ಬಿಬಿಸಿ ಸಂಸ್ಥೆಯ ದೆಹಲಿ, ಮುಂಬೈ ಕಚೇರಿಗಳಲ್ಲಿ ಐಟಿ ಪರಿಶೀಲನೆ – ರೇಡ್ ಹಿಂದಿದ್ಯಾ ಸಾಕ್ಷ್ಯಚಿತ್ರ ಸಿಟ್ಟು..!?

ಬಿಬಿಸಿ ಸಂಸ್ಥೆಯ ದೆಹಲಿ, ಮುಂಬೈ ಕಚೇರಿಗಳಲ್ಲಿ ಐಟಿ ಪರಿಶೀಲನೆ – ರೇಡ್ ಹಿಂದಿದ್ಯಾ ಸಾಕ್ಷ್ಯಚಿತ್ರ ಸಿಟ್ಟು..!?

ಬಿಬಿಸಿ ಸಂಸ್ಥೆಯ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇವತ್ತೂ ಕೂಡ ಪರಿಶೀಲನೆ ಮುಂದುವರಿಸಿದ್ದಾರೆ. ಮಂಗಳವಾರ ರೇಡ್ ಮಾಡಿದ್ದ ಅಧಿಕಾರಿಗಳು ಸಿಬ್ಬಂದಿಯ ಲ್ಯಾಪ್​ಟಾಪ್ ಮತ್ತು ಫೋನ್​ಗಳನ್ನ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಬಿಬಿಸಿ ರಚಿಸಿದ್ದ 2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸುವ ಎರಡು ಕಂತುಗಳ ಸಾಕ್ಷ್ಯಚಿತ್ರ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಇದಾದ ಕೆಲವೇ ವಾರಗಳಲ್ಲಿ ಐಟಿ ಇಲಾಖೆ ಈ ಕ್ರಮ ಕೈಗೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಏರುತ್ತಿರುವ ಸಮುದ್ರ ಮಟ್ಟ – ಮುಂಬೈನಿಂದ ನ್ಯೂಯಾರ್ಕ್‌ವರೆಗೂ ಅಪಾಯ!

ಐಟಿ ರೇಡ್ ಸಂಬಂಧ ತನ್ನ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿರುವ ಬಿಬಿಸಿ, ವರ್ಕ್ ಫ್ರಂ ಹೋಮ್ ಮಾಡುವಂತೆ ಮನವಿ ಮಾಡಿದೆ. ‘ವೈಯಕ್ತಿಕ ಆದಾಯದ ಬಗ್ಗೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉದ್ಯೋಗಿಗಳು ಉತ್ತರಿಸುವುದಕ್ಕೆ ನಿರಾಕರಿಸಬಹುದು. ಅವರು ತಮ್ಮ ಸಂಬಳ ಕುರಿತಾದ ಪ್ರಶ್ನೆಗೆ ಮಾತ್ರ ಉತ್ತರಿಸಿದರೆ ಸಾಕು’ ಎಂದಿರುವ ಬಿಬಿಸಿ, ಐಟಿ ಅಧಿಕಾರಿಗಳ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸುವ ಮೂಲಕ ಸಹಕಾರ ಕೊಡಬೇಕು ಎಂದು ಸಲಹೆ ನೀಡಿದೆ.

ಬಿಬಿಸಿಗೆ ಸಂಬಂಧಿಸಿದಂತೆ ಲಾಭಾಂಶ ಮತ್ತು ಹಣಕಾಸಿನ ವಹಿವಾಟಿನಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ‘ಸರ್ವೆ’ ನಡೆಸಲು ಕಚೇರಿಗಳನ್ನು ತೆರಿಗೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ. 2012ನೇ ವರ್ಷದಿಂದ ಈವರೆಗೂ ಬಿಬಿಸಿ ನಡೆಸಿದ ವಹಿವಾಟುಗಳ ಲೆಕ್ಕ ಪತ್ರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿದ್ದು, ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಈ ಸನ್ನಿವೇಶ ಆದಷ್ಟು ಬೇಗನೆ ಪರಿಹಾರವಾಗಲಿದೆ ಎಂದು ಆಶಯ ಹೊಂದಿದ್ದೇವೆ ಎಂದು ಬಿಬಿಸಿ ಟ್ವೀಟ್ ಮಾಡಿತ್ತು.

ದಾಳಿ ವೇಳೆ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಪತ್ರಕರ್ತರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕೂಡ ಕೊಂಡೊಯ್ಯಲಾಗಿದೆ. ಪರಿಶೀಲನೆ ಆರಂಭವಾದ ಆರು ಗಂಟೆಗಳ ಬಳಿಕವಷ್ಟೇ ಉದ್ಯೋಗಿಗಳು ಕಚೇರಿಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಅದಕ್ಕೂ ಮುನ್ನ ಅವರ ಲ್ಯಾಪ್‌ಟಾಪ್‌ಗಳನ್ನು ಪರಿಶೀಲನೆ ಮಾಡಲಾಗಿದೆ. ಕೆಲವು ಉದ್ಯೋಗಿಗಳು ಐಟಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದರು. ಡೆಸ್ಕ್‌ಟಾಪ್‌ಗಳನ್ನು ತೆರೆದು ಲಾಗ್‌ಇನ್ ಆಗುವಂತೆ ಉದ್ಯೋಗಿಗಳಿಗೆ ಸೂಚಿಸಿದ ಅಧಿಕಾರಿಗಳು, ಮಾಹಿತಿ ಹುಡುಕಲು ‘ಟ್ಯಾಕ್ಸ್’ ಎಂಬ ಕೀವರ್ಡ್ ಬಳಸಿದ್ದಾರೆ. ಈ ಪರಿಶೀಲನೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪೋಸ್ಟ್ ಹಾಕದಂತೆ ನೌಕರರಿಗೆ ಸೂಚನೆ ನೀಡಲಾಗಿದೆ.

2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿ ಮೋದಿ ಅವರು ಪಾತ್ರ ವಹಿಸಿದ್ದರು ಎಂದು ಆರೋಪಿಸುವ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿತ್ತು. ಈ ಕಾರಣಕ್ಕಾಗಿ ಬಿಬಿಸಿಯನ್ನು ಬಿಜೆಪಿ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ‘ಸರ್ಕಾರದ ನೀತಿಗಳನ್ನು ಟೀಕಿಸುವ ಮಾಧ್ಯಮ ಸಂಸ್ಥೆಗಳನ್ನು ಬೆದರಿಸುವ ಅಥವಾ ಕಿರುಕುಳ ನೀಡುವ ಸಲುವಾಗಿ ಸರ್ಕಾರಿ ಸಂಸ್ಥೆಗಳನ್ನು ಬಳಸುವ ವ್ಯಾಪಕ ಬೆಳವಣಿಗೆಯ ಭಾಗ ಈ ದಾಳಿ‘ ಎಂದು ದಿ ಎಡಿಟರ್ಸ್ ಗಿಲ್ಡ್, ಬಿಬಿಸಿಯಲ್ಲಿನ ಪರಿಶೀಲನೆಯನ್ನು ಖಂಡಿಸಿದೆ.

suddiyaana