548 ರನ್​ಗಳ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರೀಕಾ – ಭಾರತ ಕೈ ತಪ್ಪಿದ ಟೆಸ್ಟ್ ಸರಣಿ

548 ರನ್​ಗಳ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರೀಕಾ –  ಭಾರತ ಕೈ ತಪ್ಪಿದ ಟೆಸ್ಟ್ ಸರಣಿ

ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡ ಒಟ್ಟು 548 ರನ್​ಗಳ ಮುನ್ನಡೆ ಸಾಧಿಸಿದೆ. ಈ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡವು ಮೊದಲ ಇನಿಂಗ್ಸ್​ನಲ್ಲಿ 489 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 201 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಅದರಂತೆ 288 ರನ್​ಗಳ ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು 4ನೇ ದಿನದಾಟದ ಬೋಜನಾ ವಿರಾಮದ ವೇಳೆಗೆ5 ವಿಕೆಟ್ ಕಳೆದುಕೊಂಡು 260 ರನ್​ ಕಲೆಹಾಕಿದೆ. ಈ ಮೂಲಕ ಒಟ್ಟು 548 ರನ್​ಗಳ ಮುನ್ನಡೆ ಸಾಧಿಸಿದೆ.

ಸರಣಿ ಸೋಲಿನತ್ತ ಟೀಮ್ ಇಂಡಿಯಾ:

ಸೌತ್ ಆಫ್ರಿಕಾ ತಂಡವು 500 ರನ್​ಗಳ ಮುನ್ನಡೆ ಸಾಧಿಸುತ್ತಿದ್ದಂತೆ ಟೀಮ್ ಇಂಡಿಯಾಗೆ ಸರಣಿ ಸೋಲು ಖಚಿತವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು 1-1 ಅಂತರದಿಂದ ಸಮಗೊಳಿಸಬಹುದು. ಆದರೆ ಅತ್ತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಸೌತ್ ಆಫ್ರಿಕಾ ತಂಡವು ಈ ಪಂದ್ಯವನ್ನು ಡ್ರಾಗೊಳಿಸಿದರೂ 1-0 ಅಂತರದಿಂದ ಸರಣಿ ಜಯಿಸಬಹುದು. ಹೀಗಾಗಿಯೇ ಸೌತ್ ಆಫ್ರಿಕಾ ತಂಡದ 500 ರನ್​ಗಳ ಮುನ್ನಡೆ ಟೀಮ್ ಇಂಡಿಯಾವನ್ನು ಸರಣಿ ಸೋಲಿನತ್ತ ಕೊಂಡೊಯ್ಯಲಿದೆ.

ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಇನಿಂಗ್ಸ್​ನಲ್ಲಿ 500+ ಸ್ಕೋರ್ ಬೆನ್ನತ್ತಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1939 ರಲ್ಲಿ. ಅಂದು ಸೌತ್ ಆಫ್ರಿಕಾ ನೀಡಿದ 696 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 656 ರನ್​ಗಳಿಸಿ ಪಂದ್ಯವನ್ನು ಡ್ರಾಗೊಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಯಾವುದೇ ತಂಡ ನಾಲ್ಕನೇ ಇನಿಂಗ್ಸ್​ನಲ್ಲಿ 500 ರನ್​ಗಳನ್ನು ಕಲೆಹಾಕಿದ ಇತಿಹಾಸವಿಲ್ಲ. ಇದೀಗ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾಗೆ 508+ ರನ್​​ಗಳ ಗುರಿ ನೀಡುವುದು ಖಚಿತವಾಗಿದೆ. ಹೀಗಾಗಿ ಈ ಪಂದ್ಯವನ್ನು ಭಾರತ ತಂಡ ಡ್ರಾನಲ್ಲಿ ಅಂತ್ಯಗೊಳಿಸಬಹುದಷ್ಟೇ.

ಅತ್ತ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ಸೌತ್ ಆಫ್ರಿಕಾ ತಂಡವು 1-0 ಅಂತರದಿಂದ ಸರಣಿಯನ್ನು ಗೆಲ್ಲಲಿದೆ. ಈ ಮೂಲಕ ದೀರ್ಘಾಕಾಲದ ಬಳಿಕ ಭಾರತದಲ್ಲಿ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ.

Kishor KV