೆಡ್ ಎಸೆದ 59ನೇ ಓವರ್ನ 4ನೇ ಎಸೆತದಲ್ಲಿ ರಿಷಭ್ ಪಂತ್ ಹೊಡೆದ ಬಾಲ್ ನ ಪ್ಯಾಟ್ ಕಮಿನ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದ್ರು. ಇತ್ತ ಪಂತ್ ಔಟ್ ಆಗುತ್ತಿದ್ದಂತೆ ಟ್ರಾವಿಸ್ ಹೆಡ್ ಬೆರಳಿನೊಂದಿಗೆ ವಿಚಿತ್ರವಾಗಿ ಸಂಭ್ರಮಿಸಿದ್ದಾರೆ. ಕೆಲವ್ರು ಇದನ್ನ ಅಶ್ಲೀಲ ಅಂದಿದ್ರೆ ಇನ್ನೊಂದಷ್ಟು ಜನ ಐಸ್ ಫಿಂಗರ್ ಸೆಲೆಬ್ರೇಷನ್ ಅಂತಾ ಸಮರ್ಥನೆ ಮಾಡ್ಕೊಂಡಿದ್ದಾರೆ. ಬಟ್ ಇದು ಹೆಡ್ ಅವ್ರ ಅಶ್ಲೀಲ ವರ್ತನೆಯಾಗಿದ್ರೆ ಐಸಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ.
ವಿರಾಟ್ ಕೊಹ್ಲಿಯನ್ನ ಕ್ರೈಬೇಬಿ, ವೈಟ್ ಡಾಗ್ ಎಂದ ಆಸಿಸ್ ಫ್ಯಾನ್ಸ್!
ಇನ್ನು ಸ್ಯಾಮ್ಸ್ ಕೊನ್ಸ್ಟಾಸ್ ಜೊತೆಗಿನ ಕಿರಿಕ್ ಬಳಿಕ ವಿರಾಟ್ ಕೊಹ್ಲಿಯನ್ನ ಆಸ್ಟ್ರೇಲಿಯಾ ಫ್ಯಾನ್ಸ್ ಟಾರ್ಗೆಟ್ ಮಾಡಿದ್ರು. ಪಂದ್ಯ ಆಡುವಾಗ ಮತ್ತೆ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗಲೂ ಟ್ರಿಗರ್ ಆಗುವಂತೆ ಮಾಡಿದ್ರು. ಗ್ಯಾಲರಿಯಲ್ಲಿ ಕುಳಿತು ಕೊಹ್ಲಿ ಈಸ್ ಎ ವೈಟ್ ಡಾಗ್ ಅಂತಾ ಕೂಗಿಕೊಂಡಿದ್ರು. ಹಾಗೇ ಔಟ್ ಆಗಿ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಕೊಹ್ಲಿ ಈಸ್ ಎ ಕ್ರೈಯಿಂಗ್ ಬೇಬಿ ಅಂತಾ ಅಣಕಿಸಿದ್ದರು. ಈ ವೇಳೆ ಕೊಹ್ಲಿ ಕೂಡ ವಾಪಸ್ ಬಂದು ದುರುಗುಟ್ಟಿ ನೋಡಿದ್ದರು.
ಇನ್ನು ಫೀಲ್ಡಿಂಗ್ ವೇಳೆ ಬೌಂಡರಿ ಲೈನ್ ಆಚೆ ಬಂದು ವಿರಾಟ್ ಕೊಹ್ಲಿ ಚ್ಯುಯಿಂಗ್ ಗಮ್ ಉಗಿದಿದ್ರು. ಇದೂ ಕೂಡ ತಮಗೇ ಉಗಿದಿದ್ದು ಅಂತಾ ಆಸಿಸ್ ಫ್ಯಾನ್ಸ್ ಸಿಟ್ಟಾಗಿದ್ರು. ಹೀಗೆ ನಾಲ್ಕನೇ ಪಂದ್ಯದಲ್ಲೇ ಸಾಕಷ್ಟು ಗಲಾಟೆ ಗದ್ದಲಗಳು ನಡೆದಿದ್ವು. ಹೀಗಾಗೇ ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಅಂದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಎನ್ನುವಂತಾಗ್ತಿದೆ. 2008ರ ಮಂಕಿ ಗೇಟ್ ಪ್ರಕರಣ ಮತ್ತೆ ಸದ್ದು ಮಾಡ್ತಿದೆ.
2008ರ ಮಂಕಿಗೇಟ್ ಪ್ರಕರಣ ಇನ್ನೂ ಮಾಸಿಲ್ಲ!
16 ವರ್ಷ. ಈ ಘಟನೆ ನಡೆದು 16 ವರ್ಷಗಳೇ ಕಳೆದಿವೆ. ಆದ್ರೆ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರ ಆ ಒಂದು ಘಟನೆ ಮರೆಯೋಕೆ ಸಾಧ್ಯನೇ ಇಲ್ಲ. 2008ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಸಿಡ್ನಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ ರಣರೋಚಕ ಘಟ್ಟದತ್ತ ಸಾಗಿತ್ತು. ಗೆಲುವಿಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಹೀಗಿರುವಾಗಲೇ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೊ ಸೈಮಂಡ್ಸ್ ನಡುವೆ ಮಾತಿಕ ಚಕಮಕಿ ನಡೆದಿತ್ತು. ಆರಂಭದಲ್ಲಿ ಸ್ಲೆಡ್ಜಿಂಗ್ ರೂಪದಲ್ಲಿ ನಡೆದ ಆಟಗಾರರ ನಡುವಿನ ವಾಕ್ಸಮರ ಆನಂತರದಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಂಡಿತ್ತು.
ಸೈಮಂಡ್ಸ್ ರನ್ನು ಮಂಕಿ ಎಂದು ಕರೆದಿದ್ರಾ ಹರ್ಭಜನ್ ಸಿಂಗ್?
ಆವತ್ತು ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೊ ಸೈಮಂಡ್ಸ್ ನಡುವೆ ನಡೆದ ಕಿತ್ತಾಟ ಮಂಕಿ ಗೇಟ್ ಪ್ರಕರಣ ಎಂದೇ ಕ್ರಿಕೆಟ್ನಲ್ಲೇ ಹೆಸರಾಗಿದೆ. ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ತಮ್ಮನ್ನು ಮಂಕಿ ಎಂದು ಕರೆದು ಅವಮಾನಿಸಿದ್ದಾರೆಂದು ಆಸೀಸ್ ಆಟಗಾರ ಸೈಮಂಡ್ಸ್ ರಂಪಾಟ ಮಾಡಿದ್ದರು. ಹರ್ಭಜನ್ ನನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾರೆಂದು ಸೈಮಂಡ್ಸ್ ಆರೋಪಿಸಿದ್ದರು. ಮರುದಿನದ ಪ್ರತಿಕೆಗಳಲ್ಲಿ ಇದೇ ದೊಡ್ಡ ಸುದ್ದಿ. ಟೀಂ ಇಂಡಿಯಾದ ಆಟಗಾರ ಆಸೀಸ್ ಆಟಗಾರರನ್ನು ಮಂಗ ಎಂದು ನಿಂದಿಸಿದ್ದಾಗಿ ಬಹುದೊಡ್ಡ ಸುದ್ದಿಯಾಗಿತ್ತು. ವಿಶ್ವಕ್ರಿಕೆಟ್ ನಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಬಟ್ ಇಂಥಾ ಟೈಮಲ್ಲೂ ಬಿಸಿಸಿಐ ಟೀಂ ಇಂಡಿಯಾ ಆಟಗಾರರನ್ನ ಬಿಟ್ಟುಕೊಟ್ಟಿರಲಿಲ್ಲ. ಬಟ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಐಸಿಸಿ ಎಂಟ್ರಿ ಕೊಟ್ಟಿತ್ತು.
ಭಜ್ಜಿಗೆ ನಿಷೇಧ.. ಆಟಗಾರರ ಸಾಕ್ಷ್ಯ.. ಮುಂದೇನು?
ಯಾವಾಗ ಸೈಮಂಡ್ಸ್ ವಿರುದ್ಧದ ಜನಾಂಗೀಯ ನಿಂದನೆ ಆರೋಪ ಹಲ್ಚಲ್ ಎಬ್ಬಿಸಿತೋ ಹರ್ಭಜನ್‍ಗೆ ಮ್ಯಾಚ್ ರೆಫರಿ 3 ಪಂದ್ಯಗಳ ನಿಷೇಧ ಹೇರಿದ್ದರು. ಈ ವೇಳೆ ಹರ್ಭಜನ್ ಯಾವುದೇ ತಪ್ಪು ಮಾಡಿಲ್ಲವೆಂದು ಟೀಂ ಇಂಡಿಯಾ ಆಟಗಾರರು ‘ಬಜ್ಜಿ’ಗೆ ಸಪೋರ್ಟ್ ಮಾಡಿದ್ರು. ಇಷ್ಟಕ್ಕೇ ಸುಮ್ಮನಾಗದೇ ಒಂದು ವೇಳೆ ಹರ್ಭಜನ್‍ಗೆ ನಿಷೇಧ ಹೇರಿದರೆ ಟೂರ್ನಿಯಿಂದಲೇ ಹಿಂದೆ ಸರಿಯೋದಾಗಿ ಟೀಂ ಇಂಡಿಯಾ ಎಚ್ಚರಿಕೆ ನೀಡಿತ್ತು. ಬಳಿಕ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಕೆಲ ಆಟಗಾರರಿಂದ ಸಾಕ್ಷ್ಯ ತೆಗೆದುಕೊಳ್ಳಲಾಯಿತು. ಅಂತಿಮವಾಗಿ ‘ಬಜ್ಜಿ’ಗೆ ಹೇರಲಾಗಿದ್ದ ನಿಷೇಧ ಹಿಂಪಡೆದು ಅವರಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಯ್ತು. ಆ ಟೈಲಲ್ಲಿ ಆಸ್ಟ್ರೇಲಿಯಾ ಟೀಮ್ನ ಕ್ಯಾಪ್ಟನ್ ಆಗಿದ್ದದ್ದು ರಿಕಿ ಪಾಂಟಿಂಗ್. ತಮ್ಮ ಕ್ಯಾಪ್ಟನ್ಸಿಯಲ್ಲಿ ಆಗಿದ್ದ ಈ ಘಟನೆಯನ್ನ ತಮ್ಮ ಜೀವನದ ಅತ್ಯಂತ ಕೆಟ್ಟ ಗಳಿಗೆ ಎಂದು ಪಾಂಟಿಂಗ್ ಹೇಳಿಕೊಂಡಿದ್ರು.
2018ರಲ್ಲೂ ಭಜ್ಜಿ & ಸೈಮಂಡ್ಸ್ ನಡುವೆ ಕ್ಷಮೆ ವಿವಾದ!
ಮಂಕಿ ಗೇಟ್ ಪ್ರಕರಣ ನಡೆದಿದ್ದು 2008ರಲ್ಲೇ ಆದ್ರೂ 2018ರಲ್ಲಿ ಮತ್ತೊಮ್ಮೆ ಸದ್ದು ಮಾಡಿತ್ತು. ಆವತ್ತು ಕಿಡಿ ಹೊತ್ತಿಸಿದ್ದು ಸೈಮಂಡ್ಸ್. ಹರ್ಭಜನ್ ಸಿಂಗ್ ಹೇಳಿದ ಮಾತು ತನ್ನ ಕ್ರಿಕೆಟ್ ವೃತ್ತಿ ಬದುಕನ್ನೇ ಹಾಳುಗೆಡವಿತು. ಈ ಘಟನೆ ಬಳಿಕ ಮಾನಸಿಕವಾಗಿ ಕುಗ್ಗಿದ್ದೆ. ಕುಡಿತದ ಅಭ್ಯಾಸ ಹೆಚ್ಚಾಯಿತು. ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ನಮ್ಮ ತಂಡದ ಘಟಾನುಘಟಿಗಳ ಬೆಂಬಲವಿದ್ದರೂ ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮನ್ನು ತಂಡದಿಂದ ಕೈಬಿಡುವಂತಾಗಿತ್ತು ಎಂದು ಸೈಮಂಡ್ಸ್ ಆರೋಪಿಸಿದ್ದರು. ಈ ಘಟನೆ ಬಗ್ಗೆ ಮೂರು ವರ್ಷದ ಬಳಿಕ ಹರ್ಭಜನ್ ತಮ್ಮ ಬಳಿ ಕ್ಷಮೆ ಕೋರಿ ಜೋರಾಗಿ ಅತ್ತಿದ್ದರು ಎಂದು ಸೈಮಂಡ್ಸ್ ಹೇಳಿದ್ರು. ಇದಕ್ಕೆ ಕ್ಲಾರಿಟಿ ಕೊಟ್ಟಿದ್ದ ಭಜ್ಜಿ ನಾನು ಯಾರ ಬಳಿಯೂ ಕ್ಷಮೆ ಕೇಳಿಲ್ಲ. ಸೈಮಂಡ್ಸ್ ಕಥೆ ಕಟ್ಟುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ರು. ಒಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಅಂದ್ರೆ ಮೊದ್ಲಿಂದಲೂ ಜಿದ್ದಾಜಿದ್ದಿ ಇದ್ದೇ ಇದೆ. ಈಗಲೂ ಕೂಡ ಅದು ಕಂಟಿನ್ಯೂ ಆಗ್ತಿದೆ. ಮುಂದೊಂದು ದಿನ ಭಾರತ ಪಾಕ್ ಪಂದ್ಯದಂತೆಯೇ ಬದಲಾದ್ರೂ ಅಚ್ಚರಿ ಇಲ್ಲ.