ಲೈಂಗಿಕ ಕಿರುಕುಳದ ಆರೋಪ – ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ತಲೆದಂಡ ಸಾಧ್ಯತೆ
ಭಾರತೀಯ ಕುಸ್ತಿ ಪಟುಗಳು ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿ ಒಕ್ಕೂಟದ ಅಧ್ಯಕ್ಷ ಮತ್ತು ಹಲವು ಕೋಚ್ಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಂತಾ ಆರೋಪಿಸಿ ಕುಸ್ತಿಪಟುಗಳು ಹೋರಾಟಕ್ಕಿಳಿದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಸಂಸದರಾಗಿರೋ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿರೋ ಕುಸ್ತಿಪಟು ವಿನೇಶ್ ಪೋಗಟ್, ಕಳೆದ ಹಲವು ವರ್ಷಗಳಿಂದ ಸಂಸದ ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ದೂರು ನೀಡಿದ್ರೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಅಂತಾ ವಿನೇಶ್ ಪೋಗಟ್ ಆರೋಪಿಸಿದ್ದಾರೆ. ಆದ್ರೆ ಬಿಜೆಪಿ ಸಂಸದ ಮತ್ತು ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ತಮ್ಮ ಮೇಲಿನ ಆರೋಪವನ್ನ ತಿರಸ್ಕರಿಸಿದ್ದಾರೆ. ನನ್ನ ವಿರುದ್ಧದ ಆರೋಪ ಸಾಬೀತಾದಲ್ಲಿ ನೇಣಿಗೇರೋಕು ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಓಟಗಾರ್ತಿಗೂ ತಟ್ಟಿದ ಡ್ರಗ್ಸ್ ಸೇವನೆ ಎಫೆಕ್ಟ್ – ದ್ಯುತಿ ಚಂದ್ ತಾತ್ಕಾಲಿಕ ಅಮಾನತು!
ಇನ್ನು ಒತ್ತಡ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋ ಸಾಧ್ಯತೆ ಇದೆ. ರಾಜೀನಾಮೆ ನೀಡದೇ ಇದ್ದಲ್ಲಿ ನಾನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗಿಯಾಗಲ್ಲ ಅಂತಾ ವಿನೇಶ್ ಪೋಗಟ್ ಹೇಳಿದ್ದಾರೆ. ಈ ನಡುವೆ ಸಾಕ್ಷಿ ಮಲಿಕ್, ಸಂಗೀತ ಪೋಗಟ್, ಭಜರಂಗ್ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಸಂತ್ರಸ್ತೆ ವಿನೇಶ್ ಪೋಗಟ್ ಬೆಂಬಲಕ್ಕೆ ನಿಂತಿದ್ದಾರೆ. ಗೃಹ ಸಚಿವ ಅಮಿತ್ ಶಾರನ್ನ ಕೂಡ ಭೇಟಿಯಾಗಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದ್ದು ತನಿಖೆ ನಡೆಸಲಾಗುವುದು ಎಂದಿದ್ದಾರೆ. ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಕಮ್ಯುನಿಸ್ಟ್ ಪಾರ್ಟಿ ನಾಯಕಿ ಬೃಂದಾ ಕಾರಟ್ ಭೇಟಿ ನೀಡಿದ್ರು. ಆದ್ರೆ, ಪ್ರತಿಭಟನಾನಿರತ ಕುಸ್ತಿಪಟುಗಳು ವೇದಿಕೆಯಿಂದ ಕೆಳಗಿಳಿಯುವಂತೆ ಬೃಂದಾಕಾರಟ್ಗೆ ಸೂಚಿಸಿದ್ರು. ಅಷ್ಟೇ ಅಲ್ಲ, ರಾಜಕೀಯ ಮಾಡೋದಾದ್ರೆ ಜಾಗ ಖಾಲಿ ಮಾಡುವಂತೆ ನೇರವಾಗಿಯೇ ಹೇಳಿದ್ದಾರೆ.