ICC ವಿಶ್ವಕಪ್ ಫೈನಲ್ ದಿನವೇ ಏರ್ ಇಂಡಿಯಾ ವಿಮಾನ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ – ಕೆನಡಾಗೆ ಎಚ್ಚರಿಕೆ ಕೊಟ್ಟಿದ್ದೇಕೆ ಮೋದಿ?
ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಹೋರಾಟದ ಕಿಚ್ಚಿನಲ್ಲಿ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಉಭಯ ರಾಷ್ಟ್ರಗಳ ವಾಣಿಜ್ಯ ವ್ಯಾಪಾರ ಸಂಬಂಧಕ್ಕೂ ಎಳ್ಳುನೀರು ಬಿಡುವಂತಾಗಿದೆ. ರಾಜತಾಂತ್ರಿಕ ಅಧಿಕಾರಿಗಳನ್ನ ಪರಸ್ಪರ ಎತ್ತಂಗಡಿ ಮಾಡಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದರ ನಡುವೆ ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರರು ಭಾರತದ ವಿಮಾನ ಸ್ಫೋಟಿಸುವ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಅಲರ್ಟ್ ಆಗಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದ ಅದೊಂದು ಮಾತು ಇವತ್ತು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸಿದೆ. ಸಿಖ್ ಪ್ರತ್ಯೇಕವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಹಾಗೇ ಭಾರತದ ಅಧಿಕಾರಿಯನ್ನು ಕೆನಡಾ ಉಚ್ಚಾಟಿಸಿತ್ತು. ಇದರ ಬೆನ್ನಲ್ಲೇ ಭಾರತ ಕೂಡ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟನೆ ಮಾಡಿತ್ತು. ಅಲ್ಲದೆ ದೇಶದಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿಯ ಗಾತ್ರವನ್ನು ಕಡಿತಗೊಳಿಸಲು ಸೂಚಿಸಿತ್ತು. ಭಾರತದ ಆದೇಶದ ಅನುಸಾರ 41 ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ವಾಪಸ್ ಕರೆಸಿಕೊಂಡಿತ್ತು. ಹರ್ದೀಪ್ ನಿಜ್ಜಾರ್ ಹತ್ಯೆ ಬಳಿಕ ಕೆನಡಾ ವಿರುದ್ಧ ಭಾರತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಕೆನಡಿಯನ್ನರ ಮೇಲಿನ ಕೆಲವು ವೀಸಾ ನಿರ್ಬಂಧಗಳನ್ನು ಹೇರಿಕೆ ಮಾಡಿ ಬಳಿಕ ಸಡಿಲಗೊಳಿಸಿದೆ. ಇದೀಗ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಅಷ್ಟಕ್ಕಷ್ಟೇ ಎನ್ನುವಂತಿದೆ. ಇದರ ನಡುವೆ ಖಲಿಸ್ತಾನಿ ಉಗ್ರ ಏರ್ ಇಂಡಿಯಾ ವಿಮಾನವನ್ನ ಬ್ಲಾಸ್ಟ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಇದೇ ಕಾರಣಕ್ಕೆ ಭಾರತೀಯ ವಿಮಾನಗಳಿಗೆ ಭದ್ರತೆ ನೀಡುವಂತೆ ಭಾರತ ಕೆನಡಾವನ್ನು ಒತ್ತಾಯಿಸಿದೆ.
ಇದನ್ನೂ ಓದಿ : ಅಣ್ವಸ್ತ್ರ ಪ್ರಯೋಗಕ್ಕೂ ಮುನ್ನ ರಷ್ಯಾ ಮಿಸೈಲ್ ಪರೀಕ್ಷೆ – ಅಮೆರಿಕಕ್ಕೆ ಪುಟಿನ್ ನೇರ ಸವಾಲು?
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ ವಿಡಿಯೋ ರಿಲೀಸ್ ಮಾಡಲಾಗಿದೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ನವೆಂಬರ್ 19ರಂದು ಸಿಖ್ಖರು ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು. ಅಂದು ಏರ್ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು. ನವೆಂಬರ್ 19 ಇಂದಿರಾ ಗಾಂಧಿ ಜನ್ಮದಿನ ಹಿನ್ನೆಲೆ ಅಂದೇ ವಿಮಾನಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ನವೆಂಬರ್ 19 ರಂದು ನೀವು ಏರ್ ಇಂಡಿಯಾ ವಿಮಾನ ಏರಿದರೆ ಮರಳಿ ಭೂಮಿಗೆ ಬರುವುದಿಲ್ಲ ಎಂದಿದ್ದಾನೆ. ಉಗ್ರನ ಬೆದರಿಕೆ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಭಾರತ ಸರ್ಕಾರ ಕೆನಡಾಗೆ ಆಗ್ರಹಿಸಿದೆ. ಕೆನಡಾದಿಂದ ಭಾರತಕ್ಕೆ ಆಗಮಿಸುವ, ಭಾರತದಿಂದ ಕೆನಡಾಗೆ ತೆರಳುವ ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದೆ. ಭಾರತದಿಂದ ಕೆನಡಾ ನಗರಗಳಾದ ಟೊರಂಟೊ, ವ್ಯಾಂಕವರ್ಗೆಗೆ ವಾರದಲ್ಲಿ ಹಲವು ವಿಮಾನಗಳು ಸಂಚರಿಸುತ್ತವೆ. ಹೀಗಾಗಿ ಕೆನಡಾ ಸರ್ಕಾರ ವಿಮಾನಗಳಿಗೆ ಭದ್ರತೆ ಒದಗಿಸಬೇಕು ಎಂದು ಭಾರತ ಆಗ್ರಹಿಸಿದೆ.
ಅಷ್ಟಕ್ಕೂ ಈ ಉಗ್ರನ ಬೆದರಿಕೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಲು ಕಾರಣವೂ ಇದೆ. ವಿಮಾನಗಳಿಗೆ ಭದ್ರತೆ ನೀಡುವಂತೆ ಕೆನಡಾವನ್ನು ಆಗ್ರಹಿಸಿರೋಕೆ ಇತಿಹಾಸದ ಕರಾಳ ನೆನಪೂ ಇದೆ. 1985ರಲ್ಲಿ ನಡೆದಿದ್ದ ಕಾನಿಷ್ಕಾ ಬಾಂಬ್ ಬ್ಲಾಸ್ಟ್ ಪ್ರಕರಣ ಭಾರತದ ಪಾಲಿಗೆ ಎಂದೂ ಮರೆಯೋಕೆ ಸಾಧ್ಯವಿಲ್ಲ. ಕೆನಡಾದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳು 39 ವರ್ಷಗಳ ಹಿಂದೆಯೇ 329 ಜನರನ್ನ ದಾರುಣವಾಗಿ ಕೊಂದಿದ್ದರು. ಭಾರತವನ್ನು ಹಲವು ರಾಷ್ಟ್ರಗಳಾಗಿ ವಿಭಜಿಸಲು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಲೇ ಬಂದಿದ್ದಾರೆ. ಭಾರತದಲ್ಲೇ ಇದ್ದು ಕೆನಡಾಗೆ ವಲಸೆ ಹೋದರೂ ಕೂಡ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. 20ನೇ ಶತಮಾನದ ಮೊದಲ ದಶಕದಲ್ಲಿ ಕೆನಡಾಗೆ ಭಾರತದ ಸಿಖ್ಖರ ವಲಸೆ ಪ್ರಾರಂಭವಾಗಿತ್ತು. 1970 ರ ಹೊತ್ತಿಗೆ ಸಿಖ್ಖರು ಕೆನಡಾದ ಸಮಾಜದ ಭಾಗವೇ ಆಗಿ ಹೋಗಿದ್ದರು. 1980-90ರ ದಶಕದಲ್ಲಿ ಪಂಜಾಬ್ ನಲ್ಲಿ ಖಲಿಸ್ತಾನಿ ಚಳವಳಿ ತೀವ್ರಗೊಂಡು ಹಿಂಸಾಚಾರಗಳು ಭುಗಿಲೆದ್ದವು. ಬಾಂಬ್ ದಾಳಿ, ಹತ್ಯೆ, ಕಿಡ್ನ್ಯಾಪ್, ಟಾರ್ಗೆಟೆಡ್ ಮರ್ಡರ್, ನಾಗರಿಕರ ಹತ್ಯಾಕಾಂಡ ಮಿತಿ ಮೀರಿತು. 1985ರ ಜೂನ್ 1 ರಂದು ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಸಂದೇಶ ರವಾನಿಸಿದ್ರು. ಖಲಿಸ್ತಾನಿ ಉಗ್ರವಾದಿಗಳು ವಿಮಾನ ಸ್ಫೋಟಿಸುವ ಮುನ್ಸೂಚನೆ ಇದ್ದು, ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿತ್ತು. ಆದ್ರೆ ಕೆನಡಾ ಸರ್ಕಾರ ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ ಅನ್ನಿಸುತ್ತೆ. ಅದೇ ವರ್ಷದ ಜೂನ್ 23 ರಂದು ಏರ್ ಇಂಡಿಯಾ ವಿಮಾನ ಕಾನಿಷ್ಕಾದಲ್ಲಿ ಸೂಟ್ ಕೇಸ್ ಬಾಂಬ್ ಇಡಲಾಗಿತ್ತು. ಟೊರೊಂಟೊದಿಂದ ಬ್ರಿಟನ್ ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ ಕಾನಿಷ್ಕಾ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಅದರಲ್ಲಿ ಬಹುತೇಕರು ಕೆನಡಾ ಪ್ರಜೆಗಳೇ ಆಗಿದ್ದರು. 82 ಮಕ್ಕಳು ಸೇರಿ ಎಲ್ಲಾ 329 ಪ್ರಯಾಣಿಕರನ್ನು ಹತ್ಯೆ ಮಾಡಲಾಗಿತ್ತು. ಕಾನಿಷ್ಕಾ ದಾಳಿಯ ಸೂತ್ರಧಾರಿಯಾಗಿದ್ದ ಪಾರ್ಮರ್ ನನ್ನು 1992 ರಲ್ಲಿ ಪಂಜಾಬ್ ನಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಅದೇ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಹಲವು ಭಾಗಗಳಲ್ಲಿ ಪಾರ್ಮರ್ ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು.
ಇದಿಷ್ಟೇ ಅಲ್ಲದೆ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಡಲು ಹಲವು ಕಾರಣಗಳಿವೆ. ಅದ್ರಲ್ಲೂ ಸ್ವತಂತ್ರ ಭಾರತದ ಇತಿಹಾಸ ಕಂಡ ಅತ್ಯಂತ ವಿವಾದಾಸ್ಪದ ಸೇನಾ ಕಾರ್ಯಾಚರಣೆ ಆಪರೇಷನ್ ಬ್ಲೂ ಸ್ಟಾರ್ ಕೂಡ ಒಂದು. ಪ್ರತ್ಯೇಕ ಖಲಿಸ್ತಾನಕ್ಕಾಗಿ ವಿಧ್ವಂಸಕ ಹಾದಿ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್ ವಾಲೆ ಸಿಖ್ಖರ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಕ್ಷೇತ್ರವಾದ ಅಮೃತಸರದ ಸ್ವರ್ಣಮಂದಿರದಲ್ಲಿ ಅಡಗಿ ಕುಳಿತಿದ್ದ. ಅಂದಿನ ಪ್ರಧಾನಿ ಇಂದಿರಾಂಗಾಂಧಿ 1984ರ ಜೂನ್ ತಿಂಗಳಲ್ಲಿ ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಸತತ ಕಾರ್ಯಾಚರಣೆಯಲ್ಲಿ ಆತನನ್ನ ಹತ್ಯೆ ಕೂಡ ಮಾಡಲಾಗಿತ್ತು. ಇಂದಿಗೂ ಕೂಡ ಈ ಕಾರ್ಯಾಚರಣೆಯಲ್ಲಿ ಖಲಿಸ್ತಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ.
ಕಳೆದ ಜುಲೈನಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ನ 39ನೇ ವರ್ಷಾಚರಣೆ ವೇಳೆ ಖಲಿಸ್ತಾನ ಪರ ಪ್ರತ್ಯೇಕತಾವಾದಿಗಳು ಗ್ರೇಟರ್ ಟೊರಾಂಟೊ ಪ್ರದೇಶದಲ್ಲಿ ಱಲಿ ಆಯೋಜನೆ ಮಾಡಿದ್ದರು. ಱಲಿಯಲ್ಲಿ ಭಾರತದ ಮಾಜಿ ಪ್ರಧಾನಿ ಇಂಧಿರಾಗಾಂಧಿ ಅವರ ಸೀರೆ ರಕ್ತದಿಂದ ಸೋರುತ್ತಿರುವುದು, ಟರ್ಬನ್ ಹಾಕಿರುವ ವ್ಯಕ್ತಿ ಅವರೆಡೆಗೆ ಬಂಧೂಕು ಇಟ್ಟಿರುವ ಪ್ರತಿಕೃತಿಯನ್ನ ಪ್ರದರ್ಶನ ಮಾಡಲಾಗಿತ್ತು. ಹಾಗೇ ಟ್ಯಾಬ್ಲೋದ ಕೆಳಭಾಗದಲ್ಲಿ ‘ಶ್ರೀ ದಾದರ್ ಸಾಹಿಬ್ ಮೇಲಿನ ದಾಳಿಯ ಪ್ರತೀಕಾರ’ ಎಂಬ ಬರಹ ಬರೆಯಲಾಗಿತ್ತು. ಇದರ ನಡುವೆ 2023ರ ಜೂನ್ ತಿಂಗಳಲ್ಲಿ ಪ್ರತ್ಯೇಕತಾವಾದಿ ಹೋರಾಟದ ನಾಯಕ ನಿಜ್ಜಾರ್ ಹತ್ಯೆ ನಡೆದಿತ್ತು. ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು ಭಾರತ ಭಯೋತ್ಪಾದಕ ಎಂದು ಗುರುತಿಸಿತ್ತು. ಹೀಗಾಗಿ ಈತನ ಹತ್ಯೆಯನ್ನ ಭಾರತವೇ ಮಾಡಿದೆ, ಕೆನಡಾದ ರಾಜತಾಂತ್ರಿಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಖಲಿಸ್ತಾನ ಹೋರಾಟಗಾರರು ಆರೋಪಿಸಿದ್ದರು. ಜುಲೈ ತಿಂಗಳಲ್ಲೇ ಖಲಿಸ್ತಾನ ಸ್ವಾತಂತ್ರ್ಯ ಱಲಿ ಆಯೋಜಿಸಲಾಗಿತ್ತು. ಱಲಿ ಆಯೋಜನೆ ಮಾಡಿದ್ದ ಸಂಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹರಿಬಿಟ್ಟಿತ್ತು. ಅದ್ರಲ್ಲಿ ಕೆನಡಾದ ಒಟ್ಟಾವದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಹಾಗೂ ಟೊರಾಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವಗೆ ಬೆದರಿಕೆ ಹಾಕಲಾಗಿತ್ತು. ಈ ಎರಡೂ ಘಟನೆಗಳ ಸಂಬಂಧ ಭಾರತದ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿತ್ತು.
ಹೀಗಿರುವಾಗ್ಲೇ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ನಡೆದಿತ್ತು. ಅಷ್ಟಕ್ಕೂ ಈತ ಯಾರು ಅನ್ನೋದನ್ನ ನೋಡಿದ್ರೆ ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ. 2007ರಲ್ಲಿ ಪಂಜಾಬ್ ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಭಾರತ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಟೈಗರ್ ಫೋರ್ಸ್‌ನ ಅಧ್ಯಕ್ಷನಾಗಿದ್ದ ನಿಜ್ಜಾರ್ 1990 ರ ದಶಕದಲ್ಲೇ ಭಾರತ ತೊರೆದು ಕೆನಡಾ ಸೇರಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ತರಬೇತಿ ಮತ್ತಿತರ ನೆರವು ನೀಡಿದ ಆರೋಪಗಳೂ ಆತನ ಮೇಲಿದ್ದವು. ಆತನ ಹೆಸರಿದ್ದ ಉಗ್ರರ ಪಟ್ಟಿಯನ್ನು ಭಾರತ ಕೆನಡಾಗೆ ಹಸ್ತಾಂತರಿಸಿತ್ತು. ಆದ್ರೆ ಕೆನಡಾ ಸರ್ಕಾರ ಮಾತ್ರ ಆತನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಬಳಿಯ ಗುರುದ್ವಾರದ ಅಧ್ಯಕ್ಷನಾಗಿದ್ದ ನಿಜ್ಜಾರ್‌ನನ್ನು ಇಬ್ಬರು ಮುಸುಕುಧಾರಿಗಳು ಕಳೆದ ಜೂನ್‌ನಲ್ಲಿ ಗುಂಡಿಟ್ಟು ಕೊಂದಿದ್ದರು. ನಿಜ್ಜಾರ್ ಹತ್ಯೆ ಬಳಿ ಭಾರತ ಮತ್ತು ಕೆನಡಾ ಸಂಬಂಧ ಹದಗೆಡಲು ಶುರುವಾಗಿತ್ತು.
ಇಲ್ಲಿ ಇನ್ನೊಂದು ಕುತೂಹಲಕಾರಿ ವಿಷಯ ಅಂದ್ರೆ ಅದು ಕೆನಡಾದ ಜನಸಂಖ್ಯೆ. ಕೆನಡಾದಲ್ಲಿ ಒಟ್ಟಾರೆ ಜನಸಂಖ್ಯೆ ಇರೋದೇ 3.82 ಕೋಟಿ. ಈ ಪೈಕಿ 13 ಲಕ್ಷಕ್ಕೂ ಹೆಚ್ಚು ಭಾರತೀಯರೇ ಇದ್ದಾರೆ. ಅಂದ್ರೆ ಅಲ್ಲಿನ ಒಟ್ಟಾರೆ ಜನಸಂಖ್ಯೆಯ ಶೇಕಡಾ 4ರಷ್ಟು. ಭಾರತದ ನಂತರ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ದೇಶ ಅಂದ್ರೆ ಅದು ಕೆನಡಾ. ಈ ಕಾರಣಕ್ಕಾಗಿಯೇ ಸಿಖ್ಖರು ಕೆನಡಾದ ರಾಜಕೀಯದಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇದಕ್ಕೆ ಇಂಬು ನೀಡುವಂತೆ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಬೆಂಬಲ ನೀಡಿರುವುದ ಖಲಿಸ್ತಾನ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಜಗಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ. ಇದೇ ಕಾರಣಕ್ಕೆ ಖಲಿಸ್ತಾನಿ ಉಗ್ರರ ಪರವಾಗಿ ಕೆನಡಾ ಸಹಾನುಭೂತಿ ತೆರೆಮರೆಯಲ್ಲಿ ನಡೆದಿದೆ. ಇದರಿಂದ ಭಾರತಕ್ಕೆ ಖಲಿಸ್ತಾನಿಗಳಿಂದ ಭದ್ರತಾ ಅಪಾಯ ಮತ್ತೆ ಮತ್ತೆ ಎದುರಾಗುತ್ತಿದೆ. ಇದೀಗ ಬಾಂಬ್ ಬೆದರಿಕೆ ಕೂಡ ಬಂದಿದೆ. ಏರ್ ಇಂಡಿಯಾ ಕಾನಿಷ್ಕಾ ಬಾಂಬ್ ದಾಳಿಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಕಾನಿಷ್ಕಾ ಬಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತದ ಮುಂದಿನ ನಡೆ ಏನು ಅನ್ನೋದು ಭಾರೀ ಕುತೂಹಲ ಮೂಡಿಸಿದೆ.