ಕೇವಲ 20 ನಿಮಿಷದಲ್ಲಿ ಸೈಕಲ್, ಎಲೆಕ್ಟ್ರಿಕಲ್ ಸೈಕಲ್ ಆಗಿ ಕನ್ವರ್ಟ್ ಆಗುತ್ತೆ!
ಇದು ಸ್ಮಾರ್ಟ್ ಯುಗ. ಎಲ್ಲವೂ ಯಾಂತ್ರೀಕರಣಗೊಳ್ಳುತ್ತಿದೆ. ನಾವು ಓಡಾಡುವ ವಾಹನಗಳು ಕೂಡ ಹೊಸ ಹೊಸ ವಿನ್ಯಾಸಗಳಲ್ಲಿ, ಕಾಲಕ್ಕೆ ತಕ್ಕಂತೆ ಅಪ ಡೇಟ್ ಆಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರು, ಬೈಕ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಆವಿಷ್ಕಾರಗಳನ್ನು ಸಾಮಾನ್ಯ ವ್ಯಕ್ತಿಗಳು ಮಾಡಿ ಆಗಾಗ ಸುದ್ದಿಯಲ್ಲಿರುತ್ತಾರೆ. ಅಂತಹದ್ದೇ ಸಾಲಿನಲ್ಲಿ ಹರಿಯಾಣದ ವ್ಯಕ್ತಿಯೊಬ್ಬ ಸೇರಿದ್ದು, ಇವರು ಕೇವಲ 20 ನಿಮಿಷದಲ್ಲಿ ಸೈಕಲ್ ಅನ್ನು ಎಲೆಕ್ಟ್ರಿಕಲ್ ಸೈಕಲ್ ಆಗಿ ಪರಿವರ್ತಿಸುವ ಸಾಧನವನ್ನು ಕಂಡುಹಿಡಿದಿದ್ದಾರೆ.
ಹರಿಯಾಣದ ಹಿಸಾಲ್ ಎಂಬಲ್ಲಿನ ನಿವಾಸಿ ಗುರುಸೌರಭ್ ಎಲೆಕ್ಟ್ರಿಕ್ ಕಿಟ್ ಸಿದ್ಧ ಪಡಿಸಿದ್ದಾರೆ. ಈ ಕಿಟ್ ಯಾವುದೇ ಸೈಕಲ್‌ನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುತ್ತದೆ. ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಸೈಕಲ್ ಅಥವಾ ಸೈಕಲ್ ರಿಕ್ಷಾಗೆ ಸುಲಭವಾಗಿ ಅಳವಡಿಸಬಹುದು. ಪೆಡಲ್ ಇಲ್ಲದೆ ಸರಾಗವಾಗಿ ರಸ್ತೆಯ ಮೇಲೆ ಚಲಿಸುತ್ತದೆ. ಗುರುಸೌರಭ್ ಈ ವಿಶೇಷ ಆವಿಷ್ಕಾರಕ್ಕೆ ‘ಧ್ರುವ ವಿದ್ಯುತ್’ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: “ಚಿನ್ನದ ಮೀನು” ಹಿಡಿದು ದಾಖಲೆ ಬರೆದ ಮೀನುಗಾರ: ಫೊಟೋ ವೈರಲ್
ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಅಳವಡಿಸಿದಾಗ ಕೇವಲ 20 ನಿಮಿಷಗಳಲ್ಲಿ ಸೈಕಲ್‌ಗೆ ಹೊಂದಿಕೊಳ್ಳುತ್ತದೆ ಮತ್ತು ಸೈಕಲ್ ವೇಗವಾಗಿ ಚಲಿಸಲು ಆರಂಭಿಸುತ್ತದೆ. ಗುರುಸೌರಭ್ ಈ ವಿಶೇಷ ಕಿಟ್‌ನ್ನು ರೆಟ್ರೊಫಿಟ್ಟಿಂಗ್‌ನಿಂದ ತಯಾರಿಸುವ ಆಲೋಚನೆಯನ್ನು ಪಡೆದಿದ್ದು, ಇದರಲ್ಲಿ ವಾಹನಗಳ ಮೋಟಾರ್‌ಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಬಹುದಾಗಿದೆ.
ಈ ಕಿಟ್ ಗಂಟೆಗೆ ಸಮಾರು 25 ಕಿ.ಮೀ ವೇಗದಲ್ಲಿ ಸೈಕಲ್ ಚಲಿಸುತ್ತದೆ. ಇದು 170 ಕೆಜಿ ತೂಕದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ ಸಾಕು ಸೈಕಲ್ 40 ಕಿ.ಮೀ ವರೆಗೆ ಸೈಕಲ್ ಓಡಬಹುದು. ಈ ಕಿಟ್ ಜಲನಿರೋಧಕ ಹಾಗೂ ಅಗ್ನಿ ನಿರೋಧಕವಾಗಿದೆ. ಇದರಲ್ಲಿ ಚಾರ್ಜಿಂಗ್ ಪೋರ್ಟ್ ಕೂಡ ಅಳವಡಿಸಲಾಗಿದ್ದು, ಫೋನ್ ಬ್ಯಾಟರಿಯನ್ನೂ ಕೂಡ ಚಾರ್ಜ್ ಮಾಡಬಹುದಾಗಿದೆ.
ಈ ಕುರಿತು ಮಾತನಾಡಿದ ಗುರುಸೌರಭ್, ತಮ್ಮ ಹಳ್ಳಿಯಲ್ಲಿ ಮಕ್ಕಳು ಶಾಲೆಗೆ ತೆರಳಲು ಬಹಳ ದೂರ ಪ್ರಯಾಣ ಮಾಡಬೇಕು. ಕೋವಿಡ್ ಕಾಲದಲ್ಲಿ ಒಬ್ಬ ವ್ಯಕ್ತಿಯ ನಡಿಗೆ 4-5 ಕಿ.ಮೀ ಎಂದು ಅರಿತುಕೊಂಡೆ. ಗ್ರಾಮದಲ್ಲಿ ಪ್ರಯಾಣಿಸಲು ತೊಂದರೆಯಾಗುತ್ತಿರುವುದನ್ನು ಕಂಡು ಈ ಕಿಟ್ ಅನ್ನು ತಯಾರಿಸುವ ಯೋಚನೆ ಬಂದಿತು. ಈ ಕಿಟ್ ಪ್ರಯಾಣದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ. ಅಲ್ಲದೇ ಈ ಆವಿಷ್ಕಾರ ಭಾರತದ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನನ್ನು ತಲುಪಬೇಕೆಂದು ಕನಸು ಕಂಡಿದ್ದಾರೆ.