ರೈಲ್ವೆ ಇಲಾಖೆಯ ಲೋಕೋ ಪೈಲಟ್ಗಳಿಂದ ಉಪವಾಸ- 36 ಗಂಟೆ ಉಪವಾಸ ಸತ್ಯಾಗ್ರಹ

ಕೆಲಸದ ಪರಿಸ್ಥಿತಿಗಳನ್ನು ವಿರೋಧಿಸಿ ಭಾರತೀಯ ರೈಲ್ವೆ ಇಲಾಖೆಯ ಲೋಕೋ ಪೈಲಟ್‌ಗಳು ಇಂದು 8 ಗಂಟೆಯಿಂದ 36 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಲೋಕೋ ಪೈಲಟ್‌ಗಳಿಗೆ 8 ಗಂಟೆಗಳ ಪಾಳಿ ನಿಗದಿಪಡಿಸಿದ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸನ್ನು ಅಧಿಕಾರಿಗಳು ಇನ್ನೂ ಅಂಗೀಕರಿಸಿಲ್ಲ. ಲೋಕೋ ಪೈಲಟ್‌ಗಳ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ರೈಲ್ವೆ ಸಚಿವಾಲಯದ ಮಲತಾಯಿ ಧೋರಣೆಯನ್ನು ವಿರೋಧಿಸಿ ಭಾರತೀಯ ರೈಲ್ವೆಯ ಎಲ್ಲಾ ಲೋಕೋ ಪೈಲಟ್‌ಗಳು ಇಂದು ಅಂದ್ರೆ ಫೆ. 20ರಂದು ಬೆಳಗ್ಗೆ 8ರಿಂದ ಫೆ. 21ರ ಸಂಜೆ 7 ಗಂಟೆಯವರೆಗೆ 36 ಗಂಟೆಗಳ ಕಾಲ ಉಪವಾಸ ಆಚರಿಸಲು ನಿರ್ಧರಿಸಿದ್ದಾರೆ.
ಲೋಕೋ ಪೈಲಟ್‌ಗಳು ಸತತವಾಗಿ 11 ಗಂಟೆಗಳವರೆಗೆ ಕೆಲಸ ಮಾಡಬೇಕಾಗುತ್ತದೆ ಎಂದು ಅಸೋಸಿಯೇಷನ್ ಹೇಳಿದೆ. ಪ್ರಾಯೋಗಿಕವಾಗಿ ಲೋಕೋ ಪೈಲಟ್‌ಗಳು ಅದರಲ್ಲೂ ವಿಶೇಷವಾಗಿ ಸರಕು ರೈಲುಗಳನ್ನು ನಿರ್ವಹಿಸುವವರು, ಸಾಮಾನ್ಯವಾಗಿ 12ರಿಂದ 20 ಗಂಟೆಗಳ ಕಾಲ ನಿರಂತರ ಕೆಲಸ ಮಾಡಬೇಕಾಗಿದೆ. ಪದೇಪದೆ ಪ್ರಯತ್ನಿಸಿದರೂ ರೈಲ್ವೆ ಸಚಿವಾಲಯದ ವಕ್ತಾರರು ಪ್ರತಿಕ್ರಿಯೆಗೆ ಲಭ್ಯವಿಲ್ಲ. ನಿಯಮಗಳ ಪ್ರಕಾರ ಲೋಕೋ ಪೈಲಟ್‌ಗಳು 8 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರ ಕರ್ತವ್ಯಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಿಸ್ತರಿಸಲಾಗುತ್ತದೆ.
ರೈಲ್ವೆ ಸಿಬ್ಬಂದಿಯ ಅರೆನಿದ್ರಾವಸ್ಥೆಯಿಂದಾಗಿ ಹಲವಾರು ಅಪಘಾತಗಳು ಸಂಭವಿಸಿವೆ ಎಂದು ಸಂಘವು ಆರೋಪಿಸಿದೆ. ಆದರೆ ಅಧಿಕಾರಿಗಳು ಸತತ 4 ರಾತ್ರಿ ಪಾಳಿಗಳಿಗೆ ಲೋಕೋ ಪೈಲಟ್‌ಗಳನ್ನು ಕರ್ತವ್ಯ ಮಾಡುವಂತೆ ಮಾಡುತ್ತಿದ್ದಾರೆ. ನಿಯಮಗಳ ಪ್ರಕಾರ, ಎಲ್ಲಾ ಇತರ ರೈಲ್ವೆ ಕಾರ್ಮಿಕರಿಗೆ ಒಂದು ಸಮಯದಲ್ಲಿ ಒಂದು ರಾತ್ರಿ ಪಾಳಿಯನ್ನು ಮಾತ್ರ ನಿಯೋಜಿಸಲಾಗಿದೆ ಎಂದು ಅವರ ಪತ್ರದಲ್ಲಿ ತಿಳಿಸಲಾಗಿದೆ.
ಎಲ್ಲಾ ರೈಲ್ವೆ ಕಾರ್ಮಿಕರಿಗೆ 16 ಗಂಟೆಗಳ ದೈನಂದಿನ ವಿಶ್ರಾಂತಿಯ ಜೊತೆಗೆ 30 ಗಂಟೆಗಳ ವಾರದ ವಿಶ್ರಾಂತಿ ಅವಧಿಗೆ ಅರ್ಹತೆ ಇದೆ. ಆದರೆ, ಹೆಚ್ಚಿನ ರೈಲ್ವೆ ಉದ್ಯೋಗಿಗಳಿಗೆ ವಾರಕ್ಕೆ 40ರಿಂದ 64 ಗಂಟೆಗಳ ರಜೆಯನ್ನು ನೀಡಲಾಗಿದ್ದರೂ, ಲೋಕೋ ಪೈಲಟ್‌ಗಳು 16 ಗಂಟೆಗಳ ದೈನಂದಿನ ವಿಶ್ರಾಂತಿಯನ್ನು ಒಳಗೊಂಡಂತೆ ಕೇವಲ 30 ಗಂಟೆಗಳ ಕಾಲ ಮಾತ್ರ ವಿಶ್ರಾಂತಿ ಪಡೆಯುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ವಾರದ ವಿಶ್ರಾಂತಿಯನ್ನು ಕೇವಲ 14 ಗಂಟೆಗಳಿಗೆ ಇಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜುಲೈ 2024ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ತಮ್ಮ ಕುಂದುಕೊರತೆಗಳನ್ನು ರೈಲ್ವೆ ಸಚಿವರಿಗೆ ಸಲ್ಲಿಸಿತ್ತು ಎಂದು ಸಂಘವು ಆರೋಪಿಸಿದೆ. ಲೋಕೋ ಪೈಲಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ಮತ್ತು ಅವರ ಕಳವಳಗಳನ್ನು ಪರಿಹರಿಸಲು ಒಂದು ತಿಂಗಳೊಳಗೆ ಶಿಫಾರಸುಗಳನ್ನು ಸಲ್ಲಿಸಲು ಸಚಿವರು 2 ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದರು.