16 ಟೈಗರ್ಸ್.. ಪ್ಲೇಯಿಂಗ್ 11 ಹೇಗೆ? – ಟೆಸ್ಟ್ ನಲ್ಲಿ ಸ್ಥಾನ ಉಳಿಸಿಕೊಳ್ತಾರಾ KL?
ಬಾಂಗ್ಲಾ ಬೇಟೆಯಾಡಿದ್ರೆ ಭಾರತಕ್ಕೆ ಬಂಪರ್
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಿದ್ದು, ಹೊಸಬರಿಗೂ ಭಾಗ್ಯದ ಬಾಗಿಲು ತೆರೆದಿದೆ. ಹಿಟ್ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಲಿಷ್ಠ 16 ಆಟಗಾರರ ತಂಡ ಸೆಲೆಕ್ಟ್ ಆಗಿದೆ. ಬಟ್ ಈಗಿರೋ ಪ್ರಶ್ನೆ ಅಂದ್ರೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋರು ಯಾರು ಅನ್ನೋದು. ಸ್ಪಿನ್ ಸ್ನೇಹಿಯಾಗಿರೋ ಪಿಚ್ನಲ್ಲಿ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ತಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತಾಂಡವ್, ಶ್ರೇಷ್ಠಾ ಮದುವೆ ನಡೆಯುತ್ತಾ? – ಮಗ – ಸೊಸೆ.. ಕುಸುಮಾ ಆಯ್ಕೆ ಯಾರು?
ಸೆಪ್ಟೆಂಬರ್ 19 ರಿಂದ 24ರವರೆಗೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ಭಾರತದ ಬಲಿಷ್ಠ ತಂಡವನ್ನು ಬಿಸಿಸಿಐ ಸೆಪ್ಟೆಂಬರ್ 8ರಂದು ಪ್ರಕಟಿಸಿದೆ. ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್ ಆಯ್ಕೆಯಾಗಿದ್ದಾರೆ. ಅದ್ರಲ್ಲೂ ಭಾರತದ ಟಿ20 ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ ಆಗ್ತಿರೋದು ಸೆಂಟರ್ ಆಫ್ ಅಟ್ರ್ಯಾಕ್ಟನ್ ಆಗಿದೆ. ಅಲ್ದೇ ಭೀಕರ ಅಪಘಾತದ ನಂತರ ಅಂದರೆ ಹತ್ತತ್ರ ಎರಡು ವರ್ಷಗಳ ನಂತರ ರಿಷಭ್ ಪಂತ್ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ವೇಗಿ ಯಶ್ ದಯಾಳ್ ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ.
ಲಂಕಾ ವಿರುದ್ಧದ ಸೋಲಿನ ಬಳಿಕ ಭಾರತಕ್ಕೆ ಮೊದಲ ಪಂದ್ಯ
ಟಿ20 ವರ್ಲ್ಡ್ ಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ಯಂಗ್ ಸ್ಟರ್ಸ್ ಜಿಂಬಾಬ್ವೆ ವಿರುದ್ಧ ಟಿ-20 ಸರಣಿಯನ್ನ ವಶಪಡಿಸಿಕೊಂಡಿದ್ರು. ಶುಭ್ಮನ್ ಗಿಲ್ ನೇತೃತ್ವದಲ್ಲಿ ಗೆದ್ದು ಬೀಗಿದ್ರು. ಆದ್ರೆ ಆ ಬಳಿಕ ನಡೆದ ಲಂಕಾ ವಿರುದ್ಧದ ಟಿ-20 ಸರಣಿ ಗೆದ್ರೂ ಕೂಡ ಏಕದಿನ ಸರಣಿಯಲ್ಲಿ ಭಾರತ ವೈಟ್ ವಾಶ್ ಆಗಿತ್ತು. ಇದೀಗ ತಿಂಗಳ ಬಳಿಕ ಭಾರತ ತಂಡ ಮತ್ತೊಂದು ಸರಣಿಗೆ ಸಜ್ಜಾಗುತ್ತಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಿರ್ಧರಿಸಲು ಭಾರತಕ್ಕೆ ಈ ಪಂದ್ಯ ನಿರ್ಣಾಯಕವಾಗಲಿದೆ. ಬಾಂಗ್ಲಾದೇಶ ಭಾರತಕ್ಕೆ ಕಠಿಣ ಎದುರಾಳಿ ಅಲ್ಲದಿದ್ದರೂ ಸ್ಪಿನ್‌ಗೆ ಹೇಳಿ ಮಾಡಿಸಿದಂತಿರೋ ಚೆಪಾಕ್‌ನಲ್ಲಿ ಮೊದಲ ಮ್ಯಾಚ್ ನಡೆಯಲಿದೆ. ಹೀಗಾಗಿ ಭಾರತ ಎಚ್ಚರಿಕೆಯಿಂದಲೇ ಬಾಂಗ್ಲಾ ಬಾಯ್ಸ್ ಎದುರು ಕಣಕ್ಕಿಳಿಯಬೇಕಿದೆ.
ರೋಹಿತ್ ಶರ್ಮಾ ಜೊತೆ ಜೈಸ್ವಾಲ್ ಓಪನರ್!
ಬಾಂಗ್ಲಾ ಬೇಟೆಗೆ ಸಿದ್ಧವಾಗ್ತಿರೋ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಬಲ ಬಲಿಷ್ಠವಾಗಿದೆ. ನಾಯಕ ರೋಹಿತ್ ಶರ್ಮಾ ಜೊತೆಗೆ ಯುವ ಓಪನರ್ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಗಿಲ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬ್ಯಾಟ್ ಮಾಡಲಿದ್ದಾರೆ. ಹೀಗಾಗಿ ಒನ್ ಟು 5 ವರೆಗೂ ಬಲಿಷ್ಠ ಬ್ಯಾಟರ್ಗಳೇ ಅಬ್ಬರಿಸಲಿದ್ದು ಹೆಚ್ಚಿನ ರನ್ ಗಳನ್ನ ನಿರೀಕ್ಷೆ ಮಾಡಲಾಗ್ತಿದೆ.
ಸ್ಥಾನ ಉಳಿಸಿಕೊಳ್ಳೋಕೆ ಕೆಎಲ್ ರಾಹುಲ್ ಗೆ ಗೋಲ್ಡನ್ ಚಾನ್ಸ್!
ಈಗಾಗ್ಲೇ ಟಿ-20 ಫಾರ್ಮೆಟ್ ಕ್ರಿಕೆಟ್ನಿಂದ ಕೈ ಜಾರುತ್ತಿರೋ ಕನ್ನಡಿಗ ಕೆಎಲ್ ರಾಹುಲ್ಗೆ ಟೆಸ್ಟ್ನಲ್ಲಿ ತಮ್ಮ ಸಾಮರ್ಥ್ಯ ತೋರಿಸೋಕೆ ಇದು ಗೋಲ್ಡನ್ ಚಾನ್ಸ್. ಟೆಸ್ಟ್ ತಂಡದ ಭಾಗವಾಗಿ ಉಳೀಬೇಕು ಅಂದ್ರೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಆಟವಾಡಬೇಕು. ಇಲ್ಲವಾದರೆ ಅವರ ಸ್ಥಾನಕ್ಕೆ ಎಂಟ್ರಿ ಕೊಡೋಕೆ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಕಾದು ಕುಳಿತಿದ್ದಾರೆ. ಆದ್ರೆ ಈ ಪಂದ್ಯಕ್ಕೆ ಅಯ್ಯರ್ ಆಯ್ಕೆಯಾಗಿಲ್ಲ. ಹಾಗೇ 2022ರ ಡಿಸೆಂಬರ್ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿರುವ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮಿಂಚಿರುವ ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾದ 11ರ ಬಳಗ ಸೇರಿಕೊಳ್ಳಲಿದ್ದಾರೆ.
ಸ್ಪಿನ್ನರ್ ಗಳ ಸ್ವರ್ಗದಂತಿರೋ ಚೆನ್ನೈನಲ್ಲಿ ಯಾರಿಗೆ ಚಾನ್ಸ್?
ಬಾಂಗ್ಲಾ ವಿರುದ್ಧದ ಟೆಸ್ಟ್ನ ಮೊದಲ ಪಂದ್ಯ ನಡೀತಾ ಇರೋದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ. ಈ ಸ್ಟೇಡಿಯಂ ಹೇಳಿ ಕೇಳಿ ಸ್ಪಿನ್ನರ್‌ಗಳಿಗೆ ಸ್ವರ್ಗತಾಣ ಅನ್ನೋದಕ್ಕೆ ಇತಿಹಾಸದಲ್ಲೇ ಸಾಕಷ್ಟು ಎಕ್ಸಾಂಪಲ್ಸ್ ಇದೆ. ಕೆಂಪು ಮಣ್ಣಿನ ಈ ಪಿಚ್ ಆರಂಭದಲ್ಲಿ ಬ್ಯಾಟರ್‌ಗಳಿಗೆ ಸಪೋರ್ಟಿವ್ ಆಗಿದ್ದು, ರನ್ ಹೊಳೆ ಹರೀಬಹುದು. ಆದ್ರೆ ನಂತರ ಪಿಚ್ ಬಳಕೆಯಾದಂತೆ ಸ್ಪಿನ್ನರ್‌ಗಳು ಕಂಪ್ಲೀಟ್ ಕಂಟ್ರೋಲ್ ಪಡೀತಾರೆ. ಇದೇ ಕಾರಣಕ್ಕೆ ಭಾರತ ತಂಡ 4 ಎಕ್ಸ್ಪರ್ಟ್ ಸ್ಪಿನ್ನರ್‌ಗಳೊಂದಿಗೆ ಈ ಟೆಸ್ಟ್ ಪಂದ್ಯ ಆಡೋಕೆ ಪ್ಲ್ಯಾನ್ ಮಾಡಿದೆ. ಟೀಮ್ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ ಮೂವರು ಎಕ್ಸ್ಪರ್ಟ್ ಸ್ಪಿನ್ನರ್ಗಳನ್ನಾಗಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಎಡಗೈ ಸ್ಪಿನ್ನರ್‌ಗಳಾಗಿರೋದ್ರಿಂದ ಅಕ್ಷರ್ ಬದಲು ಕುಲ್ದೀಪ್ ಯಾದವ್‌ಗೆ ಟೀಮ್ ಮ್ಯಾನೇಜ್ಮೆಂಟ್ ಮಣೆಹಾಕುವ ಸಾಧ್ಯತೆ ಹೆಚ್ಚು. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ಎದುರು ಕುಲ್ದೀಪ್ ಯಾದವ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.
ಜುರೇಲ್ ಮತ್ತು ಸರ್ಫರಾಜ್ ಬೆಂಚ್ ಗೆ ಸೀಮಿತ?
ಯೆಸ್. ಈಗಾಗ್ಲೇ ಬ್ಯಾಟಿಂಗ್ ಬಲ ಸ್ಟ್ರಾಂಗ್ ಆಗಿರೋದ್ರಿಂದ ಇಂಗ್ಲೆಂಡ್ ಸರಣಿಯಲ್ಲಿ ಆಡಿದ್ದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಬೆಂಚ್ ಕಾಯಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಅನುಭವಿ ಕನ್ನಡಿಗ ಕೆಎಲ್ ರಾಹುಲ್ ಕಮ್ಬ್ಯಾಕ್ ಮಾಡಿರುವುದರಿಂದ ಸ್ಫೋಟಕ ಆಟಗಾರ ಸರ್ಫರಾಜ್ಗೂ ಕೂಡ ಬೆಂಚ್ ಕಾಯುವುದು ಅನಿವಾರ್ಯವಾಗಲಿದೆ. ವೇಗದ ವಿಭಾಗದಲ್ಲಿ ಸಿರಾಜ್ ಹಾಗೂ ಬುಮ್ರಾ ಆಡಲಿದ್ದಾರೆ. ಸೋ ಅಂತಿಮವಾಗಿ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಚಾನ್ಸ್ ಪಡೆಯಬಹುದು ಅನ್ನೋ ವಿವರ ಇಲ್ಲಿದೆ.
ಸಂಭಾವ್ಯ ಪ್ಲೇಯಿಂಗ್ 11
- ರೋಹಿತ್ ಶರ್ಮಾ
- ಯಶಸ್ವಿ ಜೈಸ್ವಾಲ್
- ಶುಭಮನ್ ಗಿಲ್
- ವಿರಾಟ್ ಕೊಹ್ಲಿ
- ಕೆಎಲ್ ರಾಹುಲ್
- ರಿಷಭ್ ಪಂತ್
- ಅಕ್ಷರ್ ಪಟೇಲ್
- ರವೀಂದ್ರ ಜಡೇಜಾ
- ರವಿಚಂದ್ರನ್ ಅಶ್ವಿನ್
- ಜಸ್ಪ್ರೀತ್ ಬುಮ್ರಾ
- ಮೊಹಮ್ಮದ್ ಸಿರಾಜ್
ಬಾಂಗ್ಲಾ ವಿರುದ್ಧದ ಸರಣಿಗೆ ಆಡುವ 11ರಲ್ಲಿ ಕಾಣಿಸಿಕೊಳ್ಳಬಹುದು. ಸದ್ಯ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಬಾಂಗ್ಲಾ ಬಾಯ್ಸ್ ಕೂಡ ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲೇ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪಾಕ್ ಆಟಗಾರರನ್ನ ಬಾಂಗ್ಲಾ ಆಟಗಾರರು ಕ್ಲೀನ್ ಸ್ವೀಪ್ ಮಾಡಿರೋ ಜೋಶ್ನಲ್ಲಿದ್ದಾರೆ. ಭಾರತದಲ್ಲೂ ಕೂಡ ಅದೇ ಕಮಾಲ್ ಮಾಡೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇತಿಹಾಸದಲ್ಲಿ ಒಮ್ಮೆಯೂ ಭಾರತದ ವಿರುದ್ಧ ಬಾಂಗ್ಲಾ ಗೆದ್ದಿಲ್ಲ ಅನ್ನೋದು ಸತ್ಯವಾಗಿದ್ರೂ ಕೂಡ ಈ ಬಾರಿ ಅದನ್ನೇ ನಿರೀಕ್ಷೆ ಮಾಡೋಕೆ ಆಗಲ್ಲ. ಹಾಗೇ ಸತತ ಎರಡು ಬಾರಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ತಲುಪಿದ ಟೀಮ್ ಇಂಡಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆದರೆ, ಈ ಬಾರಿ ಟ್ರೋಫಿ ಗೆದ್ದೇ ತೀರುವ ಹಠದಲ್ಲಿರುವ ರೋಹಿತ್ ಶರ್ಮಾ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ 5 ತಿಂಗಳಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಆಡಲಿರುವ 10 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆದ್ದದ್ದೇ ಆದರೆ ಸತತ ಮೂರನೇ ಬಾರಿ ಫೈನಲ್‌ಗೆ ಕಾಲಿಟ್ಟಂತ್ತಾಗುತ್ತೆ. ಸೋ ಈ ನಿಟ್ಟಿನಲ್ಲಿ ಬಾಂಗ್ಲಾ ಸರಣಿ ಭಾರತದ ಪಾಲಿಗೆ ತುಂಬಾನೇ ಮಹತ್ವದ್ದಾಗಿದೆ.