IND Vs BAN ಸರಣಿಗಳೇ ಬ್ಯಾನ್? – ಪಾಕಿಸ್ತಾನದಂತೆಯೇ ಆಗುತ್ತಾ ಬಾಂಗ್ಲಾ?
T-20WC ತಗಾದೆ, IPL ಪ್ರಸಾರ ಬಂದ್!

ಭಾರತ ಮತ್ತು ಬಾಂಗ್ಲಾ ನಡುವಿನ ಪರಿಸ್ಥಿತಿ ದಿನೇದಿನೇ ಬಿಗಡಾಯಿಸ್ತಿದೆ. ಇದ್ರ ಎಫೆಕ್ಟ್ ಈಗ ಕ್ರಿಕೆಟ್ಗೂ ತಟ್ಟಿದೆ. ಬಾಯ್ಕಾಟ್ ಬಾಂಗ್ಲಾ ಕಿಡಿ ಹೆಚ್ಚಾಗ್ತಿದ್ದಂತೆ ಬಿಸಿಸಿಐ ಸೂಚನೆಯಂತೆ ಕೆಕೆಆರ್ನಿಂದ ಮುಸ್ತಫಿಜುರ್ ರೆಹಮಾನ್ಗೆ ಗೇಟ್ಪಾಸ್ ಕೊಡಲಾಗಿದೆ. 2026ರ ಐಪಿಎಲ್ಗಾಗಿ 7 ಬಾಂಗ್ಲಾ ಪ್ಲೇಯರ್ಸ್ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ರು. ಈ ಪೈಕಿ ವೇಗಿ ಮುಸ್ತಫಿಜುರ್ ರೆಹಮಾನ್ರನ್ನ ಮಾತ್ರವೇ 9.2 ಕೋಟಿಗೆ ಕೆಕೆಆರ್ ಫ್ರಾಂಚೈಸಿ ಖರೀದಿ ಮಾಡಿತ್ತು. ಉಳಿದವ್ರೆಲ್ಲಾ ಅನ್ಸೋಲ್ಡ್ ಆಗಿದ್ರು. ಆದ್ರೆ ಇತ್ತೀಚೆಗೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮಿತಿ ಮೀರಿವೆ. ಅಮಾಯಕರು ಬಲಿಯಾಗ್ತಿದ್ದಾರೆ. ಹೀಗಿರುವಾಗ ಬಾಂಗ್ಲಾದ ಆಟಗಾರರು ಐಪಿಎಲ್ನಲ್ಲಿ ಆಡೋದೇ ಬೇಡ ನಿಷೇಧ ಮಾಡಿ ಅಂತಾ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಮುಖಂಡರೆಲ್ಲಾ ಒತ್ತಡ ಹೇರ್ತಿದ್ರು. ಅಂತಿಮವಾಗಿ ಕೆಕೆಆರ್ನಿಂದದ ಮುಸ್ತಫಿಜುರ್ಗೆ ಗೇಟ್ಪಾಸ್ ಸಿಕ್ಕಿದೆ. ಇದ್ರ ನಡುವೆ ಭಾರತದ ಬಾಂಗ್ಲಾದೇಶ ಟೂರ್ ಗೂ ಎಫೆಕ್ಟ್ ತಟ್ಟಿದೆ.
ಇದನ್ನೂ ಓದಿ : ಪಾಕ್ ರೀತಿಯಲ್ಲೇ ಕ್ಯಾತೆ ತೆಗೆದ ಬಾಂಗ್ಲಾ – ಬಾಂಗ್ಲಾದಲ್ಲಿ IPL ಪ್ರಸಾರ ಬ್ಯಾನ್
2025ರಿಂದ 2026ಕ್ಕೆ ಮುಂದೂಡಿಕೆಯಾಗಿದ್ದ ಸರಣಿ ಮತ್ತೆ ಮುಂದೂಡಿಕೆ!
ಕಳೆದೊಂದು ವರ್ಷದಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ 2026ರ ಸಂಪೂರ್ಣ ಕ್ಯಾಲೆಂಡರ್ ಅನೌನ್ಸ್ ಮಾಡಿದೆ. ಮೂರು ಏಕದಿನ ಪಂದ್ಯಗಳು ಮತ್ತು 3 T20I ಗಳನ್ನು ಒಳಗೊಂಡ ವೈಟ್-ಬಾಲ್ ಸರಣಿಗಾಗಿ ಭಾರತ ತಂಡ ಬಾಂಗ್ಲಾಗೆ ಭೇಟಿ ನೀಡಲಿದೆ ಎಂದು ಕಳೆದ ವಾರವಷ್ಟೇ ಅನೌನ್ಸ್ ಮಾಡಿತ್ತು. ಌಕ್ಚುಲಿ 2025ರಲ್ಲಿ ಶೇಖ್ ಹಸೀನಾ ಅವರ ಪದಚ್ಯುತಿ ನಂತ್ರ ಬಾಂಗ್ಲಾ ಹೊತ್ತಿ ಉರೀತಿತ್ತು. ಇಂಥಾ ಪರಿಸ್ಥಿತಿಯಲ್ಲಿ ಭಾರತೀಯ ಆಟಗಾರರು ಬಾಂಗ್ಲಾಗೆ ಹೋಗಿ ಸರಣಿ ಆಡೋದು ಸೇಫ್ ಅಲ್ಲ ಅಂತಾನೇ 2026ಕ್ಕೆ ಮುಂದೂಡಿಕೆ ಮಾಡ್ಲಾಗಿತ್ತು. ಆದ್ರೆ ಈಗ ಬಾಂಗ್ಲಾದೇಶ ಆಟಗಾರ ಮುಸ್ತಪಿಜುರ್ ರೆಹಮಾನ್ರನ್ನ ಐಪಿಎಲ್ನಿಂದ ಹೊರಹಾಕಿದ ಬಿಸಿಸಿಐ ಈ ವರ್ಷದ ಬಾಂಗ್ಲಾದೇಶ ಪ್ರವಾಸವನ್ನು ಮತ್ತೆ ಮುಂದೂಡಲು ನಿರ್ಧರಿಸಿದೆ. ಬಾಂಗ್ಲಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿರೋದ್ರಿಂದ ಆಗಸ್ಟ್-ಸೆಪ್ಟೆಂಬರ್ನಲ್ಲಿ ನಿಗದಿಯಾಗಿದ್ದ ಬಾಂಗ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಭಾರತ ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಆದ್ರೆ ಸದ್ಯದ ಪರಿಸ್ಥಿತಿಗಳನ್ನ ನೋಡಿದ್ರೆ ಮುಂದಿನ ದಿನಗಳಲ್ಲಿ ಭಾರತ-ಬಾಂಗ್ಲಾ ಸರಣಿಗಳು ನಡೆಯೋದೇ ಅನುಮಾನ ಇದ್ದಂತಿದೆ. ಹಾಗೇ ಈಗ ಬಾಂಗ್ಲಾದ ಹೊಸ ವರಸೆ ಶುರುವಾಗಿದೆ.
ಟಿ-20 ವಿಶ್ವಕಪ್ ಗಾಗಿ ಭಾರತಕ್ಕೆ ಬರಲ್ಲವೆಂದ ಬಾಂಗ್ಲಾ!
ಐಪಿಎಲ್ನಿಂದ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ರನ್ನು ಕೆಕೆಆರ್ ಕೈಬಿಟ್ಟ ಬೆನ್ನಲ್ಲೇ ಬಾಂಗ್ಲಾ ಕೂಡ ಕೊತಕೊತ ಅಂತಿದೆ. ಹೀಗಾಗಿ ಹೊಸ ತಗಾದೆ ತೆಗೆದಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾ ಆಯೋಜನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ ಅಂದ್ರೆ ಐಸಿಸಿಗೆ ಮನವಿ ಮಾಡಿದೆ. ಆಟಗಾರರ ಸುರಕ್ಷತೆಯ ನೆಪ ಒಡ್ಡಿ ತಮ್ಮ ಪಂದ್ಯಗಳಲ್ಲೂ ಶ್ರೀಲಂಕಾದಲ್ಲೇ ಆಡಿಸುವಂತೆ ಒತ್ತಾಯಿಸಿದೆ. ಒಪ್ಪಂದವಿದ್ದರೂ ಬಾಂಗ್ಲಾ ಆಟಗಾರನನ್ನ ಐಪಿಎಲ್ನಿಂದ ಹೊರಹಾಕಿದ್ದಾರೆ. ಇಂಥಾ ಟೈಮಲ್ಲಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದು ಸುರಕ್ಷಿತವಲ್ಲ ಎಂದಿದ್ದಾರೆ. ಹಾಗೇ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವ ಬಗ್ಗೆ ಅಲ್ಲಿನ ಸರ್ಕಾರ ಚಿಂತನೆ ನಡೆಸುತ್ತಿದೆ.
ಐಸಿಸಿ ಒಪ್ಪಿಗೆ ನೀಡಿದ್ರೆ ಬಾಂಗ್ಲಾ ಪಂದ್ಯಗಳು ಲಂಕಾಗೆ ಶಿಫ್ಟ್!
ಇನ್ನು ಇಷ್ಟಕ್ಕೇ ಸುಮ್ಮನಾಗದ ಬಾಂಗ್ಲಾ ಕ್ರಿಕೆಟ್ ಬೋರ್ಡ್ ವಿಶ್ವಕಪ್ನಲ್ಲಿ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶದ ನಾಲ್ಕು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದಿದೆ. ಹಾಗೇನಾದ್ರೂ ಬಾಂಗ್ಲಾದೇಶದ ಬೇಡಿಕೆಯನ್ನು ಐಸಿಸಿ ಒಪ್ಪಿಕೊಂಡರೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಮ್ಮ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿವೆ. ಆದ್ರೆ ಬಾಂಗ್ಲಾ ತಗಾದೆಗೆ ಬಿಸಿಸಿಐ ಖಡಕ್ಕಾಗೇ ತಿರುಗೇಟು ಕೊಟ್ಟಿದೆ. ಟಿ-20 ವಿಶ್ವಕಪ್ ಟೂರ್ನಿಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಸ್ಥಳ ಬದಲಾವಣೆ ಮಾಡುವುದು ಕಷ್ಟ ಎಂದಿದೆ. ಫೆಬ್ರವರಿ 7 ರಂದು ಬಾಂಗ್ಲಾ ವೆಸ್ಟ್ ಇಂಡೀಸ್ ಕೊಲ್ಕತ್ತಾ, ನಂತ್ರ ಫೆಬ್ರವರಿ 9ಕ್ಕೆ ಬಾಂಗ್ಲಾ ಇಟಲಿ ಮ್ಯಾಚ್ ಕೂಡ ಕೊಲ್ಕತ್ತಾ, ನಂತ್ರ ಫೆಬ್ರವರಿ 14ಕ್ಕೆ ಕೊಲ್ಕತ್ತಾದಲ್ಲೇ ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯ ಇನ್ನು ಫೆಬ್ರವರಿ 17ಕ್ಕೆ ಮುಂಬೈನಲ್ಲಿ ನೇಪಾಳ ವಿರುದ್ಧ ಬಾಂಗ್ಲಾ ಕೊನೇ ಪಂದ್ಯ ಆಡ್ಬೇಕಿದೆ. ಆದ್ರೆ ಈಗ ನೋಡಿದ್ರೆ ಲಂಕಾದಲ್ಲೇ ಪಂದ್ಯಗಳನ್ನ ಆಡ್ಸಿ ಅಂತಿದ್ದಾರೆ. ಒಂದು ವೇಳೆ ಐಸಿಸಿ ಒಪ್ಪಿಗೆ ಸೂಚಿಸಿದ್ರೆ ಪಾಕ್ನಂತೆಯೇ ಬಾಂಗ್ಲಾ ಪಂದ್ಯಗಳೆಲ್ಲಾ ಲಂಕಾಗೆ ಶಿಫ್ಟ್ ಆಗಲಿವೆ. ಸೋ ಈಗ ಇರುವ ಸಿಚುಯೇಷನ್ ನೋಡಿದ್ರೆ ಭಾರತ ಮತ್ತು ಬಾಂಗ್ಲಾ ಸರಣಿಗಳು ನಡೆಯೋದೇ ಡೌಟಿದೆ.
ಪಾಕ್ ನಂತೆಯೇ ಆಗುತ್ತಾ ಬಾಂಗ್ಲಾ?
ಪಾಕ್ ನಂತೆಯೇ ಬಾಂಗ್ಲಾ ಆಟಗಾರರನ್ನೂ ಐಪಿಎಲ್ ನಿಂದ ಬ್ಯಾನ್?
ಎರಡೂ ದೇಶಗಳಿಗೆ ಭೇಟಿ ನೀಡದೆ ತಟಸ್ಥ ಸ್ಥಳದಲ್ಲಿ ಸರಣಿ ಆಯೋಜನೆ
ಮುಂದಿನ ದಿನಗಳಲ್ಲಿ ಭಾರತ-ಬಾಂಗ್ಲಾ ದ್ವಿಪಕ್ಷೀಯ ಸರಣಿಗಳೇ ಬಂದ್
ಪಾಕಿಸ್ತಾನದಂತೆ ಬಾಂಗ್ಲಾ ವಿರುದ್ಧ ಐಸಿಸಿ, ಏಷ್ಯಾಕಪ್ ನಲ್ಲಿ ಮಾತ್ರ ಆಟ
ಈಗಾಗ್ಲೇ ಟಿ-20 ವಿಶ್ವಕಪ್ ನಲ್ಲೂ ಭಾರತಕ್ಕೆ ಬರಲ್ಲ ಎಂದಿರುವ ಬಾಂಗ್ಲಾ
ಹೀಗೆ ದಿನೇದಿನೇ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಬಿಗಡಾಯಿಸ್ತಿದೆ. ಈಗಾಗ್ಲೇ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಡಿಸೆಂಬರ್ನಲ್ಲಿ ಭಾರತದಲ್ಲಿ ಮಹಿಳಾ ಟಿ20ಐ ಸರಣಿ ಆಡಬೇಕಿತ್ತು. ಹೀಗಿದ್ರೂ ಯಾವುದೇ ಅಧಿಕೃತ ಘೋಷಣೆಯಿಲ್ಲದೆ ಅದನ್ನು ರದ್ದುಗೊಳಿಸಲಾಯಿತು. ಇದರ ಬದಲಿಗೆ ಭಾರತ ಮತ್ತು ಶ್ರೀಲಂಕಾ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಯೋಜಿಸಲಾಯಿತು, ಇದರಲ್ಲಿ ಮಹಿಳಾ ತಂಡವು 5-0 ಅಂತರದಿಂದ ಗೆದ್ದಿತು. ಈಗ ಮೆನ್ಸ್ ಟೀಮ್ದೂ ಹೀಗೆ ಆಗುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಇನ್ನು ಭಾರತ ತಂಡವು ಕೊನೆಯ ಬಾರಿಗೆ 2022-23 ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು. ಅಲ್ಲಿ ಏಕದಿನ ಸರಣಿಯನ್ನು ಸೋತಿತ್ತು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಆದ್ರೆ ಬಾಂಗ್ಲಾ ವಿರುದ್ಧ ಭಾರತವೇ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶದಲ್ಲಿ ಭಾರತ ಆಡಿರುವ 25 ಪಂದ್ಯಗಳಲ್ಲಿ 18 ರಲ್ಲಿ ಗೆದ್ದಿದ್ದು, 6 ರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈಗ ಟಿ-20 ವಿಶ್ವಕಪ್ ಟೈಮಲ್ಲೇ ಹೊಸ ವಿವಾದಗಳು ಸೃಷ್ಟಿಯಾಗಿವೆ. ಐಪಿಎಲ್ನಿಂದಲೂ ಬಾಂಗ್ಲಾ ಆಟಗಾರನನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳೂ ನಡೆಯುತ್ತೋ ಇಲ್ವೋ ಅನ್ನೋ ಅನುಮಾನ ಶುರುವಾಗಿದೆ.

ನೋಡಿರಿ

