ರಣಜಿಯಲ್ಲೂ ಸ್ಟಾರ್ ಬ್ಯಾಟರ್ಸ್ 1, 3, 4, 4, 11 ರನ್ – ಚಾಂಪಿಯನ್ಸ್ ಟ್ರೋಫಿ ಕಥೆನೂ ಅಷ್ಟೇನಾ?

ರಣಜಿಯಲ್ಲೂ ಸ್ಟಾರ್ ಬ್ಯಾಟರ್ಸ್ 1, 3, 4, 4, 11 ರನ್ – ಚಾಂಪಿಯನ್ಸ್ ಟ್ರೋಫಿ ಕಥೆನೂ ಅಷ್ಟೇನಾ?

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಸೋ ಇವ್ರನ್ನೆಲ್ಲಾ ಹಿಂಗೇ ಬಿಟ್ರೆ ಆಗಲ್ಲ ಅಂತಾ ಬಿಸಿಸಿಐ ರಣಜಿ ಅಸ್ತ್ರ ಹೂಡಿತ್ತು. ಟೀಂ ಇಂಡಿಯಾ ಪರ ಆಡುವ ಆಟಗಾರರೆಲ್ಲಾ ದೇಶೀಯ ಟೂರ್ನಿಗಳಲ್ಲೂ ಆಡ್ಬೇಕು. ರಣಜಿಯಲ್ಲಿ ಬೆವರು ಹರಿಸ್ಬೇಕು ಅಂತಾ ಕಟ್ಟಪ್ಪಣೆ ಹೊರಡಿಸಿತ್ತು. ಬಿಗ್​ಬಾಸ್​ನಿಂದಲೇ ವಾರ್ನಿಂಗ್ ಬಂದ್ಮೇಲೆ ಇಲ್ಲ ಅನ್ನೋಕೆ ಆಗಲ್ಲ ನೋಡಿ. ಹೀಗಾಗಿ ವರ್ಷಗಳ ಬಳಿಕ ರಣಜಿ ಅಖಾಡಕ್ಕೆ ಇಳಿದ್ರು. ಬಟ್ ಅವ್ರ ಆಟ ಮಾತ್ರ ಬದ್ಲಾಗಿಲ್ಲ. ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಮೊದಲ ಪಂದ್ಯಗಳಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು ಮೊದಲ ಇನಿಂಗ್ಸ್​ಗಳಲ್ಲಿ ಅಟ್ಟರ್ ಫ್ಲಾಪ್ ಆಗಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ ಕಾಣಿಸಿಕೊಂಡಿದ್ದರು. ಹೇಳ್ಕೊಳ್ಳೋಕೆ ಅಂತಾರಾಷ್ಟ್ರೀಯ ಪ್ಲೇಯರ್ಸ್ ಆಗಿದ್ರೂ ಅವ್ರ  ಪ್ರದರ್ಶಮನ ಗಲ್ಲಿ ಕ್ರಿಕೆಟರ್ಸ್​ಗಿಂತ ಕಡೆಯಾಗಿದೆ.

ಇದನ್ನೂ ಓದಿ : ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಬೆಸ್ಟ್ ವಾರ್ – ಕ್ಯಾಪ್ಟನ್ಸಿ, ರನ್, ಕೀಪಿಂಗ್ ಹೇಗಿದೆ?

ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 19 ಎಸೆತಗಳನ್ನ ಎದುರಿಸಿ 3 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇತ್ತ ಯಶಸ್ವಿ ಜೈಸ್ವಾಲ್ ಕೂಡ ಕೇವಲ 4 ರನ್​ಗಳಿಸಿ ಔಟಾಗಿದ್ದಾರೆ. ಆ ಬಳಿಕ ಬಂದ ಅಜಿಂಕ್ಯ ರಹಾನೆ ಕೂಡ 12 ರನ್ ಗಳಿಗೆ ಸುಸ್ತಾಗಿದ್ದಾರೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ 11 ಗಳಿಸಿ ಪೆವಿಲಿಯನ್ ಸೇರ್ಕೊಂಡಿದ್ದಾರೆ. ಹಾಗಂತ ಈ ಫ್ಲ್ಯಾಪ್ ಶೋ ಸಿರೀಸ್ ಇಷ್ಟಕ್ಕೇ ಮುಗಿದಿಲ್ಲ. ಟೀಂ ಇಂಡಿಯಾದ ಯಂಗ್ ಪ್ರಿನ್ಸ್, ಫ್ಯೂಚರ್ ಕ್ಯಾಪ್ಟನ್ಸ್ ಅಂತಾನೇ ಕರೆಸಿಕೊಳ್ತಿರೋ ಶುಭ್​ಮನ್ ಗಿಲ್ ಮತ್ತು ರಿಷಭ್ ಪಂತ್​ರದ್ದೂ ಇದೇ ಕಥೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದಂತ ಶುಭ್​ಮನ್ ಗಿಲ್ ಕೇವಲ 4 ರನ್​ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಬ್ಯಾಟಿಂಗ್ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಚಿನ್ನಸ್ವಾಮಿ ಅಂಗಳದಲ್ಲೂ ಗಿಲ್ ಎನ್ ಕಲೆ ಹಾಕುವಲ್ಲಿ ಪರದಾಟ ನಡೆಸಿರುವುದು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಇವರು ಪಂಜಾಬ್ ಪರ ಇನಿಂಗ್ಸ್ ಆರಂಭಿಸಿ, ಕೇವಲ 8 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿ, ಅಭಿಲಾಶ್ ಶೆಟ್ಟಿ ತೋಡಿದ ಖೆಡ್ಡಾಗೆ ಬಲಿಯಾದರು.ಅತ್ತ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಬ್ಯಾಟ್ ಬೀಸಿರುವ ರಿಷಭ್ ಪಂತ್ ಕಲೆಹಾಕಿರುವುದು ಕೇವಲ 1 ರನ್ ಮಾತ್ರ. ದೆಹಲಿ ತಂಡದ ಪರ ದಶಕದ ಬಳಿಕ ರಣಜಿ ಟ್ರೋಫಿ ಆಡುತ್ತಿರುವ ರಿಷಭ್‌, ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ನಿರಾಸೆ ಅನುಭವಿಸಿದರು. 10 ಎಸೆತಗಳನ್ನು ಎದುರಿಸಿದ ಪಂತ್‌ ಕೇವಲ 1 ರನ್‌ ಬಾರಿಸಿ ಔಟ್ ಆದರು. ಇತ್ತ ಬರೋಡಾ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕನಾಗಿ ಕಾಣಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ ಕೇವಲ 10 ರನ್​ಗಳಿಸಿ ಔಟಾಗಿದ್ದಾರೆ. ಕೇರಳ ವಿರುದ್ಧ ಪಂದ್ಯದಲ್ಲಿ ಮಧ್ಯ ಪ್ರದೇಶ್ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ ಸೊನ್ನೆ ಸುತ್ತಿ ಔಟ್ ಆಗಿದ್ದಾರೆ. ಹೀಗೆ ಬಿಸಿಸಿಐ ಕಟ್ಟಪ್ಪಣೆಯ ಬೆನ್ನಲ್ಲೇ ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರರೆಲ್ಲರೂ ಮೊದಲ ಇನಿಂಗ್ಸ್​ನಲ್ಲೇ ಡುಮ್ಕಿ ಹೊಡೆದಿದ್ದಾರೆ.

ಅಷ್ಟಕ್ಕೂ ರಣಜಿಯಲ್ಲಿ ಆಡ್ತಿರೋ ಈ ಸ್ಟಾರ್ ಪ್ಲೇಯರ್ ರನ್ ಗಳಿಸೋಕೆ ಒದ್ದಾಡ್ತಿರೋದು ಲೋಕಲ್‌ ಬೌಲರ್‌ಗಳ ಎದುರು ಅನ್ನೋದೇ ಆತಂಕದ ವಿಚಾರ. ಇಲ್ಲೇ ಹೀಗೆ ಆಡೋವ್ರು ಬೇರೆ ಬೇರೆ ರಾಷ್ಟ್ರಗಳ ಸ್ಟಾರ್ ಬೌಲರ್​​ಗಳನ್ನ ಹೇಗೆ ಎದುರಿಸುತ್ತಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಫಾರ್ಮ್‌ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಿದರೆ, ಇಲ್ಲಿಯೂ ನಿರಾಸೆ ಬೆನ್ನೇರಿದೆ. ಯಾವ ಸ್ಟಾರ್ ಆಟಗಾರನು ಸಹ ದೊಡ್ಡ ಇನಿಂಗ್ಸ್ ಕಟ್ಟಲೇ ಇಲ್ಲ. ಸಿಂಗಲ್‌ ಡಿಜಿಟ್‌ನಲ್ಲೇ ಆಟ ಮುಗಿಸಿದರು. ಅಸಲಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ರಣಜಿಯಲ್ಲಿ ಫೇಲ್ ಆಗ್ತಿರೋದೇ ಇಷ್ಟು ದೊಡ್ಡ ಸುದ್ದಿಯಾಗ್ತಿರೋದಕ್ಕೆ ಕಾರಣವೂ ಇದೆ. ಯಾಕಂದ್ರೆ ಮುಂದಿನ ತಿಂಗಳು ತವರಿನಲ್ಲೇ ಇಂಗ್ಲೆಂಡ್ ವಿರುದ್ಧ ಮೂರು ದಿನಗಳ ಏಕದಿನ ಸರಣಿ ನಡೆಯಲಿದೆ. ಈಗಾಗ್ಲೇ 5 ಪಂದ್ಯಗಳ ಟಿ-20 ಸಿರೀಸ್ ಶುರುವಾಗಿದ್ದು ಮೊದಲ ಪಂದ್ಯವನ್ನ ಭಾರತ ತಂಡದ ಯಂಗ್ ಪ್ಲೇಯರ್ಸ್ ಗೆದ್ದು ಬೀಗಿದ್ದಾರೆ. ಅದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಇರುತ್ತೆ. ಅದೂ ಆದ್ಮೇಲೆ ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. ವಿಷ್ಯ ಅಂದ್ರೆ ಈಗ ರಣಜಿಯಲ್ಲಿ ಅಟ್ಟರ್ ಫ್ಲ್ಯಾಪ್ ಆಗಿರೋ 5 ಆಟಗಾರರು ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆಗಿದ್ದಾರೆ.

Shantha Kumari

Leave a Reply

Your email address will not be published. Required fields are marked *