IND Vs USA.. ಸೋತರೆ ಸಂಕಷ್ಟ! – ಅಮೆರಿಕ ತಂಡದಲ್ಲಿ ಭಾರತೀಯರ ದಂಡು
ರೋHITಗೆ 7 ಆಟಗಾರರ ಸವಾಲ್

ಟಿ-20 ವಿಶ್ವಕಪ್ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗ್ತಿದೆ. ಕ್ರಿಕೆಟ್ ಲೋಕದ ಶಿಶು ಅಂತಾ ಕರೆಸಿಕೊಳ್ಳೋ ತಂಡಗಳೇ ಈಗ ಘಟಾನುಘಟಿ ಟೀಮ್ಗಳನ್ನ ಹೆಡೆ ಮುರಿ ಕಟ್ಟುತ್ತಿವೆ. ದಶಕದಿಂದಲೂ ಕ್ರಿಕೆಟ್ ಲೋಕದಲ್ಲಿ ಮೆರೆಯುತ್ತಾ ಬಂದ ಆಟಗಾರರು ನಿನ್ನೆ ಮೊನ್ನೆ ಬಂದ ಪ್ಲೇಯರ್ಸ್ ಎದುರು ಮಕಾಡೆ ಮಲಗುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಮೆರಿಕ ಹಾಗೇ ಅಫ್ಘಾನಿಸ್ತಾನ ತಂಡ. ಇದೀಗ ಬುಧವಾರ ಭಾರತ ಹಾಗೂ ಅಮೆರಿಕ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ ತಂಡ ಈಗಾಗ್ಲೇ ಐರ್ಲೆಂಡ್ ಹಾಗೂ ಪಾಕಿಸ್ತಾನವನ್ನ ಮಣಿಸಿ ಫುಲ್ ಜೋಶ್ನಲ್ಲಿದೆ. ಅಮೆರಿಕ ಕೂಡ 2 ಗೆಲುವುಗಳೊಂದು ಹುಮ್ಮಸ್ಸಿನಲ್ಲಿದೆ. ಸೋ ಜೂನ್ 12ರಂದು ನಡೆಯಲಿರುವ ಪಂದ್ಯದಲ್ಲಿ ಯಾವ ತಂಡಕ್ಕೆ ಪ್ಲಸ್..? ರೋಹಿತ್ ಪಡೆಗೆ ಅಮೆರಿಕ ನಿಜಕ್ಕೂ ಸವಾಲಾಗುತ್ತಾ? ಪಿಚ್ ಸಮಸ್ಯೆ ನಡುವೆ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಕನ್ನಡಿಗನ ಕಮಾಲ್ – ಕೆನಡಾ ಟೀಮ್ ಸ್ಟ್ರೆಂಥ್ ದಾವಣಗೆರೆ ಹೈದ
ಟಿ-20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಬುಧವಾರ ಟೀಂ ಇಂಡಿಯಾ ಹಾಗೂ ಅಮೆರಿಕ ಎದುರು ಬದುರಾಗಲಿವೆ. ಅಮೆರಿಕ ಕ್ರಿಕೆಟ್ ಶಿಶುವೇ ಆಗಿದ್ರೂ ತಂಡವನ್ನ ಈಸಿಯಾಗಿ ತೆಗೆದುಕೊಳ್ಳೋಕೆ ಆಗಲ್ಲ. ಯಾಕಂದ್ರೆ ಕೆನಡಾ ಹಾಗೂ ಪಾಕಿಸ್ತಾನವನ್ನ ಮಣಿಸಿರೋ ಅಮೆರಿಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸಂಘಟಿತ ಹೋರಾಟ ನಡೆಸಿದ್ರೆ ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ರೂ ಮಣ್ಣು ಮುಕ್ಕಿಸಬಹುದು ಅನ್ನೋದನ್ನ ತೋರಿಸಿ ಕೊಟ್ಟಿದ್ದಾರೆ. ಅಚ್ಚರಿ ಫಲಿತಾಂಶಗಳನ್ನೇ ನೀಡ್ತಿರುವ ಅಮೆರಿಕಾ, ಈಗ ಟೀಮ್ ಇಂಡಿಯಾ ಎದುರೂ ಕೂಡ ಗೆಲ್ಲೋ ಕನಸು ಕಾಣ್ತಿದೆ. ತವರಿನ ಲಾಭದಲ್ಲೇ ರೋಹಿತ್ ಪಡೆಯ ಎದುರು ಗೆಲ್ಲೋ ಹಂಬಲದಲ್ಲಿದೆ. ತವರಿನ ಅನುಭವದ ಜೊತೆಗೆ ಕಂಡೀಷನ್ಸ್ ಬಗ್ಗೆ ಚೆನ್ನಾಗಿ ಅರಿತಿರುವ ಅಮೆರಿಕಾವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ. ಟಿ20 ವಿಶ್ವಕಪ್ಗೂ ಮುನ್ನ ಬಾಂಗ್ಲಾ ತಂಡವನ್ನೇ ಬಗ್ಗುಬಡಿದಿದ್ದ ಅಮೆರಿಕಾ, ಟೀಮ್ ಇಂಡಿಯಾಕ್ಕೂ ಟಫ್ ಕಾಂಪಿಟೇಷನ್ ನೀಡಬಲ್ಲದು. ಇದೆಲ್ಲಕ್ಕಿಂತ ಹೆಚ್ಚಾಗಿ ಯುಎಸ್ ತಂಡದಲ್ಲಿ ಬಹುಪಾಲು ಭಾರತೀಯರು ಸೇರಿದಂತೆ ನಾನಾ ದೇಶದ ಆಟಗಾರರಿದ್ದಾರೆ. ಇದೇ ಅಮೆರಿಕ ತಂಡದ ಮೇನ್ ಪ್ಲಸ್ ಪಾಯಿಂಟ್.
ಭಾರತೀಯರು Vs ಭಾರತೀಯರು!
ಟಿ-20 ವಿಶ್ವಕಪ್‌ನಲ್ಲಿ ತವರಿನ ಲಾಭ ಹೊಂದಿರುವ ಅಮೆರಿಕಾಗೆ, ಮತ್ತೊಂದೆಡೆ ನಾನಾ ದೇಶದ ಆಟಗಾರರ ದಂಡೇ ಇದೆ. ಅಬಿಗ್ ಮ್ಯಾಚ್ ವಿನ್ನರ್ಗಳ ಶಕ್ತಿಯಿದೆ. ಬ್ಯಾಟಿಂಗ್ ಡೆಪ್ತ್ ಜೊತೆಗೆ ಬೌಲಿಂಗ್ ಯುನಿಟ್ ಕೂಡ ಸ್ಟ್ರಾಂಗ್ ಇದೆ. ಅದ್ರಲ್ಲೂ ಈ ಪಂದ್ಯ ಭಾರತೀಯರು ವರ್ಸರ್ ಭಾರತೀಯರು ಎಂಬ ರೀತಿಯಲ್ಲೇ ನಡೆಯಲಿದೆ. ಟೂರ್ನಿಯ ಮೊದಲೆರಡೂ ಪಂದ್ಯ ಗೆದ್ದು, ಸೂಪರ್ -8 ಪ್ರವೇಶಿಸುವ ಕಾತರದಲ್ಲಿರುವ ಯುಎಸ್‌ಎ ತಂಡದ ಯಶಸ್ಸಿನ ಹಿಂದೆ ಭಾರತೀಯ ಮೂಲದವರ ಪಾತ್ರ ದೊಡ್ಡದು. ಅದು ಕೇವಲ ಒಂದಿಬ್ಬರಲ್ಲ. ತಂಡದ ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯ ಮೂಲದವರಿದ್ದಾರೆ. ಅವರ ಪರಿಚಯ ಇಲ್ಲಿದೆ. ಅಮೆರಿಕ ತಂಡದ ಕ್ಯಾಪ್ಟನ್ ಮೋನಂಕ್ ಪಟೇಲ್ ಭಾರತದ ಗುಜರಾತ್ ಮೂಲದವರು. 1993ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದ್ದ ಮೋನಂಕ್ ಗುಜರಾತ್ ಪರ ಅಂಡರ್-16, ಅಂಡರ್-18 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ ಇನ್ನಷ್ಟು ಸಾಧಿಸುವ ಛಲ ಹೊಂದಿದ್ದ ಮೋನಂಕ್, ಭಾರತ ತೊರೆದು ಅಮೆರಿಕಕ್ಕೆ ತೆರಳಿದ್ದರು. ಹಾಗೇ ಅಮೆರಿಕ ತಂಡದಲ್ಲಿರುವ ನೊಸ್ತುಷ್ ಕೆಂಜಿಗೆ ಕನ್ನಡದ ಪ್ರಮುಖ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸ್ನೇಹಿತ, ಪ್ರಸಿದ್ಧ ಲೇಖಕರೂ ಆಗಿರುವ ಪ್ರದೀಪ್ ಕೆಂಜಿಗೆ ಅವರ ಪುತ್ರ. ಪ್ರಸ್ತುತ ನೊಸ್ತುಷ್ ಅಮೆರಿಕದಲ್ಲೇ ಜನಿಸಿದ್ದರೂ, ಬೆಳೆದಿದ್ದೆಲ್ಲಾ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ. ಕೆಎಸ್‌ಸಿಎ ಮೊದಲ ಡಿವಿಷನ್‌ನಲ್ಲಿ ಆಡಿದ್ದ ನೊಸ್ತುಷ್ 2015ರಲ್ಲಿ ಅಮೆರಿಕಕ್ಕೆ ಹಿಂದಿರುಗಿದ್ದರು. ಇನ್ನು ಪಾಕ್ ವಿರುದ್ಧ ಪಂದ್ಯದ ಸೂಪರ್ ಓವರ್ ಹೀರೋ ಸೌರಭ್ ನೇತ್ರವಾಲ್ಕರ್ ಮುಂಬೈ ಪರ ದೇಸೀ ಕ್ರಿಕೆಟ್ ಆಡುತ್ತಿದ್ರೂ ಉತ್ತಮ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಕ್ರಿಕೆಟ್ ಭವಿಷ್ಯಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಸೌರಭ್ರಂತೆಯೇ ಹರ್ಮೀತ್ ಸಿಂಗ್ ಕೂಡಾ ಭಾರತ ಪರ ಅಂಡರ್ -19 ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದರು. ಇನ್ನು ನ್ಯೂ ಜೆರ್ಸಿಯಲ್ಲಿ ಜನಿಸಿರುವ ಜಸ್‌ದೀಪ್ ಸಿಂಗ್ ಪಂಜಾಬ್‌ನಲ್ಲಿ ಬಾಲ್ಯ ಕಳೆದಿದ್ದಾರೆ. 13ನೇ ವಯಸ್ಸಲ್ಲಿ ಮತ್ತೆ ಅಮೆರಿಕಕ್ಕೆ ಹಿಂದಿರುಗಿದ್ದ ಅವರು 2015ರಲ್ಲಿ ಅಮೆರಿಕ ಪರ ಮೊದಲ ಪಂದ್ಯ ಆಡಿದ್ದರು. ಮಿಲಿಂದ್ ಕುಮಾರ್ ಮಾಜಿ ರಣಜಿ ಆಟಗಾರ. ಅವರು ರಣಜಿಯಲ್ಲಿ ಡೆಲ್ಲಿ ಹಾಗೂ ಸಿಕ್ಕಿಂ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಭಾರತ ಮೂಲಕ ನಿತೀಶ್ ಕುಮಾರ್ 2011ರ ವಿಶ್ವಕಪ್‌ನಲ್ಲಿ ಕೆನಡಾ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಕೆನಡಾ ತಂಡಕ್ಕೆ ನಾಯಕರಾಗಿದ್ದ ಅವರು 2019ರಲ್ಲಿ ಕೊನೆ ಬಾರಿ ತಂಡ ಪ್ರತಿನಿಧಿಸಿದ್ದಾರೆ. 2024ರಲ್ಲಿ ಅಮೆರಿಕದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಹೀಗೆ ತಂಡ ಅಮೆರಿಕದ್ದೇ ಆಗಿದ್ರೂ ಕೂಡ ಅದ್ರಲ್ಲಿ ಇರೋರೆಲ್ಲಾ ಭಾರತೀಯರು. ಹೀಗಾಗಿ ಹೀಗಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡೇ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯಬೇಕಾಗುತ್ತೆ. ಇಲ್ಲದಿದ್ರೆ ಅಪಾಯ ತಪ್ಪಿದಿಲ್ಲ. ಅಲ್ದೇ ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಭಾರತ ಗೆದ್ದಿದ್ರೂ ಕೂಡ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿತ್ತು. ಪಿಚ್ ಸಮಸ್ಯೆಯಿಂದ ಭಾರತೀಯ ಬ್ಯಾಟರ್ಸ್ ರನ್ ಗಳಿಸೋಕೆ ತಿಣುಕಾಡಿದ್ದರು. ಹೀಗಾಗಿ ಟೀಮ್ ಇಂಡಿಯಾ ಅಮೆರಿಕ ವಿರುದ್ಧ ರಣತಂತ್ರ ರೂಪಿಸಿ ಗೆಲ್ಲಬೇಕಾಗಿದೆ.