ಲಂಕಾ ಲಯನ್ಸ್ ಗೆ ಭಾರತ ಬಲಿ! – KL, ದುಬೆ, ಅಯ್ಯರ್ ಆಟ ಮರೆತ್ರಾ?
ರೋಹಿತ್ ಅಬ್ಬರಿಸಿದ್ರೂ ಸರಣಿ ಕೈ ತಪ್ಪಿತಾ?

ಲಂಕಾ ಲಯನ್ಸ್ ಗೆ ಭಾರತ ಬಲಿ! – KL, ದುಬೆ, ಅಯ್ಯರ್ ಆಟ ಮರೆತ್ರಾ?ರೋಹಿತ್ ಅಬ್ಬರಿಸಿದ್ರೂ ಸರಣಿ ಕೈ ತಪ್ಪಿತಾ?

ಟಿ-20 ಪಂದ್ಯದಲ್ಲೇ ಚೂರು ಅಗ್ರೆಸ್ಸಿವ್ ಆಗಿ ಆಡಿ ಸ್ಕೋರ್ ರೀಚ್ ಮಾಡೋ ಟಾರ್ಗೆಟ್ ಅದು. ಬಟ್ 50 ಓವರ್ ಇದ್ರೂ ನಮ್ಮ ಟೀಂ ಇಂಡಿಯಾ ಬಾಯ್ಸ್ ಸಿಂಹಳೀಯರ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ಮೊದಲನೇ ಏಕದಿನ ಪಂದ್ಯದಲ್ಲಿ ಗೆಲ್ಲೋ ಅವಕಾಶ ಇದ್ರೂ ಕೈ ಚೆಲ್ಲಿಕೊಂಡ ರೋಹಿತ್ ಪಡೆ ಹುಡುಗ್ರು ಎರಡನೇ ಪಂದ್ಯವನ್ನೂ ತಾವಾಗೇ ಲಂಕನ್ನರ ಕೈಗೆ ಒಪ್ಪಿಸಿದ್ದಾರೆ. ಬ್ಯಾಟಿಂಗ್ ಮರೆತಂತೆ ಆಡಿದ ಬ್ಯಾಟರ್ಸ್ ಲಂಕನ್ನರಿಗೆ ಸುಲಭವಾಗಿ ಬೇಟೆಯಾಗಿದ್ದಾರೆ. ಅಷ್ಟಕ್ಕೂ ಭಾನುವಾರದ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣ ಯಾರು? ಎಲ್ಲಿ ಎಡವಿದ್ರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಎಡವಟ್ಟು – ಕ್ಯಾಪ್ಟನ್ ರೋಹಿತ್ ಶರ್ಮಾ ಹೊಡೆಯಲು ಓಡಿ ಬಂದ್ರಾ?

ಟಿ-20 ವಿಶ್ವಕಪ್ ಗೆದ್ದಿದ್ರು. ಬಳಿಕ ಜಿಂಬಾಬ್ವೆ ಸರಣಿಯನ್ನೂ ಕೈವಶ ಮಾಡಿಕೊಂಡಿದ್ರು. ಅನಂತರ ಲಂಕನ್ನರ ವಿರುದ್ಧ ಟಿ-20 ಪಂದ್ಯದಲ್ಲಿ ವೈಟ್​ವಾಷ್ ಮಾಡಿ ಟ್ರೋಫಿ ಎತ್ತಿ ಹಿಡಿದಿದ್ರು. ಸೋ ಸೋಲೇ ಕಾಣದೆ ಮುನ್ನುಗ್ತಿದ್ದ ಭಾರತ ಏಕದಿನ ಸರಣಿಯನ್ನೂ ಗೆದ್ದು ಬೀಗೋದ್ರಲ್ಲಿ ಅನುಮಾನವೇ ಇಲ್ಲ ಅಂತಾ ಇಡೀ ಕ್ರಿಕೆಟ್ ಜಗತ್ತೇ ಅಂದುಕೊಳ್ತಿತ್ತು. ಅದ್ರಲ್ಲೂ ಜಿಂಬಾಬ್ವೆ ಸರಣಿ ಮತ್ತು ಲಂಕಾ ವಿರುದ್ಧದ ಟಿ-20 ಪಂದ್ಯಕ್ಕೆ ಸ್ಟಾರ್ ಆಟಗಾರರ ದಂಡು ಇರ್ಲಿಲ್ಲ. ಬಟ್ ಏಕದಿನ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಅನುಭವಿ ಆಟಗಾರರಿದ್ರು. ಸೋ ಇಲ್ಲೂ ಕೂಡ ಸಿಂಹಳೀಯರನ್ನ ಕ್ಲೀನ್ ಸ್ವೀಪ್ ಮಾಡೋದು ಫಿಕ್ಸ್ ಎನ್ನಲಾಗಿತ್ತು. ಬಟ್ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಲೆಕ್ಕಾಚಾರ ಕಂಪ್ಲೀಟ್ ಉಲ್ಟಾ ಆಗಿದೆ. ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಬಿಸಿ ಮುಟ್ಟಿಸಿದ್ದ ಲಂಕಾ ಪಡೆ ಎರಡನೇ ಪಂದ್ಯದಲ್ಲಿ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ಕೊಟ್ಟಿದ್ದಾರೆ. ವಿಶ್ವಚಾಂಪಿಯನ್ ತಂಡವನ್ನ ಸೋಲಿಸುವ ಮೂಲಕ ಲಂಕನ್​ ಲಯನ್ಸ್​ ಸೋಲಿನ ರುಚಿ ತೋರಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಲಂಕಾಗೆ ಸಿರಾಜ್ ಶಾಕ್!

ಎರಡನೇ ಏಕದಿನ ಪಂದ್ಯದಲ್ಲೂ ಟಾಸ್ ಗೆದ್ದ ಲಂಕಾ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ರು. ಆದ್ರೆ ಶ್ರೀಲಂಕಾ ಮೊದಲ ಎಸೆತದಲ್ಲೇ ಆಘಾತ ಎದುರಿಸುವಂತಾಯ್ತು. ಮೊಹಮ್ಮದ್​ ಸಿರಾಜ್ ವೇಗಕ್ಕೆ ಫಾತುಮ್​ ನಿಸ್ಸಾಂಕ ಬಲಿಯಾದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಅವಿಷ್ಕಾ ಫರ್ನಾಂಡೋ ಕುಸಾಲ್​ ಮೆಂಡಿಸ್ 74 ರನ್​ಗಳ ಜೊತೆಯಾಟವಾಡಿ​ ತಂಡಕ್ಕೆ ಚೇತರಿಕೆ ನೀಡಿದ್ರು. ಬಟ್ ಈ ಜೊತೆಯಾಟಕ್ಕೆ ವಾಷಿಂಗ್ಟನ್​ ಸುಂದರ್ ಬ್ರೇಕ್ ಹಾಕಿದ್ರು. ಸುಂದರ್​ ಮೋಡಿಗೆ ಬಲಿಯಾದ ಅವಿಷ್ಕಾ, ಕುಸಾಲ್ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. ಸದೀರಾ ಸಮರವಿಕ್ರಮ ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿದ್ರು. ಜನಿತ್​ ಲಿಯನಗೆ 12 ರನ್​ಗಳಿದ್ರೆ  ನಾಯಕ ಚರಿತ್​ ಅಸಲಂಕ ಆಟ 25 ರನ್​ಗಳಿಗೆ ಅಂತ್ಯವಾಯ್ತು. ಲಂಕಾ ಪರ 7ನೇ ವಿಕೆಟ್​ಗೆ ಜೊತೆಯಾದ ಕಮಿಂದು​ ಮೆಂಡೀಸ್​, ಧುನಿಲ್​ ವೆಲ್ಲಲಗೆ ಶ್ರೀಲಂಕಾಗೆ ಅಸರೆಯಾದ್ರು. ಇಂಡಿಯನ್​ ಬೌಲರ್ಸ್​ನ ದಿಟ್ಟವಾಗಿ ಎದುರಿಸಿದ ಈ ಜೋಡಿ, 72 ರನ್​ಗಳ ಜೊತೆಯಾಟವಾಡಿತು. 39 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿದ ದುನಿಲ್​ ವೆಲ್ಲಲಗೆ, ಕುಲ್​ದೀಪ್​​ ಮೋಡಿಗೆ ಬಲಿಯಾದ್ರು. ಕಮಿಂದು ಮೆಂಡೀಸ್​​, ಶ್ರೇಯಸ್​​ ಅಯ್ಯರ್​ ಎಸೆದ ಶರವೇಗದ ಥ್ರೋಗೆ ರನೌಟ್​ ಆದ್ರು. ಅಂತಿಮವಾಗಿ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡ ಶ್ರೀಲಂಕಾ 240 ರನ್​ ಕಲೆಹಾಕಿತು.

ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ರೋಹಿತ್ ಸಿಡಿಲಬ್ಬರ!

ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳೋ ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಆಫ್​ಸೆಂಚುರಿ ಸಿಡಿಸಿದ್ರು. ಭಾನುವಾರದ ಪಂದ್ಯದಲ್ಲೂ ಗ್ರೇಟ್ ಇನ್ನಿಂಗ್ಸ್ ಕಟ್ಟಿದ ರೋಹಿತ್ ಹೊಡಿಬಡಿ ಅಟವಾಡಿದ್ರು. 241 ರನ್​​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ ಹಿಟ್​ಮ್ಯಾನ್,​ 5 ಬೌಂಡರಿ, 4 ಸಿಕ್ಸರ್​​ ಸಿಡಿಸಿ ಘರ್ಜಿಸಿದ್ರು. ಕೇವಲ 29 ಎಸೆತಗಳಲ್ಲೇ ಹಾಫ್​ ಸೆಂಚುರಿ ಚಚ್ಚಿದ್ರು. ಮತ್ತೊಂದೆಡೆ ವೈಸ್ ಕ್ಯಾಪ್ಟನ್ ಶುಭ್​ಮನ್ ಗಿಲ್ ರಕ್ಷಣಾತ್ಮಕ ಜೊತೆಯಾಟವಾಡ್ತಿದ್ರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಉಪನಾಯಕ ಗಿಲ್ ಮೊದಲ ವಿಕೆಟ್‌ಗೆ 97 ರನ್‌ಗಳ ಭರ್ಜರಿ ಆರಂಭ ನೀಡಿದರು. ಆದ್ರೆ 44 ಬಾಲ್​ಗಳಲ್ಲಿ 64 ರನ್​ಗಳಿಸಿದ್ದ ರೋಹಿತ್​ ಶರ್ಮಾ ರಿವರ್ಸ್​ಸ್ವೀಪ್​ ಮಾಡೋ ಯತ್ನದಲ್ಲಿ ವಿಕೆಟ್​ ಕೈ ಚೆಲ್ಲಿದ್ರು. ಅದ್ಯಾವಾಗ ಹಿಟ್​ಮ್ಯಾನ್ ವಿಕೆಟ್ ಬಿತ್ತೋ ಅಲ್ಲಿಂದಲೇ ಶುರುವಾಯ್ತು ನೋಡಿ ಭಾರತೀಯ ಆಟಗಾರರ ಪೆವಿಲಿಯನ್ ಪರೇಡ್.

ನಿರಾಸೆ ಮೂಡಿಸಿದ ಕೊಹ್ಲಿ.. ಶ್ರೇಯಸ್, ರಾಹುಲ್ ಫ್ಲ್ಯಾಪ್!

ರೋಹಿತ್ ಶರ್ಮಾ ಔಟಾದ ಬಳಿಕ ಮತ್ಯಾವ ಆಟಗಾರರು ಕೂಡ ಭಾರತದ ಪರ ಹೆಚ್ಚು ಹೊತ್ತು ಇನ್ನಿಂಗ್ಸ್ ಆಡ್ಲೇ ಇಲ್ಲ. ಉತ್ತಮ ಆಟವಾಡ್ತಿದ್ದ ಶುಭ್​ಮನ್​ ಗಿಲ್​ 35 ರನ್​ಗಳಿಸಿ ನಿರ್ಗಮಿಸಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಮತ್ತೊಂದು ಫ್ಲಾಪ್​ ಶೋ ನೀಡಿದ್ರು.  4 ಬಾಲ್ ಫೇಸ್​ ಮಾಡಿ ಖಾತೆ ತೆರೆಯದೆಯೇ ಔಟಾದ್ರು. ಇನ್ನು ವಿರಾಟ್ ಕೂಡ 19 ಬಾಲ್​ಗಳಲ್ಲಿ 14 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಶ್ರೇಯಸ್​ ಅಯ್ಯರ್ ಕೂಡ​ 7 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ಇನ್ನು ಪ್ರತೀ ಸಲ ಭಾರತಕ್ಕೆ ಆಸರೆಯಾಗ್ತಿದ್ದ ಕೆ.ಎಲ್​ ರಾಹುಲ್​ ಕೂಡ ಡಕೌಟ್​ ಆಗಿ ನಿರ್ಗಮಿಸಿದ್ರು. ಬಟ್ ಭಾರತದ ಪರ ಅಕ್ಷರ್​ ಪಟೇಲ್​​ ಉತ್ತಮ ಆಟವಾಡಿದ್ರು. ವಾಷಿಂಗ್ಟನ್​ ಸುಂದರ್​ ಜೊತೆಗೂಡಿ ಕುಸಿದ ತಂಡಕ್ಕೆ ಆಸರೆಯಾದ್ರು. 44 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು. ಆದ್ರೆ, 33.1ನೇ ಓವರ್​​ನಲ್ಲಿ ಲಂಕಾ ಕ್ಯಾಪ್ಟನ್​ ಅಸಲಂಕ ಅಕ್ಷರ್​​ ಆಟಕ್ಕೆ ಬ್ರೇಕ್​ ಹಾಕಿದ್ರು. ಅಕ್ಷರ್​ ಬೆನ್ನಲ್ಲೆ ಸುಂದರ್​ ಆಟವೂ ಅಂತ್ಯವಾಯ್ತು. ಅಂತಿಮವಾಗಿ 42,2 ಓವರ್​ಗಳಲ್ಲೇ 208 ರನ್​​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಬೌಲಿಂಗ್ ನಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿದ ಲಂಕಾ ಪಡೆ ಭರ್ಜರಿ 32 ರನ್​ಗಳಿಂದ ಬಲಿಷ್ಠ ಭಾರತಕ್ಕೆ ಸೋಲಿನ ಆಘಾತ ನೀಡಿತು.

ಕೊಹ್ಲಿ ವಿಕೆಟ್ ಗಾಗಿ ಲಂಕನ್ನರ ಸಿಟ್ಟು.. ಮೈದಾನದಲ್ಲಿ ಗೊಂದಲ!

ರೋಹಿತ್ ಶರ್ಮಾ ಓಟಾದ ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ ಎರಡು ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದಿದ್ರು. ಇದೇ ವೇಳೆ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣ ಅಕಿ ಧನಂಜಯ ಬೌಲ್ ಮಾಡಿದ ಓವರ್​ನ ಕೊನೆಯ ಎಸೆತದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಆದರು. ಕೂಡಲೇ ಲಂಕಾ ಕ್ರಿಕೆಟಿಗರು ವಿಕೆಟ್​ಗಾಗಿ ಮನವಿ ಮಾಡಿದರು. ಅಂಪೈರ್​ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆ ಬಳಿಕವೇ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೊಹ್ಲಿ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ರಿವ್ಯೂವ್​ನಲ್ಲಿ ಚೆಂಡು ವಿರಾಟ್ ಅವರ ಬ್ಯಾಟ್ ಬಳಿ ಇದ್ದಾಗ ಸ್ನೀಕೋಮೀಟರ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂತು. ಅಂದರೆ ಚೆಂಡು ಬ್ಯಾಟ್‌ಗೆ ತಾಗಿ ಪ್ಯಾಡ್‌ಗೆ ತಾಗಿದಂತೆ ತೋರುತ್ತಿತ್ತು. ಹೀಗಾಗಿ ಮೂರನೇ ಅಂಪೈರ್‌ಗೆ ಈ ನಿರ್ಧಾರವನ್ನು ಬದಲಾಯಿಸದೆ ಬೇರೆ ದಾರಿ ಇರಲಿಲ್ಲ.

ಹೆಲ್ಮೆಟ್ ನೆಲಕ್ಕೆ ಎಸೆದ ವಿಕೆಟ್ ಕೀಪರ್ ಮೆಂಡಿಸ್

ಯಾವಾಗ ವಿರಾಟ್ ಕೊಹ್ಲಿ ಔಟಿಲ್ಲ ಅಂತಾ ಅಂತಿಮ ತೀರ್ಪು ಬಂತೋ ಸಿಟ್ಟಿಗೆದ್ದ ಶ್ರೀಲಂಕಾ ಆಟಗಾರರು ಅಂಪೈರ್ ಜತೆ ವಾಗ್ವಾದಕ್ಕಿಳಿದರು. ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ತಮ್ಮ ತಲೆಯಿಂದ ಹೆಲ್ಮೆಟ್ ತೆಗೆದು ನೆಲಕ್ಕೆ ಎಸೆದರು. ನಾಯಕ ಚರಿತ್ ಅಸಲಂಕಾ ಕೂಡ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಲು ಆರಂಭಿಸಿದರು. ಶ್ರೀಲಂಕಾದ ಕೋಚ್ ಸನತ್ ಜಯಸೂರ್ಯ ಮೈದಾನದ ಡ್ರೆಸ್ಸಿಂಗ್ ರೂಮ್‌ನಿಂದ ಕೆಳಗಿಳಿದು ಬೌಂಡರಿ ಬಳಿ ಕುಳಿತಿದ್ದ ನಾಲ್ಕನೇ ಅಂಪೈರ್‌ನನ್ನು ಪ್ರಶ್ನಿಸಲು ಆರಂಭಿಸಿದರು. ಲಂಕನ್ನರ ಸಿಟ್ಟಿಗೆ ಕಾರಣ ಚೆಂಡು ಕೊಹ್ಲಿಯ ಬ್ಯಾಟ್‌ಗೆ ಬಹಳ ಹತ್ತಿರದಲ್ಲಿತ್ತು. ಆದರೆ ಒಂದು ಫ್ರೆಮ್ ಮುಂದೆ ಸರಿದಾಗ ಚೆಂಡು ಬ್ಯಾಟ್​ನ ಬಳಿ ಇದ್ದರೂ, ಸ್ನೀಕೋಮೀಟರ್‌ನಲ್ಲಿ ಯಾವುದೇ ವೇವ್ಸ್ ಇರಲಿಲ್ಲ. ಇದು ಲಂಕಾ ಆಟಗಾರನನ್ನು ಕೆರಳಿಸಿತು. ಬ್ಯಾಟ್‌ನ ಪಕ್ಕದಲ್ಲಿ ಚೆಂಡು ಇದ್ದರೂ ಸ್ನೀಕೋಮೀಟರ್‌ನಲ್ಲಿ ಏರಿಳಿತ ಇಲ್ಲ. ಹಾಗಿದ್ದರೂ ನಿರ್ಧಾರವನ್ನು ಏಕೆ ಬದಲಾಯಿಸಿದ್ರಿ ಅಂತಾ ಅಸಮಾಧಾನ ಹೊರಹಾಕಿದರು. ಆದ್ರೆ ಇದಾದ ಕೆಲವೇ ಹೊತ್ತಲ್ಲಿ ವಿರಾಟ್ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆಗೆ ವಿಕೆಟ್ ಒಪ್ಪಿಸಿದ್ರು.

ಲಂಕಾ ಪರ ವಾಂಡರ್ಸೆ ವಂಡರ್​ ಫುಲ್ ಬೌಲಿಂಗ್!

ಭಾರತ ತಂಡದಲ್ಲಿ ಬಲಿಷ್ಠ ಮತ್ತು ಸ್ಟಾರ್ ಬ್ಯಾಟರ್​​ಗಳೇ ಇದ್ರೂ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಲಂಕಾದ ಬೌಲರ್ಸ್. ಅದ್ರಲ್ಲೂ ಜೆಫ್ರಿ ವಾಂಡರ್ಸೆ. ಕೊಲಂಬೊದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ವಾಂಡರ್ಸೆ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಜೆಫ್ರಿ ವಾಂಡರ್ಸೆ 10 ಓವರ್ ಗಳಲ್ಲಿ 33 ರನ್ ನೀಡಿ ಟೀಂ ಇಂಡಿಯಾದ ಪ್ರಮುಖ 6 ವಿಕೆಟ್ ಕಬಳಿಸಿ ಮಿಂಚಿದ್ರು. ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಶ್ರೇಯಸ್ ಅಯ್ಯರ್ ಹಾಗೇ ಕೆಎಲ್ ರಾಹುಲ್​ರ ವಿಕೆಟ್ ಕಿತ್ತು ಪೆವಿಲಿಯನ್ ದಾರಿ ತೋರಿಸಿದ್ರು. ಭಾರತದ ಪರ ಎಲ್ಲಾ ಪ್ರಮುಖ ಬ್ಯಾಟರ್​ಗಳ ವಿಕೆಟ್ ಬೇಟೆಯಾಡಿದ ವಾಂಡರ್ಸೆ ಟೀಮ್ ಇಂಡಿಯಾ ಎದುರು ವಿಶೇಷ ದಾಖಲೆ ಕೂಡ ಬರೆದ್ರು. ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಷ್ತಾಕ್ ಅಹ್ಮದ್ ಅವರ ದಾಖಲೆಯನ್ನು ವಾಂಡರ್ಸೆ ಮುರಿದಿದ್ದಾರೆ. ಮುಷ್ತಾಕ್ ಅಹ್ಮದ್ 1996ರಲ್ಲಿ ಟೊರೊಂಟೊದಲ್ಲಿ 36 ರನ್ ನೀಡಿ 5 ವಿಕೆಟ್ ಪಡೆದಿದ್ದರು.

ಧೋನಿ, ದ್ರಾವಿಡ್ ದಾಖಲೆ ಸರಿಗಟ್ಟಿದ ಹಿಟ್ ಮ್ಯಾನ್!

ಟೀಂ ಇಂಡಿಯಾ ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಸೋತಿರಬಹುದು. ಆದ್ರೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಮಾತ್ರ ಗೆದ್ದಿದ್ದಾರೆ. ಹಾಗೇ ದಾಖಲೆಯನ್ನೂ ಬರೆದಿದ್ದಾರೆ. ಆರಂಭದಿಂದಲೂ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಇಂದು ಏಕದಿನ ಕ್ರಿಕೆಟ್​ನ 59ನೇ ಅರ್ಧಶತಕ ಪೂರೈಸಿದರು. ಅವರ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 64 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಈ ಇನ್ನಿಂಗ್ಸ್​ ಮೂಲಕ ಸಚಿನ್​, ದ್ರಾವಿಡ್​ ಹಾಗೂ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದರು. ಭಾರತದ ಪರ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟರ್​ ಲಿಸ್ಟ್​ನಲ್ಲಿ ರಾಹುಲ್ ದ್ರಾವಿಡ್​ರನ್ನ ಹಿಂದಿಕ್ಕಿ 4ನೇ ಸ್ಥಾನ ಪಡೆದುಕೊಂಡರು. ರಾಹುಲ್ ದ್ರಾವಿಡ್​ 340 ಪಂದ್ಯಗಳಲ್ಲಿ 10,768ರನ್​ಗಳಿಸಿದ್ದರು.  ರೋಹಿತ್ ಶರ್ಮಾ ಕೇವಲ 263 ಪಂದ್ಯಗಳಲ್ಲೇ ಈ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಸಚಿನ್​ ತೆಂಡೂಲ್ಕರ್​ ಮೊದಲನೇ ಸ್ಥಾನದಲ್ಲಿದ್ದಾರೆ. ಸಚಿನ್​ 18,426 ರನ್​ಗಳಿಸಿದ್ದಾರೆ. ನಂತರ ವಿರಾಟ್​ ಕೊಹ್ಲಿ 13,872 ರನ್ ಗಳಿಸಿದ್ರೆ ಹಾಗೂ ಸೌರವ್​ ಗಂಗೂಲಿ 11,221ರನ್ ಗಳ ಮೂಲಕ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಪಂದ್ಯದ ಸೋಲಿನ ಬಳಿಕ ಮಾತನಾಡಿದ ನಾಯಕ  ರೋಹಿತ್ ಶರ್ಮಾ, ನಾನು ಬ್ಯಾಟಿಂಗ್ ಮಾಡಿದ ರೀತಿಯೇ 65 ರನ್ ಗಳಿಸಲು ಕಾರಣವಾಗಿದ್ದು. ಸಾಕಷ್ಟು ರಿಸ್ಕ್ ತೆಗೆದುಕೊಂಡು ನಾನು ಹಾಗೆ ಬ್ಯಾಟಿಂಗ್ ಮಾಡುತ್ತೇನೆ. ನನ್ನ ಬ್ಯಾಟಿಂಗ್ ಶೈಲಿ ಹೀಗೆಯೇ ಮುಂದುವರಿಯಲಿದೆ. ನಿದಾನಗತಿಯಲ್ಲಿ ಬ್ಯಾಟ್ ಬೀಸಲ್ಲ. ಪಂದ್ಯ ಸೋತಾಗ ಎಲ್ಲವೂ ನೋವುಂಟುಮಾಡುತ್ತದೆ. ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫರಾಗಿದ್ದು, ಸ್ವಲ್ಪ ನಿರಾಶೆ ಆಗಿದೆ. ಪಂದ್ಯದಲ್ಲಿ ನಾವು ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಗಮನಹರಿಸಲು ಬಯಸುವುದಿಲ್ಲ. ಆದರೆ ಮಿಡಲ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಟೀಮ್​ ಇಂಡಿಯಾ ಬ್ಯಾಟಿಂಗ್ ವೈಫಲ್ಯಯನ್ನ ಒಪ್ಪಿಕೊಂಡ್ರು.

ಒಟ್ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಬಿರುಸಿದ ಆಟವಾಡಿ ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಮತ್ಯಾವ ಆಟಗಾರರು ನೀರೀಕ್ಷಿತ ಪ್ರದರ್ಶನ ತೋರಲಿಲ್ಲ. ಎರಡೂ ಏಕದಿನ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದ ರೋಹಿತ್ ಅರ್ಧಶತಕ ಗಳಿಸಿದ್ದರು. ಹಾಗೇ ಕಂಪ್ಲೀಟ್ ಕುಸಿದಿದ್ದ ಭಾರತದ ಅಕ್ಷರ್ ಪಟೇಲ್ ಕೂಡ ಜವಾಬ್ದಾರಿಯುತ ಆಟವಾಡಿದ್ರು. ಬಟ್ ಸಿಕ್ಕಿರೋ ಅವಕಾಶವನ್ನ ಕೈ ಚೆಲ್ಲಿಕೊಂಡ ಶ್ರೇಯರ್ ಅಯ್ಯರ್, ಶಿವಂ ದುಬೆ, ಕೆಎಲ್ ರಾಹುಲ್ ಮುಂದಿನ ಪಂದ್ಯದಲ್ಲಾದ್ರೂ ಇಂಪ್ರೂವ್ ಆಗ್ತಾರಾ ಅನ್ನೋದನ್ನ ನೋಡ್ಬೇಕು. ಇನ್ನು 3 ಸರಣಿಗಳ ಮೂರನೇ ಪಂದ್ಯ ಆಗಸ್ಟ್ 7ರಂದು ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಯಾಕಂದ್ರೆ ಈಗಾಗ್ಲೇ ಮೊದಲ ಪಂದ್ಯ ಡ್ರಾ ಆಗಿದೆ. ಎರಡನೇ ಪಂದ್ಯವನ್ನ ಲಂಕನ್ನರು ಗೆದ್ದಿದ್ದಾರೆ. ಸೋ ಮೂರನೇ ಪಂದ್ಯದಲ್ಲಿ ರೋಹಿತ್ ಪಡೆ ಸೋತ್ರೆ ತೀವ್ರ ಮುಖಭಂಗವಾಗಿದೆ. ಅಲ್ದೇ 2006ರ ನಂತರ ಮೊದಲ ಬಾರಿಗೆ ಭಾರತ ವಿರುದ್ಧ ಶ್ರೀಲಂಕಾ ಏಕದಿನ ಸರಣಿಯನ್ನು ಉಳಿಸಿಕೊಂಡಿದೆ. ಇದಲ್ಲದೇ 2012ರ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡ ಸೋತಿಲ್ಲ. ಬಟ್ ಮೂರನೇ ಪಂದ್ಯ ಏನಾಗುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M