ನ್ಯೂಝಿಲೆಂಡ್ ವಿರುದ್ಧ ಭಾರತ ಜಯ- 25 ವರ್ಷದ ಹಳೆಯ ಲೆಕ್ಕ ಚುಕ್ತಾ

ನ್ಯೂಝಿಲೆಂಡ್ ವಿರುದ್ಧ ಭಾರತ ಜಯ- 25 ವರ್ಷದ ಹಳೆಯ ಲೆಕ್ಕ ಚುಕ್ತಾ

ಚಾಂಪಿಯನ್ಸ್ ಟ್ರೋಫಿಯ 12ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಜಯಭೇರಿ ಬಾರಿಸಿದೆ. ಈ ಮೂಲಕ ಟೀಮ್ ಇಂಡಿಯಾ ಕಿವೀಸ್ ಪಡೆ ವಿರುದ್ಧ 25 ವರ್ಷಗಳ ಹಳೆಯ ಲೆಕ್ಕವನ್ನು ಚುಕ್ತಾ ಮಾಡಿದ್ದಾರೆ. ಅಂದರೆ 2000ರ ಬಳಿಕ ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲೆಂಡ್ ವಿರುದ್ಧದ ಭಾರತದ ಮೊದಲ ಗೆಲುವು ಎಂಬುದು ವಿಶೇಷ. ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್​ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಶ್ರೇಯಸ್ ಅಯ್ಯರ್ 77 ರನ್​ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ 45 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಬಾರಿಸಿದರು.

250 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಈ ಬಾರಿ ಕೂಡ ಭಾರತಕ್ಕೆ ಸೋಲುಣಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

10 ಓವರ್​ಗಳಲ್ಲಿ ಕೇವಲ 42 ರನ್ ನೀಡಿದ ವರುಣ್ ಚಕ್ರವರ್ತಿ 5 ಪ್ರಮುಖ ವಿಕೆಟ್ ಕಬಳಿಸಿದರು. ಪರಿಣಾಮ 45.3 ಓವರ್​ಗಳಲ್ಲಿ 205 ರನ್​ಗಳಿಸಿ ನ್ಯೂಝಿಲೆಂಡ್ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 44 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

 

Kishor KV

Leave a Reply

Your email address will not be published. Required fields are marked *