ಎವರೆಸ್ಟ್ ಬೇಸ್ ಕ್ಯಾಂಪ್ ಪೂರ್ಣಗೊಳಿಸಿದ 6 ವರ್ಷದ ಬಾಲಕ

ಎವರೆಸ್ಟ್ ಬೇಸ್ ಕ್ಯಾಂಪ್ ಪೂರ್ಣಗೊಳಿಸಿದ 6 ವರ್ಷದ ಬಾಲಕ

ಸಿಂಗಾಪುರ: ಪುಟ್ಟ ಮಕ್ಕಳಿಗೆ ಆಟ, ಬಿಟ್ಟರೆ ಪಾಠ. ಅದರಲ್ಲೇ ಮಕ್ಕಳು ಬಾಲ್ಯ ಕಳೆಯುತ್ತಿರುತ್ತಾರೆ. ಅದರಲ್ಲೂ ಐದಾರು ವರ್ಷದ ಮಕ್ಕಳು ಎಷ್ಟೇ ಆಟ- ಪಾಠದಲ್ಲಿದ್ದರೂ, ಹೆತ್ತವರಿಗೆ ಅಂಟಿಕೊಂಡಿರುವುದು ಸಾಮಾನ್ಯ. ಆದರೆ  ಇಲ್ಲೊಬ್ಬ 6 ವರ್ಷದ ಬಾಲಕ, ಹೆತ್ತವರ ಜೊತೆಯಲ್ಲೇ ಮಾಡಿರುವ ಸಾಧನೆ ಬೆರಗು ಮೂಡಿಸುವಂತದ್ದು. ಅದೂ ಕೂಡ  ಸುಮಾರು 5,364 ಮೀಟರ್ ಪ್ರಯಾಣ ಮಾಡಿ, ಎವರೆಸ್ಟ್ ಬೇಸ್ ಕ್ಯಾಂಪ್ ಪೂರ್ಣಗೊಳಿಸಿದ ಹೆಗ್ಗಳಿಕೆಗೆ 6 ವರ್ಷದ ಕಂದ ಪಾತ್ರನಾಗಿದ್ದಾನೆ. ಅಲ್ಲದೇ ಈ ಸಾಧನೆ ಮಾಡಿದ ಸಿಂಗಾಪುರದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಸಿಂಗಾಪುರದ ಓಂ ಮದನ್ ಗಾರ್ಗ್ ಎಂಬ ಬಾಲಕ, ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಸುಮಾರು 10 ದಿನಗಳಲ್ಲಿ ಪೂರ್ಣಗೊಳಿಸಿದ್ದಾನೆ. ಬಾಲಕನ ಈ ಸಾಧನೆಯು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾ ಸೀತಾರಾಮನ್

ಓಂ ಮದನ್ ಗಾರ್ಗ್ ಕಳೆದ ಅಕ್ಟೋಬರ್‌ನಲ್ಲಿ ತನ್ನ ಪೋಷಕರೊಂದಿಗೆ ಚಾರಣ ಆರಂಭಿಸಿದ್ದರು. 10 ದಿನಗಳಲ್ಲಿ 65 ಕಿಮೀ ಚಾರಣ ಮಾಡಿ 5,364 ಮೀಟರ್ ಎತ್ತರದಲ್ಲಿರುವ ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ ಅನ್ನು ತಲುಪಿದ್ದಾರೆ.

ಓಂ ಮದನ್ ಗಾರ್ಗ್ ತಂದೆ ಮಯೂರ್ ಗರ್ಗ್(38) ಮತ್ತು ತಾಯಿ ಗಾಯತ್ರಿ ಮಹೇಂದ್ರಮ್(39) ಚಾರಣ ಪ್ರಿಯರು. ಆಗಾಗ ಸಾಹಸಮಯ ಚಾರಣಕ್ಕೆ ತೆರಳುತ್ತಿದ್ದರು. ಓಂ ಮದನ್ ಗಾರ್ಗ್ ಗೆ ಕೇವಲ ಎರಡೂವರೆ ವರ್ಷ ಇದ್ದಾಗಲೇ ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಲಾವೋಸ್‌ಗೆ ಬ್ಯಾಕ್‌ಪ್ಯಾಕಿಂಗ್ ಪ್ರವಾಸಗಳಿಗೆ ಕರೆದೊಯ್ದಿದ್ದರು.

ಇದೀಗ ಓಂ ಮದನ್ ಗಾರ್ಗ್ ಪೋಷಕರ ಮಾರ್ಗದರ್ಶನ ಮತ್ತು ಇಬ್ಬರು ಪೋರ್ಟರ್‌ಗಳ ಸಹಾಯದೊಂದಿಗೆ ತಮ್ಮ 10 ದಿನಗಳ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಪೂರ್ಣಗೊಳಿಸಿದ್ದಾರೆ.

suddiyaana