ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳು ಸಾವು

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳು ಸಾವು

ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೆಲಂಗಾಣದಲ್ಲಿ ಸೋಮವಾರ ಪತನವಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣದ ಮೇದಕ್‌ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿಸೋಮವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ ವಾಡಿಕೆಯ ತರಬೇತಿಗಾಗಿ Pilatus PC 7 Mk-II ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಕಾರು ಡಿಕ್ಕಿ – ರಸ್ತೆಯಲ್ಲೇ ಹೊತ್ತಿಯುರಿದ ವಾಹನಗಳು, 30 ಪ್ರಯಾಣಿಕರು ಬಚಾವ್..!

ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನಾವು ಅವರ ಕುಟುಂಬಗಳೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ.

ಪಿಲಾಟಸ್ PC 7 Mk-II ವಿಮಾನವು ಒಂದೇ ಎಂಜಿನ್‌ ಒಳಗೊಂಡ ತರಬೇತಿ ವಿಮಾನವಾಗಿದೆ. IAF ಪೈಲಟ್‌ಗಳ ತರಬೇತಿಗಾಗಿ ಇದನ್ನು ಬಳಸಲಾಗುತ್ತದೆ. ಸ್ವಿಟ್ಜರ್‌ಲೆಂಡಿನ ಪಿಲಾಟಸ್ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ, ತಯಾರಿಸಲಿದೆ. ಈ ವಿಮಾನವನ್ನು ಏರೋಬ್ಯಾಟಿಕ್ಸ್, ಯುದ್ಧತಂತ್ರ ಮತ್ತು ರಾತ್ರಿ ಹಾರಾಟ ಸೇರಿದಂತೆ ಎಲ್ಲಾ ಮೂಲಭೂತ ತರಬೇತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರಿಸುಮಾರು 1,330 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

Shwetha M