2025ಕ್ಕೆ ಲೆಜೆಂಡರ್ಸ್ ಯುಗಾಂತ್ಯ – RO-KO, ಜಡ್ಡು.. ಯಾರೆಲ್ಲಾ ರೇಸ್?

2025ಕ್ಕೆ ಲೆಜೆಂಡರ್ಸ್ ಯುಗಾಂತ್ಯ – RO-KO, ಜಡ್ಡು.. ಯಾರೆಲ್ಲಾ ರೇಸ್?

2024ನೇ ವರ್ಷವನ್ನ ಗೆಲುವಿನೊಂದಿಗೆ ಆರಂಭಿಸಿ ಸೋಲಿನೊಂದಿಗೆ ಮುಗಿಸಿದ್ದ ಟೀಂ ಇಂಡಿಯಾ ಇದೀಗ 2025ಕ್ಕೆ ಕಾಲಿಟ್ಟಿದೆ. ಸಿಡ್ನಿಯಲ್ಲಿ ನಡೆಯುತ್ತಿರೋ ಐದನೇ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲೂ ಇದೆ. ಬಟ್ ಈ ಬಾರಿಯ ಆಸಿಸ್ ಸರಣಿ ಅಂದುಕೊಂಡಷ್ಟು ಯಶಸ್ಸು ನೀಡಿಲ್ಲ. ಇಡೀ ತಂಡವೇ ಕಳಪೆ ಪ್ರದರ್ಶನ ನೀಡಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ನಿವೃತ್ತಿ ಟಾಕ್ ಕೂಡ ಶುರುವಾಗಿತ್ತು. ಸೋ ಈ ವರ್ಷ ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ.

ರೋಹಿತ್ ಶರ್ಮಾ ನಿವೃತ್ತಿಗೆ ವೇದಿಕೆ ಸಿದ್ಧವಾಗಿದ್ಯಾ?

ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾರಂತೂ ರಿಟೈರ್​ಮೆಂಟ್​ ಟ್ರೆಂಡ್​ನಲ್ಲಿದ್ದಾರೆ. ಮಾಜಿ ಕ್ರಿಕೆಟರ್ಸ್ ಕೂಡ ಅದೇ ಸಜೇಷನ್ಸ್ ಕೊಡ್ತಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಬ್ಯಾಟಿಂಗ್‌ ಮತ್ತು ನಾಯಕತ್ವದಿಂದ ರೋಹಿತ್‌ ಶರ್ಮಾ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿಡ್ನಿ ಪಂದ್ಯದಿಂದ ಹೊರಬಿದ್ದಿರೋ ರೋಹಿತ್ ಶರ್ಮಾ, ಸಿರೀಸ್ ಮುಗಿದ ಬಳಿಕ ಟೆಸ್ಟ್‌ ಕ್ರಿಕೆಟ್‌ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. 67 ಟೆಸ್ಟ್ ಪಂದ್ಯಗಳನ್ನ ಆಡಿರುವ ರೋಹಿತ್ ಶರ್ಮಾ 116 ಇನ್ನಿಂಗ್ಸ್ ಗಳಲ್ಲಿ 4,301 ರನ್ ಕಲೆ ಹಾಕಿದ್ದಾರೆ.

ರೋಹಿತ್ ಹಾದಿಯಲ್ಲೇ ಹೊರ ನಡೆಯುತ್ತಾರಾ ವಿರಾಟ್?

ಇನ್ನು ವಿರಾಟ್ ಕೊಹ್ಲಿಯನ್ನೂ ಕೂಡ ಕಳಪೆ ಫಾರ್ಮ್ ಬಿಟ್ಟೂ ಬಿಡದೇ ಕಾಡ್ತಿದೆ. ರೋಹಿತ್‌ ಶರ್ಮಾರಂತೆ ವಿರಾಟ್‌ ಕೊಹ್ಲಿ ನಿವೃತ್ತಿ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. 36ರ ಹರೆಯದ ವಿರಾಟ್‌, ಕಳೆದ ಕೆಲ ತಿಂಗಳುಗಳಿಂದ ಕಳಪೆ ಫಾರ್ಮ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಹೀಗೇ ಕಂಟಿನ್ಯೂ ಆದ್ರೆ ರೋಹಿತ್ ಮಾದರಿಯಲ್ಲೇ ಇದೇ ವರ್ಷ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳೋ ನಿರೀಕ್ಷೆ ಇದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಂದೇ ದಿನ ಟಿ-20 ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ರು.

ಟೀಂ ಇಂಡಿಯಾಗೆ ಮರಳದ ಇಶಾಂತ್ ಶರ್ಮಾ ನಿವೃತ್ತಿ?

ಭಾರತದ ದಿಗ್ಗಜ ವೇಗದ ಬೌಲರ್ ಇಶಾಂತ್ ಶರ್ಮಾ ಬಹುದಿನಗಳಿಂದ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಆದರೂ ಇಶಾಂತ್ ಶರ್ಮಾ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಲ್ಲ. 36 ವರ್ಷದ ಇಶಾಂತ್‌ ಶರ್ಮಾ ಕೂಡ ಈ ವರ್ಷ ನಿವೃತ್ತಿ ಘೋಷಣೆ ಮಾಡಬಹುದು. ಯಾಕಂದ್ರೆ 2021ರಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಈ ವರ್ಷ ಇಶಾಂತ್‌ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಏಕೆಂದರೆ ಟೀಂ ಇಂಡಿಯಾಕ್ಕೆ ಮರಳುವುದು ಅವರಿಗೆ ಕಷ್ಟಕರವಾಗಿದೆ. ಅಲ್ದೇ ಇಶಾಂತ್ ಶರ್ಮಾಗೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಆಯ್ಕೆ ಈಗ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಆರ್ಷದೀಪ್ ಸಿಂಗ್ ಆಗಿದ್ದಾರೆ.

ಚೇತೇಶ್ವರ ಪೂಜಾರಗಿಲ್ಲ ಕಮ್ ಬ್ಯಾಕ್ ಅದೃಷ್ಟ!

ಟೆಸ್ಟ್ ಕ್ರಿಕೆಟ್ ನ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ತಿದ್ದ ಚೇತೇಶ್ವರ ಪೂಜಾರ ಕೂಡ ಈಗ ಟೀಂ ಇಂಡಿಯಾದಿಂದ ಕಣ್ಮರೆಯಾಗಿದ್ದಾರೆ.  ಜನವರಿ 25ಕ್ಕೆ ಚೇತೇಶ್ವರ ಪೂಜಾರ 37ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಚೇತೇಶ್ವರ ಪೂಜಾರ ಕಳೆದ ಒಂದೂವರೆ ವರ್ಷಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಪೂಜಾರ ಅವರ ಕೊನೆಯ ಟೆಸ್ಟ್ ಪಂದ್ಯ ಜೂನ್ 2023 ರಲ್ಲಿ ಆಗಿತ್ತು. ಅಂದಿನಿಂದ ಪೂಜಾರ ಕಂಬ್ಯಾಕ್‌ ಮಾಡಲು ವಿಫಲರಾಗಿದ್ದಾರೆ. ಪೂಜಾರ ನಿವೃತ್ತಿ ಯಾವಾಗ ಘೋಷಿಸುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ 2025 ಪೂಜಾರ ಅವರ ಕೊನೆಯ ವರ್ಷವಾಗಿರಬಹುದು. ಇವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ 19 ಶತಕ ಮತ್ತು 3 ದ್ವಿಶತಕಗಳೊಂದಿಗೆ 7 ಸಾವಿರದ 195 ರನ್ ಗಳಿಸಿದ್ದಾರೆ.

ಜಡ್ಡು ನಿವೃತ್ತಿಯೂ ಹತ್ತಿರ ಬಂತಾ?

ಟೀಂ ಇಂಡಿಯಾದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಜೋಡಿ. ಆದರೆ ಇದೀಗ ಅಶ್ವಿನ್ ನಿವೃತ್ತಿಯಿಂದಾಗಿ ರವೀಂದ್ರ ಜಡೇಜಾ ಏಕಾಂಗಿಯಾಗಿದ್ದಾರೆ. ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಅನುಭವವನ್ನೂ ಹೊಂದಿದ್ದಾರೆ. T20 ವಿಶ್ವಕಪ್ 2024 ಗೆಲುವಿನ ನಂತರ ಜಡೇಜಾ ಟಿ-20 ಸ್ವರೂಪದಿಂದ ನಿವೃತ್ತಿ ಘೋಷಿಸಿದರು. ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಆಟ ಈ ವರ್ಷವೇ ಕೊನೆ ಆದ್ರೂ ಆಗಬಹುದು.

ಒಂದೂವರೆ ವರ್ಷದಿಂದ ರಹಾನೆಗೂ ಟೀಂ ಇಂಡಿಯಾ ಬಾಗಿಲು ಬಂದ್!

ಭಾರತ ಕಂಡಂಥ ಮತ್ತೊಬ್ಬ ದಿಗ್ಗಜ ಆಟಗಾರ ಅಜಿಂಕ್ಯ ರಹಾನೆ. ಹಲವು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ರಹಾನೆ ಟೆಸ್ಟ್ ಆಟಗಾರ ಅಂತಾನೇ ಕರೆಯುತ್ತಾರೆ. ಆದರೆ, ರಹಾನೆಗೆ ಭಾರತ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಆಯ್ಕೆ ಸಮಿತಿ ಚಿಂತನೆ ನಡೆಸಿಲ್ಲ. ರಹಾನೆ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಜುಲೈ 2023 ರಲ್ಲಿ ಆಡಿದ್ದರು. ರಹಾನೆ 85 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5077 ರನ್ ಗಳಿಸಿದ್ದಾರೆ. ಸದ್ಯ ರಹಾನೆ ಕಳೆದ ಐಪಿಎಲ್ ಟೂರ್ನಿ ಹಾಗೂ ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಬ್ಬರಿಸಿದ್ದು ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ. ಬಟ್ ಟೀಂ ಇಂಡಿಯಾ ಬಾಗಿಲು ಮತ್ತೆ ಓಪನ್ ಆಗೋದು ಕಷ್ಟ ಇದೆ.

 

Shantha Kumari

Leave a Reply

Your email address will not be published. Required fields are marked *