ಲಂಕಾ ದಹನಕ್ಕೆ IND ಬಾಯ್ಸ್ ರೆಡಿ – T-20 ಫೈಟ್ ನಲ್ಲಿ ಯಾರಿಗೆ ಚಾನ್ಸ್?
ಸೂರ್ಯ & ಗಂಭೀರ್ ಸ್ಟ್ರಾಟಜಿ ಹೇಗಿದೆ?
ಶ್ರೀಲಂಕಾ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಇನ್ನೊಂದೇ ದಿನ ಬಾಕಿ. ಲಂಕಾ ದಹನಕ್ಕೆ ರೆಡಿಯಾಗಿರೋ ಟೀಂ ಇಂಡಿಯಾ ಬಾಯ್ಸ್ ಮೈದಾನದಲ್ಲಿ ಬೆವರಿಳಿಸ್ತಿದ್ದಾರೆ. ನೂತನ ಉಸ್ತುವಾರಿ ಗೌತಮ್ ಗಂಭೀರ್ಗೆ ಇದು ಪ್ರತಿಷ್ಠೆಯ ಟೂರ್ನಿಯಾಗಿದ್ದು, ತಮ್ಮ ಹೊಸ ಇನ್ನಿಂಗ್ಸ್ ಶುಭಾರಂಭಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿ ಜುಲೈ 27ರಿಂದ ಆರಂಭವಾಗಲಿದೆ. ಈಗಾಗ್ಲೇ ಟೀಂ ಸೆಲೆಕ್ಷನ್ ಹಾಗೇ ಕ್ಯಾಪ್ಟನ್ಸಿ ಆಯ್ಕೆಯಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದ್ದ ಗಂಭೀರ್ ಸದ್ಯ ಪ್ಲೇಯಿಂಗ್ 11ನಲ್ಲಿ ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಂತಿಮವಾಗಿ ಲಂಕಾ ದಹನಕ್ಕೆ ಯಾರೆಲ್ಲಾ ಕಣಕ್ಕಿಳೀತಾರೆ? ಕನ್ನಡಿಗನಿಗೆ ಅವಕಾಶ ಸಿಗುತ್ತಾ? ಸರಣಿಗೂ ಮುನ್ನವೇ ಸಿಂಹಳೀಯರಿಗೆ ಎದುರಾಗಿರೋ ಆಘಾತ ಎಂಥಾದ್ದು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಚ್ಚನ್ ಫ್ಯಾಮಿಲಿ ಡಿವೋರ್ಸ್ ಆಟ? – ಸ್ಟಾರ್ ಕುಟುಂಬದಿಂದ ಚೀಪ್ ಗಿಮಿಕ್?
ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಜುಲೈ 27ರಿಂದ ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಜೋಶ್ನಲ್ಲಿದೆ. ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ಕಮ್ ಬ್ಯಾಕ್ ಮಾಡಿರೋರಿಂದ್ರ ಹೈವೋಲ್ಟೇಜ್ ಸಿರೀಸ್ ಆಗಿ ಮಾರ್ಪಟ್ಟಿದೆ. ಇನ್ನು ಹೊಸ ಕೋಚ್ ಗಂಭೀರ್ ಮೊದಲ ಟಿ20 ಪ್ಲೇಯಿಂಗ್ 11ನಲ್ಲಿ ಆಡಲಿರುವ ಆಟಗಾರರ ಬಗ್ಗೆಯೂ ತಂತ್ರ ರೂಪಿಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಅಂತಿಮ-11 ರಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದರೆ, ಉಪನಾಯಕನಾಗಿ ಶುಭಮನ್ ಗಿಲ್ ಆಯ್ಕೆಯಾಗಿದ್ದಾರೆ.
ಟಿ-20 ತಂಡದಲ್ಲಿ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ. , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಈಗಾಗ್ಲೇ ಕೋಚ್ ಗಂಭೀರ್ ಹಾಗೂ ಕ್ಯಾಪ್ಟನ್ ಸೂರ್ಯ ಲೆಕ್ಕಾಚಾರದ ಪ್ರಕಾರ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಎಲ್ಲಾ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಆಡಿದ್ದಾರೆ. ಆದರೆ ಶ್ರೀಲಂಕಾ ಸರಣಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನಕ್ಕೆ ಬರಬಹುದು. ಇದು ಪಂತ್ ಅಥವಾ ಸಂಜು ಸ್ಯಾಮ್ಸನ್‌ಗೆ ಮುಂದಿನ ಸ್ಥಾನವನ್ನು ನಿಗದಿ ಮಾಡಲಿದೆ. ಇನ್ನು ಸಂಜು ಸ್ಯಾಮ್ಸನ್ ತಮ್ಮ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಂದ್ಯಶ್ರೇಷ್ಠ ಅರ್ಧಶತಕ ಗಳಿಸಿದ್ದರು. ಸ್ಯಾಮ್ಸನ್ ಶ್ರೀಲಂಕಾ ಟಿ20 ಸರಣಿಗೆ ಮಾತ್ರ ಆಯ್ಕೆಯಾಗಿದ್ದಾರೆ. ಇನ್ನು ರಿಷಬ್ ಪಂತ್ ಏಕದಿನ ತಂಡದಲ್ಲೂ ಇದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು. ಇಲ್ಲವಾದರೆ ಎಡಗೈ ಕಾಂಬಿನೇಷನ್ ಬೇಕಿದ್ದರೆ ರಿಷಬ್ ಪಂತ್ ಗೆ ಮಣೆ ಹಾಕಬಹುದು. ಟಿ20 ಸ್ಪೆಷಲಿಸ್ಟ್ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದು ಯಾವ ಸ್ಥಾನದಲ್ಲಿ ಕಣಕ್ಕಿಳಿಸ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.
ಇನ್ನು ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಆಪ್ಶನ್ಸ್ ಇದೆ. ಸೋ ಯಾರಿಗೆ ಚಾನ್ಸ್ ಕೊಡ್ಬೇಕು ಅನ್ನೋ ಗೊಂದಲ ಕೂಡ ಇದೆ. ಮೊದಲ ಪಂದ್ಯಕ್ಕೆ ಭಾರತ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಸ್ಪಿನ್ನರ್ ರವಿ ಬಿಷ್ಣೋಯ್ ಜೊತೆಗೆ ಯಶಸ್ವಿ ಟಿ20 ವಿಶ್ವಕಪ್ ಗೆದ್ದ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ತಂಡದಲ್ಲಿ ಆಡಬಹುದು. ಇಲ್ಲ ಇಬ್ಬರೇ ಸ್ಪಿನ್ನರ್ ಸಾಕು ಅಂದ್ರೆ ವಾಷಿಂಗ್ಟನ್ ಸುಂದರ್ ಬದಲಿಗೆ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಬಹುದು. ಹಾರ್ದಿಕ್ ಪಾಂಡ್ಯ ಸಂಪೂರ್ಣ ಕೋಟಾ ಬೌಲ್ ಮಾಡಬಹುದು. ಇದರೊಂದಿಗೆ ಸಿರಾಜ್ ಮತ್ತು ಖಲೀಲ್ ಅಹ್ಮದ್ ಅವರು ಅರ್ಷದೀಪ್ ಜೊತೆಗೆ ಮತ್ತೊಬ್ಬ ವೇಗಿಯಾಗಿ ಅವಕಾಶ ಪಡೆಯಬಹುದು.
ಟೀಂ ಇಂಡಿಯಾ ಸಂಭಾವ್ಯ ತಂಡ
ಜುಲೈ 22ರಂದೇ ಲಂಕಾ ನೆಲಕ್ಕೆ ಕಾಲಿಟ್ಟಿದ್ದ ಟೀಂ ಇಂಡಿಯಾ ಬಾಯ್ಸ್ ಮರುದಿನದಿಂದಲೇ ಪಲ್ಲೆಕೆಲೆ ಮೈದಾನದಲ್ಲಿ ಬೆವರಿಳಿಸ್ತಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್ ಹಾಗೂ ಹೆಡ್ಕೋಚ್ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಲಂಕಾಗೆ ನಾವು ರೆಡಿ ಅಂತಾ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ. ನೂತನ ಕೋಚ್ ಗೌತಮ್ ಗಂಭೀರ್ ಫುಲ್ ಆಕ್ಟೀವ್ ಆಗಿದ್ದು, ತಂಡವನ್ನ ಮಾನಸಿಕವಾಗಿ ಹುರಿದುಂಬಿಸೋದ್ರ ಜೊತೆ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್ಗೆ ಕ್ರಿಕೆಟ್ ಪಾಠ ಮಾಡಿದ್ದಾರೆ. ಟಿ-20 ಟೀಂ ಜೊತೆ ಏಕದಿನ ಸರಣಿಗೂ ಆಟಗಾರರು ಸಜ್ಜಾಗ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ಎದುರು 5 T20 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸೂರ್ಯಕುಮಾರ್ ಯಾದವ್, 254 ರನ್ ಕಲೆ ಹಾಕಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿ ಮಿಂಚಿರುವ ಮಿಸ್ಟರ್ 360 ಡಿಗ್ರಿ ಬ್ಯಾಟರ್, 17 ಬೌಂಡರಿ, 15 ಸಿಕ್ಸರ್ ಚಚ್ಚಿದ್ದು, 158.75ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಈಗಾಗ್ಲೇ ಸಾಕಷ್ಟು ಸಲ ಲಂಕಾ ದಹನ ಮಾಡಿದ್ದಾರೆ. ಇದೀಗ ಸಿಂಹಳೀಯರ ನಾಡಲ್ಲಿ ಮತ್ತೊಮ್ಮೆ ತಮ್ಮ ತಾಕತ್ತನ್ನ ತೋರಿಸಲು ರೆಡಿಯಾಗಿದ್ದಾರೆ. ಆದ್ರೆ ಈ ಬಾರಿ ಶ್ರೀಲಂಕಾ ತಂಡ ಅಷ್ಟು ಸುಲಭಕ್ಕೆ ಶರಣಾಗೋ ಹಾಗೇ ಕಾಣ್ತಿಲ್ಲ. ಟೀಮ್ ಇಂಡಿಯಾ ಎದುರಿನ ಸರಣಿಯಲ್ಲಿ ಶ್ರೀಲಂಕಾ ತಂಡ ಸ್ಟ್ರಾಂಗ್ ಬೌಲಿಂಗ್ ಅಟ್ಯಾಕ್ನ ಕಣಕ್ಕಿಳಿಸಲು ರೆಡಿಯಾಗಿದೆ. ಸ್ಟಾರ್ ಸ್ಪಿನ್ನರ್ಗಳಾದ ವನಿಂದು ಹಸರಂಗ, ಮಹೀಶಾ ತೀಕ್ಷಣ ಬೆರಳಲ್ಲೇ ಮ್ಯಾಜಿಕ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಥೇಟ್ ಮಲಿಂಗರಂತೆ ಬೌಲಿಂಗ್ ಮಾಡೋ ಮಥಿಶಾ ಪತಿರಣ ಸೂರ್ಯನಿಗೆ ನಿಜಕ್ಕೂ ಸವಾಲಾಗಲಿದ್ದಾರೆ. ಆದ್ರೆ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಟಾರ್ ವೇಗಿ ದುಷ್ಮಂತ ಚಮೀರಾ ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಸೋ ಇದು ಲಂಕಾ ತಂಡಕ್ಕೆ ಕೊಂಚ ಹಿನ್ನಡೆಯಾಗಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಕೆ.ಎಲ್ ರಾಹುಲ್ ಕೂಡ ಈಗಾಗಲೇ ನೆಟ್ನಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ನೆಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರೋ ವಿಡಿಯೋಗಳನ್ನು ಕೆ.ಎಲ್ ರಾಹುಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಕಳೆದ ವರ್ಷ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಸಂಭ್ರಮಿಸಿದ್ರು. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಬಳಿಕ ಹರಿಣಿಗಳ ನಾಡಿನಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿದ 2ನೇ ಟೀಮ್ ಇಂಡಿಯಾ ನಾಯಕ ಎಂಬ ದಾಖಲೆ ನಿರ್ಮಿಸಿದ್ರು. ಜುಲೈ 27, 28 ಹಾಗೇ 30ರಂದು ಲಂಕಾ ವಿರುದ್ಧ ಮೂರು ಟಿ-20 ಪಂದ್ಯಗಳು ನಡೆಯಲಿವೆ. ಈ ಮೂರೂ ಮ್ಯಾಚ್ಗಳೂ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿವೆ. ಇನ್ನು ಆಗಸ್ಟ್ 2, 4 ಹಾಗೇ 7ರಂದು ಏಕದಿನ ಪಂದ್ಯಗಳು ನಡೆಯಲಿವೆ. ಈ ಮೂರೂ ಪಂದ್ಯಗಳು ಕೊಲೊಂಬೋದಲ್ಲಿ ನಡೆಯಲಿವೆ. ತಂಡದಲ್ಲಿ ಎಲ್ಲಾ ಸ್ಟಾರ್ ಆಟಗಾರರೇ ಇರೋದ್ರಿಂದ ಅಂತಿಮವಾಗಿ ಯಾರು ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡ್ಬೇಕು.