ಒಲಿಂಪಿಕ್ಸ್‌ಗೆ ಕೊಹ್ಲಿ-ವೈಭವ್ ಓಪನರ್ಸ್? ಸೋತರು ಮನಗೆದ್ದ ಟೀಂ IND ರಿಚಾ!
ಆಸ್ಟ್ರೇಲಿಯಾ ಟೀಂನಲ್ಲಿ ಭಾರತೀಯನ ದರ್ಬಾರ್

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.
ಇದನ್ನೂ ಓದಿ: ಜಡ್ಜಸ್ ಅಂದ್ರೆ ನಾಯಿ ಎಂದಿದ್ಯಾಕೆ ರಕ್ಷಿತಾ ಶೆಟ್ಟಿ? – ತಪ್ಪು ತಪ್ಪು ಮಾತಾಡುವುದೇ ಕಾಮಿಡಿನಾ?
ಶ್ರೀಲಂಕಾದಲ್ಲಿ ನಡೆಯುತ್ತಿರುವ ಎ ತಂಡಗಳ ನಡುವಣ ತ್ರಿಕೋನ ಸರಣಿಯಲ್ಲಿ ನಡೆಯುತ್ತಿರೋ ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 9 ಫೋರ್ ಬಾರಿಸಿ 44 ರನ್ ಕಲೆಹಾಕಿದರು. ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 6 ರನ್ಗಳಿಂದ ಭಾರತ ಎ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು. ಇನ್ನೂ ತಿಲಕ್ ವರ್ಮಾ, ರುತುರಾಜ್ ಹಾಗೂ ಪ್ರಭಾಸಿಮ್ರಾನ್ ಆಫ್ ಸೆಂಚುರಿ ಸಿಡಿಸಿದ್ರು.
IPL ಸೃಷ್ಟಿಕರ್ತ ಲಲಿತ್ ಮೋದಿ ಅವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ವೈಭವ್ ವಿಶ್ವದ ಯಾವುದೇ ಮೂಲೆಯಲ್ಲಿ ತನ್ನ ಶಿಕ್ಷಣವನ್ನು ಉಚಿತವಾಗಿ ವೈಭವ್ ಪಡೆಯಬಹುದು. ಯುವ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಘೋಷಣೆಯನ್ನು ಅನೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ಸಾರ್ವಜನಿಕರು ಮೆಚ್ಚಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ವಿರಾಟ್ ಕೊಹ್ಲಿಯನ್ನು ಕೂಡ ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಶ್ರೀಶಾಂತ್ ಆಗ್ರಹಿಸಿದ್ದಾರೆ. ಒಲಿಂಪಿಕ್ಸ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿಯನ್ನು ಜೊತೆಯಾಗಿ ಕಣಕ್ಕಿಳಿಸಬೇಕು. ಇದರಿಂದ ಜಾಗತಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 128 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಸೇರ್ಪಡೆಯಾಗಲು ವಿರಾಟ್ ಕೊಹ್ಲಿ ಅವರ ಜಾಗತಿಕ ಜನಪ್ರಿಯತೆಯೇ ಮುಖ್ಯ ಕಾರಣ ಎಂದು ಶ್ರೀಶಾಂತ್ ಹೇಳಿದ್ದಾರೆ.
2026ರ ಮಹಿಳಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ 5 ರನ್‌ಗಳ ರೋಚಕ ಸೋಲನುಭವಿಸಿದೆ. ಇಂಗ್ಲೆಂಡ್ ನೀಡಿದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ರಿಚಾ ಘೋಷ್ ಅವರ 68 ರನ್‌ಗಳ ಹೋರಾಟದ ಹೊರತಾಗಿಯೂ ಗೆಲುವಿನ ದಡ ಮುಟ್ಟಲು ವಿಫಲವಾಯಿತು. ಕೊನೆಯ ಓವರ್‌ನಲ್ಲಿ ರಿಚಾ ವಿಕೆಟ್ ಪತನದೊಂದಿಗೆ 3 ಬಾಲ್‌ನಲ್ಲಿ 6 ರನ್ ಬಾರಿಸಲು ವಿಫಲವಾಗಿ ಸೋಲಿಗೆ ಕೊರಳೊಡ್ಡಬೇಕಾಯಿತು.
ಹಿಟ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅಪಘಾನಿಸ್ತಾನದ ವಿರುದ್ಧ ನಡೆಯುವ ಮೊದಲ ಏಕದಿನ ಪಂದ್ಯಕ್ಕಾಗಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆ ನಿರ್ಮಾಣವಾಗಲಿದೆ. ಈ ಪಂದ್ಯದ ಮೂಲಕ ಏಕದಿನ ಪಂದ್ಯವನ್ನಾಡಿದ ಭಾರತದ ಅತ್ಯಂತ ಹಿರಿಯ ಆಟಗಾರರಾಗಲಿದ್ದಾರೆ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಅವರಿಗೆ 39 ವರ್ಷ 44 ದಿನಗಳು. ಹಿಟ್ಮ್ಯಾನ್ ಮಾಜಿ ವಿಶ್ವಕಪ್ ವಿಜೇತ ಮೊಹಿಂದರ್ ಅಮರ್ನಾಥ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಟೀಂ ಇಂಡಿಯಾಕ್ಕೆ ಮರಳುವ ಬಗ್ಗೆ ಮೌನ ಮುರಿದಿರುವ ಭುವಿ, ಮತ್ತೆ ತಂಡದಲ್ಲಿ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಟೀಂ ಇಂಡಿಯಾದಲ್ಲಿ ಆಡಲು ಬಯಸುತ್ತೇನೆ ಎಂದು ತೋರಿಸಿಕೊಳ್ಳದಿರುವುದು ನನ್ನ ಸ್ವಭಾವ. ಎಲ್ಲರೂ ಅವರ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆಯ್ಕೆದಾರರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಆಯ್ಕೆ ಮಾಡುವುದು ಅವರ ಜವಾಬ್ದಾರಿ. ತಂಡಕ್ಕೆ ನನ್ನ ಅವಶ್ಯಕತೆ ಇದೆ ಎಂದು ಅವರು ಭಾವಿಸಿದರೆ, ಅವರು ತಮ್ಮ ಕೆಲಸ ಮಾಡುತ್ತಾರೆ ಎಂದುಭುವಿ ಹೇಳಿದ್ದಾರೆ.
ಐಪಿಎಲ್ 2026ರ ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆಯಾಗುವ ಸೂಚನೆ ಸಿಗುತ್ತಿದೆ. ಬ್ಯಾಕ್ ಟು ಬ್ಯಾಕ್ ಮೂರು ಸೀಸನ್ಗಳಲ್ಲಿ ತೀವ್ರ ನಿರಾಶಾದಾಯಕ ಪ್ರದರ್ಶನದ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ಒಂದು ಪ್ರಮುಖ ಸಭೆ ನಡೆಸಲಿದೆ ಎಂದು ವರದಿಯಾಗಿದೆ. ಈ ಸಭೆಯಲ್ಲಿ ಆಟಗಾರ ಮತ್ತು ಫ್ರಾಂಚೈಸಿ ಇಬ್ಬರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಭಾರತ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭರವಸೆಯ ವೇಗದ ಬೌಲರ್ ಮೊಹಮ್ಮದ್ ಸಲೀಮ್ ಅವರನ್ನು ಸೇರಿಸಿಕೊಳ್ಳುವ ಮೂಲಕ ಅಫ್ಘಾನಿಸ್ತಾನ ತಂಡವನ್ನು ಬಲಪಡಿಸಿದೆ. ಮೂರು ಪಂದ್ಯಗಳ ಸರಣಿಯು ಜೂನ್ 13 ರಂದು ಧರ್ಮಶಾಲಾದಲ್ಲಿ ಪ್ರಾರಂಭವಾಗಲಿದ್ದು, ಉಳಿದ ಪಂದ್ಯಗಳು ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿವೆ. ಆರಂಭದಲ್ಲಿ ಅಫ್ಘಾನಿಸ್ತಾನದ ಟೆಸ್ಟ್ ತಂಡಕ್ಕೆ ಮಾತ್ರ ಸಲೀಮ್ ಆಯ್ಕೆಯಾಗಿದ್ದರು. ಇದೀಗ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಈ ತಂಡದಲ್ಲಿ ದೆಹಲಿ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಭಾರತೀಯ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದರು. ಇದೀಗ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಟ್ರಾವಿಸ್ ಹೆಡ್ ಈ ಸರಣಿಯಿಂದ ಹೊರಗುಳಿದಿದ್ದರಿಂದ ನಿಖಿಲ್ ಚೌಧರಿಯನ್ನು ಆಸೀಸ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಬುಧವಾರ ಘೋಷಿಸಲಾದ 15 ಸದಸ್ಯರ ತಂಡದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಕೈಬಿಡಲಾಗಿದೆ. ನೈಟ್‌ಕ್ಲಬ್ ಘಟನೆಯಲ್ಲಿ ಭಾಗಿಯಾಗಿರುವ ಆರೋಪ ಅವರಿಬ್ಬರ ಮೇಲಿದ್ದು, ತನಿಖೆ ಬಾಕಿ ಇರುವುದರಿಂದ ಅವರಿಬ್ಬರನ್ನ ತಂಡದಿಂದಲೇ ಹೊರಗಿಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದು, ಸ್ಟೋಕ್ಸ್ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಮಧ್ಯಂತರ ನಾಯಕನನ್ನಾಗಿ ನೇಮಿಸಲಾಗಿದೆ.

ನೋಡಿರಿ

