172 ಬಾರಿ ದೇವಾಲಯದ ಆಭರಣ ಅಡವಿಟ್ಟ ಅರ್ಚಕ – ಕೊನೆಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಸಿಂಗಾಪುರ: ಕಷ್ಟಕಾಲ ಬಂದಾಗ ಮನೆಯಲ್ಲಿರುವ ಚಿನ್ನವನ್ನು ಅಡವಿಟ್ಟು, ಅನೇಕರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಭಾರತೀಯ ಮೂಲದ ಅರ್ಚಕ ಸಿಂಗಾಪುರದಲ್ಲಿರುವ ಅತ್ಯಂತ ಪುರಾತನ ಹಿಂದೂ ದೇವಾಲಯದ ದೇವಾಲಯದ ಆಭರಣಗಳನ್ನು ಬರೋಬ್ಬರಿ 172 ಭಾರಿ ಅಡವಿಟ್ಟಿದ್ದಾನೆ. ಇದೀಗ ಅಲ್ಲಿನ ಸ್ಥಳೀಯ ನ್ಯಾಯಾಲಯ ಆರು ಷರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ವಿಮಾನದ ಟಿಕೆಟ್ ಗಿಂತಲೂ ದುಬಾರಿ ಉಬರ್! – ಏರ್‌ಪೋರ್ಟ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಎಷ್ಟು ಹಣ ಗೊತ್ತಾ?
ಭಾರತೀಯ ಮೂಲದ ಕಂದ ಸ್ವಾಮಿ ಸೇನಾಪತಿ (39) ಶಿಕ್ಷೆಗೆ ಗುರಿಯಾದ ಅರ್ಚಕ. ಡೌನ್ಟೌನ್ನಲ್ಲಿರುವ ಮಾರಿಯಮ್ಮನ್ ದೇವಸ್ಥಾನದಲ್ಲಿ 2013 ರಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ. ಈತ ದೇವಾಲಯದ ಆಭರಣಗಳನ್ನು ಬರೋಬ್ಬರಿ 172 ಬಾರಿ ಅಡವಿಟ್ಟಿದ್ದಾನೆ. ಬಳಿಕ ಈತ ಮಾರ್ಚ್ 30, 2020ರಂದು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದನು.
2020ರಲ್ಲಿ ಕೋವಿಡ್ ಲಾಕ್ಡೌನ್ ವೇಳೆ ಅಧಿಕಾರಿಗಳು ದೇವಸ್ಥಾನದ ಲೆಕ್ಕಪತ್ರ ಪರಿಶೋಧನೆ ನಡೆಸಿದ್ದಾರೆ. ಈ ವೇಳೆ ಆತನ ಬಣ್ಣ ಬಯಲಾಗಿದೆ. ದೇವಸ್ಥಾನದ ಲೆಕ್ಕ ಪತ್ರ ಪರಿಶೀಲನೆ ವೇಳೆ ಆಭರಣಗಳು ಸಿಕ್ಕಿರಲಿಲ್ಲ. ಆಗ ಅರ್ಚಕ ಒಡವೆಗಳನ್ನು ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ.
2014ರಲ್ಲಿ ಗರ್ಭಗುಡಿಯ ಹಾಗೂ ಒಡವೆಗಳನ್ನು ಇಡಲಾಗಿದ್ದ ಸೇಫ್ ಲಾಕರ್ ಕೀಲಿ ಕೈಯನ್ನು ಸೇನಾಪತಿಗೆ ಒಪ್ಪಿಸಲಾಗಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಆರೋಪಿ ಒಟ್ಟು 172 ಭಾರೀ ಆಭರಣಗಳನ್ನು ಅಡವಿಟ್ಟಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆಭರಣಗಳನ್ನು ಅಡವಿಡುವುದರಿಂದ ಬರುವ ಹಣದಿಂದ ಆರೋಪಿಯೂ ಭಾರತದಲ್ಲಿರುವ ತಮ್ಮ ಸಂಬಂಧಿಕರೊಬ್ಬರ ಖಾತೆಗೆ ವರ್ಗಾಯಿಸುತ್ತಿದ್ದ. 2020ರಲ್ಲಿ ಲೆಕ್ಕಪತ್ರ ಪರಿಶೋಧನೆ ವೇಳೆ ಸೇನಾಪತಿಗೆ ಕೀಲಿ ಕೈಗಳನ್ನು ಕೇಳಿದ ಸಂದರ್ಭ ಆತ ಅದನ್ನು ಭಾರತದಲ್ಲೇ ಮರೆತು ಬಂದಿರುವುದಾಗಿ ಮೊದಲಿಗೆ ಹೇಳಿದ್ದಾನೆ. ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಅಧಿಕಾರ ದುರುಪಯೋಗ, ನಂಬಿಕೆ ದ್ರೋಹ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಚಕ ತಪ್ಪೊಪ್ಪಿಕೊಂಡಿದ್ದಾನೆ. ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವು ಆರೋಪಿ ಅರ್ಚಕನಿಗೆ 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.