ಸಿಂಹಳೀಯರ ಸೊಕ್ಕು ಮುರಿದ ಭಾರತ – ಸೂಪರ್ ಓವರ್ನಲ್ಲಿ ಡ್ರಾಮಾ.. ಮಂಡಿಯೂರಿದ ಶ್ರೀಲಂಕಾ

ಏಷ್ಯಾಕಪ್ನ ಕೊನೆಯ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಸೂಪರ್ ಓವರ್ನಲ್ಲಿ ಗೆದ್ದು ಅಜೇಯವಾಗಿ ಫೈನಲ್ ತಲುಪಿದೆ. ಈ ಮೂಲಕ ಭಾರತ ತಂಡ ಸತತ 6ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಏಷ್ಯಾಕಪ್ನಲ್ಲಿ ತನ್ನ ಅಜೇಯ ಓಟವನ್ನ ಮುಂದುವರಿಸಿದೆ. ಕಳೆದ ಒಂದು ವರ್ಷದಲ್ಲಿ ಭಾರತ ತಂಡದ ಸತತ 3ನೇ ಬಹುರಾಷ್ಟ್ರಗಳ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದಂತಾಗಿದೆ.
ಇದನ್ನೂ ಓದಿ: ಇಂಡೋ-ಪಾಕ್ FINAL – ಹಿಸ್ಟರಿಯ ಫಸ್ಟ್ VICTORY ಯಾರಿಗೆ?
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬರೋಬ್ಬರಿ 202 ರನ್ ಕಲೆಹಾಕಿದ್ದರು. 203 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಪರ ಪಾತುಮ್ ನಿಸ್ಸಂಕಾ ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಲಂಕಾ ತಂಡ ಕೂಡಾ 202 ರನ್ ಗಳಿಸಿತ್ತು. ನಂತರ ನಡೆದಿದ್ದು ಸೂಪರ್ ಓವರ್. ಆದರೆ ಸೂಪರ್ ಓವರ್ನಲ್ಲಿ ಶ್ರೀಲಂಕಾ ಕೇವಲ 2 ರನ್ಗಳಿಸಲಷ್ಟೆ ಶಕ್ತವಾಯಿತು. 3 ರನ್ಗಳ ಗುರಿಯನ್ನ ಭಾರತ ಮೊದಲ ಎಸೆತದಲ್ಲೇ ಗೆದ್ದು ಫೈನಲ್ ಪ್ರವೇಶಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ಗಳಿಸಿತ್ತು. ಗೋಲ್ಡನ್ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 61, ತಿಲಕ್ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 49 ರನ್ ಸಂಜು ಸ್ಯಾಮ್ಸನ್ 23 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 39 ರನ್ ಹಾಗೂ ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ತಲಾ 1 ಬೌಂಡರಿ, 1ಸಿಕ್ಸರ್ ಸಹಿತ ಅಜೇಯ 21 ರನ್ಗಳಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದ್ದರು. ಇನ್ನು ಗಿಲ್ (4), ಹಾರ್ದಿಕ್ ಪಾಂಡ್ಯ 2, ನಾಯಕ ಸೂರ್ಯಕುಮಾರ್ ಯಾದವ್ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದ ನಿರಾಶೆ ಮೂಡಿಸಿದರು.
203 ರನ್ಗಳ ಚೇಸಿಂಗ್ ಆರಂಭಿಸಿದ ಶ್ರೀಲಂಕಾ, ಆರಂಭದಲ್ಲೇ ಬ್ಯಾಟರ್ ಕುಸಾಲ್ ಮೆಂಡಿಸ್ ವಿಕೆಟ್ ಕಳೆದುಕೊಂಡಿತ್ತು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಿಸ್ಸಾಂಕ ಹಾಗೂ ಕುಶಾಲ್ ಪೆರೆರಾ ಭಾರತೀಯ ಬೌಲರ್ಗಳನ್ನ ಬೆಂಡೆತ್ತಿದ್ದರು. ಇಬ್ಬರು 70 ಎಸೆತಗಳಲ್ಲಿ 127 ರನ್ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ಯತ್ತಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಇಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಅಪಾಯಕಾರಿ ಜೋಡಿಯನ್ನ ಬ್ರೇಕ್ ಮಾಡಿ ಪಂದ್ಯದಲ್ಲಿ ಭಾರತ ಕಮ್ಬ್ಯಾಕ್ ಮಾಡುವಂತೆ ಮಾಡಿದರು. ಶ್ರೀಲಂಕಾ ಪರ, ಪತುಮ್ ನಿಸ್ಸಂಕಾ 58 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ಗಳ ಸಹಿತ 107 ರನ್ಗಳಿಸಿದ್ದರು. ಕೊನೆಗೂ ಶ್ರೀಲಂಕಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ಗಳಿಸಿದರು.
ಸೂಪರ್ ಓವರ್ ಆರಂಭಿಸಿದ ಶ್ರೀಲಂಕಾ ಅರ್ಷದೀಪ್ ಸಿಂಗ್ ಎಸೆದ ಮೊದಲ ಎಸೆತದಲ್ಲೇ ಕುಸಾಲ್ ಪೆರೆರಾ ದೊಡ್ಡ ಎಸೆತಕ್ಕೆ ಕೈಹಾಕಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು. 2ನೇ ಎಸೆತದಲ್ಲಿ ಕಮಿಂಡು ಮೆಂಡಿಸ್ ಸಿಂಗಲ್ ತೆಗೆದುಕೊಂಡರೆ, 3ನೇ ಎಸೆತದಲ್ಲಿ ಡಾಟ್ ಮಾಡಿ ನಂತರ ವೈಡ್ ಎಸೆದರು. ಮೊದಲ ಮೂರು ಎಸೆತಗಳಲ್ಲಿ 2 ರನ್ ಬಿಟ್ಟುಕೊಟ್ಟ ಅರ್ಷದೀಪ್ 4ನೇ ಎಸೆತದಲ್ಲಿ ಡಾಟ್ ಮಾಡಿದರು. ಆದರೆ ಶನಕ ಬಾಲ್ ಗುರುತಿಸುವಲ್ಲಿ ವಿಫಲರಾದರು. ಚೆಂಡು ನೇರವಾಗಿ ಸಂಜು ಸ್ಯಾಮ್ಸನ್ ಕೈ ಸೇರಿತು. ಬೈ ರನ್ಗಾಗಿ ಓಡುವಾಗ ಸಂಜು ಸ್ಟಂಪ್ಗೆ ಅಪ್ಪಳಿಸಿದರು. ರನ್ ಔಟ್ ಆದರೂ, ಇತ್ತ ಅರ್ಷದೀಪ್ ಕ್ಯಾಚ್ಗಾಗಿ ಮನವಿ ಮಾಡಿ ಎಡವಟ್ಟು ಮಾಡಿಕೊಂಡರು. ಅಂಪೈರ್ ತಕ್ಷಣ ಕ್ಯಾಚ್ ಔಟ್ ಎಂದು ತೀರ್ಪು ನೀಡಿದರು. ತಕ್ಷಣವೇ ಶನಕ ರಿವ್ಯೂವ್ ತೆಗೆದುಕೊಂಡರು. ರಿಪ್ಲೇನಲ್ಲಿ ಚೆಂಡು ಬ್ಯಾಟ್ಗೆ ತಾಗಿರಲಿಲ್ಲ. ಹಾಗಾಗಿ ಬಾಲ್ ಡೆಡ್ ಎಂದು ಘೋಷಿಸಿಲಾಯಿತು. ಹಾಗಾಗಿ ರನ್ಔಟ್ ವಾಪಸ್ ತೆಗೆದುಕೊಂಡು, ಮತ್ತೆ ಶನಕಾಗೆ ಬ್ಯಾಟ್ ಮಾಡಲು ಅವಕಾಶ ನೀಡಲಾಯಿತು. ಆದರೆ ಈ ಅವಕಾಶವನ್ನ ಶನಕ ಉಪಯೋಗಿಸಿಕೊಳ್ಳಲು ವಿಫಲರಾದರು. 5ನೇ ಎಸೆತದಲ್ಲಿ ಜೀತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ 1 ಎಸೆತ ಇರುವಂತೆ ಶ್ರೀಲಂಕಾ ಸೂಪರ್ ಓವರ್ನಲ್ಲಿ ಆಲ್ಔಟ್ ಆಗಿ ಕೇವಲ 3 ರನ್ ಗುರಿ ನೀಡಿತು. ನಂತರ ಹಸರಂಗ ಎಸೆದ ಸೂಪರ್ ಓವರ್ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ 3 ರನ್ ತೆಗೆದು ಭಾರತಕ್ಕೆ ಗೆಲುವು ತಂದುಕೊಟ್ಟರು.

ನೋಡಿರಿ

