ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಭಾರತದ ವನಿತೆಯರು – 147 ವರ್ಷಗಳಲ್ಲಿ ಇದೇ ಮೊದಲು!
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಬೇಕೆಂಬ ಹಾರೈಕೆ ನಡುವೆ ಮಹಿಳಾ ಕ್ರಿಕೆಟ್ ತಂಡ 147 ವರ್ಷಗಳ ನಂತರ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತ ಸೇರಿಸಿ ವಿಶ್ವದಾಖಲೆ ಬರೆದಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 600+ ರನ್ ಕಲೆಹಾಕಿದ ವಿಶ್ವದ ಮೊದಲ ಮಹಿಳಾ ತಂಡ ಎನಿಸಿಕೊಂಡಿದೆ. ಈ ಮೂಲಕ ಏಕೈಕ ಟೆಸ್ಟ್ ನಲ್ಲೇ ಭಾರತದ ಮಹಿಳಾ ಕ್ರಿಕೆಟರ್ಸ್ ದಾಖಲೆ ಬರೆದಿದ್ದಾರೆ. ಈ ಪಂದ್ಯದ ಮೊದಲ ದಿನದಾಟದಲ್ಲಿ 525 ರನ್ ಕಲೆಹಾಕಿದ್ದ ಭಾರತ ತಂಡವು ಎರಡನೇ ದಿನದಾಟದ ಮೊದಲ ಸೆಷನ್ನಲ್ಲೇ ಡಿಕ್ಲೇರ್ ಘೋಷಿಸಿದೆ. 6 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 603 ರನ್ ಕಲೆಹಾಕಿದೆ.
ವನಿತೆಯರ ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ 600 ರನ್ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದು ಮಹಿಳೆಯರ ಕ್ರಿಕೆಟ್ ಇನ್ನಿಂಗ್ಸ್‌ನಲ್ಲಿ ಈವರೆಗೆ ದಾಖಲಾದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಈ ದಾಖಲೆ ಬಲಿಷ್ಠ ತಂಡ ಆಸ್ಟ್ರೇಲಿಯಾ ಹೆಸರಲ್ಲಿತ್ತು. ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವನಿತೆಯರು 9 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿದ್ದರು. ಅದು ಕೂಡಾ ದಕ್ಷಿಣ ಆಫ್ರಿಕಾ ವಿರುದ್ಧ. ಇದೀಗ ಈ ದಾಖಲೆಯನ್ನು ಭಾರತ ಬ್ರೇಕ್ ಮಾಡಿದೆ.