ನಾಳೆಯಿಂದ IND Vs ENG ಫೈಟ್ – ಮಂಕಾದ ಸೂರ್ಯ ಮತ್ತೆ ಸಿಡಿಯುತ್ತಾರಾ?
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ರೆಡಿಯಾಗಿದೆ. ಜನವರಿ 22 ರಂದು ಮೊದಲ ಕದನ ನಡೆಯಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸಲಿದೆ. ಈಗಾಗ್ಲೇ ಎರಡೂ ಟೀಮ್ಗಳೂ ಕೊಲ್ಕತ್ತಾದಲ್ಲಿ ಭರ್ಜರಿ ಪ್ರಾಕ್ಟೀಸ್ನಲ್ಲಿ ಬ್ಯುಸಿಯಾಗಿವೆ. ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಲೀಡ್ ಮಾಡಿದ್ರೆ ಟೀಂ ಇಂಡಿಯಾವನ್ನ ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಟಿ-20 ಫಾರ್ಮೆಟ್ನಲ್ಲಿ ಎರಡೂ ತಂಡಗಳ ನಡುವೆ ನೆಕ್ ಟು ನೆಕ್ ಫೈಟ್ ಇದೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸೆಲೆಕ್ಟ್ ಆದಾಗ್ಲೇ ಹಲವು ಅಚ್ಚರಿಗಳನ್ನ ಮೂಡಿಸಿದೆ. ಮೊಹಮ್ಮದ್ ಶಮಿ ಕಮ್ ಬ್ಯಾಕ್ ಮಾಡಿದ್ದಾರೆ. ಅಕ್ಷರ್ ಪಟೇಲ್ಗೆ ಉಪನಾಯಕತ್ವ ನೀಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಟಿ-20 ಪಂದ್ಯದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಕೂಡ ಸೆಲೆಕ್ಟ್ ಮಾಡಿರೋದ್ರಿಂದ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಕೂಡ ಇಂಪಾರ್ಟೆಂಟ್ ಆಗಲಿದೆ. ಅಲ್ದೇ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್‌ರಂತಹ ಅನುಭವಿ ಆಟಗಾರರು ತಂಡದಲ್ಲಿದ್ದರೂ ಕೂಡ ಟೀಂ ಇಂಡಿಯಾ ಆಯ್ಕೆ ಸಮಿತಿ ಅಕ್ಸರ್ ಪಟೇಲ್ ಅವರನ್ನು ಉಪನಾಯನನ್ನಾಗಿ ನೇಮಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ : ಟ್ರಂಪ್ ಕಾರ್ಯಕ್ರಮಕ್ಕೆ ಕಟ್ಟೆಚ್ಚರ! – ಏನೆಲ್ಲಾ ಬ್ಯಾನ್? ಹೇಗಿದೆ ಸೆಕ್ಯೂರಿಟಿ?
ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಒಂದೂ ಟಿ-20 ಸರಣಿಗಳನ್ನ ಕಳ್ಕೊಂಡಿಲ್ಲ. ಆದ್ರೆ ಟೀಂ ಗೆಲ್ತಾ ಇದ್ರೂ ಸೂರ್ಯ ಮಾತ್ರ ಕಳೆದ 2 ಸರಣಿಗಳಲ್ಲಿ ಸ್ವಲಪ್ ಮಂಕಾಗಿದ್ದಾರೆ. ಬಾಂಗ್ಲಾ ವಿರುದ್ಧದ ಮೂರು ಟಿ-20 ಪಂದ್ಯಗಳಿಂದ 112 ರನ್ ಕಲೆ ಹಾಕಿದ್ರು. ಹಾಗೇ ಸೌತ್ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಬ್ಯಾಟಿಂಗ್ ಮಾಡಿ ಕೇವಲ 26 ರನ್ ಅಷ್ಟೇ ಕಲೆ ಹಾಕಿದ್ರು. ಯಾಕಂದ್ರೆ ಸೂರ್ಯ ಅಂದ್ರೇನೆ ಹೊಡಿಬಡಿ ಬ್ಯಾಟರ್. ಸೋ ಇಂಗ್ಲೆಂಡ್ ಸರಣಿಯಲ್ಲಿ ಕಮ್ಬ್ಯಾಕ್ ಮಾಡೋ ನಿರೀಕ್ಷೆ ಅಭಿಮಾನಿಗಳಿಗಿದೆ. ಇನ್ನು ಸೂರ್ಯ ಈವರೆಗೂ 78 ಟಿ20 ಪಂದ್ಯಗಳನ್ನ ಆಡಿದ್ದು, 2570 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ 2025ರಲ್ಲಿ ನಡೆಯುತ್ತಿರೋ ಮೊದಲ ಸರಣಿ ಇದು. ಈವರೆಗೂ ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಕಠಿಣ ಪೈಪೋಟಿ ನಡೆಸಿವೆ. ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು ಇದ್ರಲ್ಲಿ ಟೀಂ ಇಂಡಿಯಾ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ 11 ಪಂದ್ಯಗಳಲ್ಲಿ ಸೋತಿದೆ. ಇಲ್ಲಿ ಭಾರತ ಲೀಡ್ ಸಾಧಿಸಿದ್ರೆ ಅನ್ನಿಸಿದ್ರೂ ಕೂಡ ಅದು ತುಂಬಾ ದೊಡ್ಡ ಅಂತರದಲ್ಲಿ ಇಲ್ಲ. ಇನ್ನು ಇಂಗ್ಲೆಂಡ್ ವಿರುದ್ಧ ಟಿ20 ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಲಿಸ್ಟ್ಗಳಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಈವರೆಗೂ 21 ಪಂದ್ಯಗಳಲ್ಲಿ ಆಡಿದ್ದು, 39.93 ಸರಾಸರಿ ಮತ್ತು 648 ರನ್ ಕಲೆಹಾಕಿದ್ದಾರೆ. ಹಾಗೇ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್ ವಿರುದ್ಧ 467 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಚಹಾಲ್ 11 ಪಂದ್ಯಗಳಲ್ಲಿ 16 ವಿಕೆಟ್ ಉರಳಿಸಿದ್ದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 14 ವಿಕೆಟ್ ಪಡೆದಿದ್ದಾರೆ. ಆದ್ರೆ ಈ ಬಾರಿ ರೋಹಿತ್ ಮತ್ತು ಕೊಹ್ಲಿ ಟಿ20 ಯಿಂದ ನಿವೃತ್ತಿ ಪಡೆದಿದ್ದು, ಈ ಇಬ್ಬರು ಆಟಗಾರರು ಆಡ್ತಾ ಇಲ್ಲ. ಇನ್ನು ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ನಾಯಕ ಜೋಸ್ ಬಟ್ಲರ್ ಮುಂಚೂಣಿಯಲ್ಲಿದ್ದಾರೆ. ಇವರು 22 ಇನ್ನಿಂಗ್ಸ್‌ಗಳಲ್ಲಿ 498 ರನ್ ಗಳಿಸಿದ್ದಾರೆ. ಈ ಸರಣಿಯಲ್ಲೂ ಬಟ್ಲರ್ ಆಡ್ತಿದ್ದು ಸ್ಕೋರ್ ಮತ್ತಷ್ಟು ಹೆಚ್ಚಿಸಿಕೊಳ್ಳೋ ತವಕದಲ್ಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ವಿಷ್ಯ ಏನಪ್ಪಾ ಅಂದ್ರೆ 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹಿಂದೆ 29 ಅಕ್ಟೋಬರ್ 2011 ರಂದು ಉಭಯ ತಂಡಗಳು ನಡುವೆ ಏಕೈಕ ಟಿ20 ಪಂದ್ಯ ನಡೆದಿತ್ತು. ಇದರಲ್ಲಿ ಭಾರತ 6 ವಿಕೆಟ್ಗಳಿಂದ ಹೀನಾಯವಾಗಿ ಸೋಲನ್ನು ಕಂಡಿತ್ತು. ಇದೀಗ ಈ ಐತಿಹಾಸಿಕ ಮೈದಾನದಲ್ಲಿ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.