ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ನಕ್ಷತ್ರ ಸ್ಫೋಟ – ಹೇಗಿದೆ ಗೊತ್ತಾ ಚಿತ್ತಾಕರ್ಷಕ ದೃಶ್ಯ?
ಖಗೋಳದಲ್ಲಿ ನಡೆಯುವ ವಿಸ್ಮಯಗಳು ವಿಜ್ಞಾನಲೋಕಕ್ಕೂ ಸವಾಲ್ ಹುಟ್ಟಿಸುತ್ತವೆ. ಸೂರ್ಯ, ಚಂದ್ರ, ನಕ್ಷತ್ರಪುಂಜ, ಗ್ರಹಗಳ ಬಗ್ಗೆ ವಿಜ್ಷಾನಿಗಳು ನಿರಂತರವಾಗಿ ಅಧ್ಯಯನ ನಡೆಸುತ್ತಲೇ ಇರುತ್ತಾರೆ. ಬಾಹ್ಯಕಾಶದಲ್ಲಿ ನಡೆಯುವ ಕುತೂಹಲಕಾರಿ ಸಂಗತಿ, ಅಪಾಯದ ಮುನ್ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ನಕ್ಷತ್ರಪುಂಜ ಒಂದರಲ್ಲಿ ನಕ್ಷತ್ರವೊಂದು ಸ್ಫೋಟಿಸಿ ಉಂಟಾದ ʼಸೂಪರ್‌ನೊವಾ’ ಅನ್ನು ಭಾರತೀಯ ಖಗೋಳಶಾಸ್ತ್ರಜ್ಞರು ದೂರದರ್ಶಕದಲ್ಲಿ ಸೆರೆಹಿಡಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ
ʼಎಂ101′ ಎಂಬ ನಕ್ಷತ್ರಪುಂಜದಲ್ಲಿ ಈ ಸೂಪರ್‌ನೊವಾ ಉಂಟಾಗಿದೆ. ಮೇ 19 ಮತ್ತು ಮೇ 22ರಂದು ದೂರದರ್ಶಕದಲ್ಲಿ ಎರಡು ಫೋಟೋಗಳು ಸೆರೆಯಾಗಿದೆ. “ಸೂಪರ್‌ನೊವಾ”ವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳಾದ ಫಹಾದ್ ಬಿನ್ ಅಬ್ದುಲ್ ಹಸಿಸ್, ಕಿರಣ್ ಮೋಹನ್ ಹಾಗೂ ಲಿಕ್ವಿಡ್ ಪ್ರೊಪಲನ್ ಸಿಸ್ಟಮ್ಸ್ ಸೆಂಟರ್(ಎಲ್‌ಪಿಎಸ್‌ಸಿ)ನ ವಿಶಾಖ್ ಶಶಿಧರನ್ ಅವರು ಸೆರೆಹಿಡಿದಿದ್ದಾರೆ.
ಈ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ನಕ್ಷತ್ರವು ತನ್ನ ಜೀವನದ ಅಂತ್ಯವನ್ನು ತಲುಪಿದಾಗ ಮತ್ತು ಅದರ ಮಧ್ಯಭಾಗದಲ್ಲಿ ಪರಮಾಣು ಸಮ್ಮಿಲನಕ್ಕಾಗಿ ಇಂಧನ ಖಾಲಿಯಾದಾಗ ಈ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಇಡೀ ನಕ್ಷತ್ರಪುಂಜವನ್ನು ಆವರಿಸುತ್ತದೆ. ಈ ಸ್ಫೋಟವನ್ನೇ “ಸೂಪರ್‌ನೊವಾ” ಎಂದು ಕರೆಯಲಾಗುತ್ತದೆ. ಈಗ ಸಂಭವಿಸಿದ ಸ್ಫೋಟ “ಟೈಪ್-2 ಸೂಪರ್‌ನೊವಾ’ ವಿಭಾಗಕ್ಕೆ ಬರಲಿದೆ.
ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ಅಧಿಕ ಗಾತ್ರವಿರುವ ಈ ನಕ್ಷತ್ರವು ಇಂಧನ ಖಾಲಿಯಾಗಿ ಸ್ಫೋಟಗೊಂಡಿದ್ದು, ಜತೆಗೆ ತನ್ನದೇ ಗುರುತ್ವಾಕರ್ಷಣೆಯ ಅಡಿಯಲ್ಲಿ ಸಂಕುಚಿತಗೊಳ್ಳಲು ಪ್ರಾರಂಭಿಸಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.