ಸೂರ್ಯ ಸಿಡಿಲು.. ಪಾಂಡ್ಯ ಮಿಂಚು – ಬಾಂಗ್ಲಾ ಬಾಯ್ಸ್ ಸದೆ ಬಡಿದ ಭಾರತ
ಟಿ-20ಯಲ್ಲಿ ಯಂಗ್ ಸ್ಟರ್ಸ್ ಹವಾ

ಟೀಂ ಇಂಡಿಯಾದ ಸ್ಟಾರ್ ಆಟಗಾರರಿಗೆಲ್ಲಾ ರೆಸ್ಟ್ ನೀಡಿ ಯಂಗ್ಸ್ಟರ್ಸ್ನೇ ಟಿ-20 ಅಖಾಡಕ್ಕೆ ಇಳಿಸಿದ್ದ ಬಿಸಿಸಿಐ ಪ್ಲ್ಯಾನ್ ಕೊನೆಗೂ ವರ್ಕೌಟ್ ಆಗಿದೆ. ಬ್ಯಾಟಿಂಗ್ & ಫೀಲ್ಡಿಂಗ್ ಎರಡ್ರಲ್ಲೂ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಬಾಯ್ಸ್ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವಿನ ಕೇಕೆ ಹಾಕಿದ್ದಾರೆ. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಅಂತೂ ಹೀರೋ ಆಗಿ ಮೆರೆದಿದ್ರು. ಅಷ್ಟಕ್ಕೂ ಭಾನುವಾರದ ಮೊದಲ ಪಂದ್ಯ ಹೇಗಿತ್ತು..? ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದಿದ್ಯಾರು? ಟೆಸ್ಟ್ನಂತೆಯೇ ಚುಟುಕು ಸಮರದಲ್ಲೂ ಕ್ಲೀನ್ ಸ್ವೀಪ್ ಸಾಧಿಸ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಗದೀಶ್ ಗೆ ನರಕ ದರ್ಶನ: ಚೈತ್ರ – ಮಾನಸ.. ಮಾತಲ್ಲಿ ಗೆಲ್ಲೋದ್ಯಾರು?
ಬಾಂಗ್ಲಾದೇಶದ ವಿರುದ್ಧದ 2 ಟೆಸ್ಟ್ ಮ್ಯಾಚ್ಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ತಂಡ ಇದೀಗ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಮೇಲುಗೈ ಸಾಧಿಸಿದೆ. ಭಾನುವಾರ ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯವು ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದ್ರಂತೆ ಬಾಂಗ್ಲಾ ಬಾಯ್ಸ್ ಬ್ಯಾಟಿಂಗ್ಗೆ ಇಳಿದಿದ್ರು. ಟೆಸ್ಟ್ ಸರಣಿ ಸೋಲಿನ ಸೇಡನ್ನು ಟಿ-20 ಸರಣಿ ಮೂಲಕ ತೀರಿಸಿಕೊಳ್ಳೋ ಯೋಜನೆಯಲ್ಲಿದ್ದ ಬಾಂಗ್ಲಾ ಆಟಗಾರರಿಗೆ ಮತ್ತೊಮ್ಮೆ ಶಾಕ್ ಕಾದಿತ್ತು. ಯಾಕಂದ್ರೆ ಭಾರತೀಯ ಬೌಲರ್ಸ್ ಮುಂದೆ ಕ್ರೀಸ್ ಕಚ್ಚಿ ನಿಲ್ಲೋಕೂ ಒದ್ದಾಡಿದ ಬಾಂಗ್ಲಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ಭಾರತದ ಬೌಲಿಂಗ್ ದಾಳಿಗೆ ಬೆಂಡಾದ ಬಾಂಗ್ಲಾ ಬಾಯ್ಸ್!
ಬಾಂಗ್ಲಾದೇಶದ ಪರ ಓಪನರ್ ಆಗಿ ಕಣಕ್ಕಿಳಿದ ಪರ್ವೇಜ್ ಹೊಸೈನ್ ಎಮನ್ ಕೇವಲ 8 ರನ್ಗೆ ವಿಕೆಟ್ ಒಪ್ಪಿಸಿದ್ರು. ವಿಕೆಟ್ ಕೀಪರ್ ಲಿಟ್ಟನ್ ದಾಸ್ ಕೂಡ 4 ರನ್ಗೆ ಔಟಾದ್ರೆ ಕ್ಯಾಪ್ಟನ್ ನಜ್ಮುಲ್ ಹೊಸೈನ್ ಶಾಂಟೊ 27 ರನ್ ಕಲೆ ಹಾಕಿದ್ರು. ಇವರಿಗೆ ಸಾಥ್ ಕೊಟ್ಟ ಮೆಹಿದಿ ಹಸನ್ 35 ರನ್ ಗಳಿಸಿದ್ರು. ಆದ್ರೆ ಉಳಿದವರ್ಯಾರು ಹೇಳಿಕೊಳ್ಳುವಂಥ ಪರ್ಫಾಮೆನ್ಸ್ ನೀಡ್ಲಿಲ್ಲ. ಭಾರತದ ಪರ ಅರ್ಷ್ದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಬೇಟೆಯಾಡಿದ್ರೆ ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟರ್ಸ್ ಬೆವರಿಳಿಸಿದ್ರು. ಪರಿಣಾಮ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು.
ಹೊಡಿಬಡಿ ಆಟವಾಡಿದ ಸೂರ್ಯ & ಹಾರ್ದಿಕ್!
ಬೌಲಿಂಗ್ನಲ್ಲೇ ಬಾಂಗ್ಲಾ ಪಡೆಗೆ ಶಾಕ್ ಕೊಟ್ಟಿದ್ದ ಭಾರತೀಯ ಬೌಲರ್ಸ್ ಬ್ಯಾಟಿಂಗ್ನಲ್ಲೂ ಕೂಡ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದ್ರು. ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿಸಿದ್ರು. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 2 ಓವರ್‌ಗಳಲ್ಲಿ 25 ರನ್ ಚಚ್ಚಿತ್ತು. ಈ ವೇಳೆ ಅಭಿಷೇಕ್ ಶರ್ಮಾ ರನೌಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ನಂತರ ಸಂಜು ಸ್ಯಾಮ್ಸನ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್, ಬೌಂಡರಿಗಳ ಸುರಿಮಳೆಗರೆದ್ರು. 243.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 39 ರನ್ ಚಚ್ಚಿದರೆ, ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 29 ರನ್, ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 29 ರನ್, ಅಭಿಷೇಕ್ ಶರ್ಮಾ 7 ಎಸೆತಗಳಲ್ಲಿ 16 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿ ಮಿಂಚಿದರು. ಪರಿಣಾಮ ಕೇವಲ 11.5 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 132 ರನ್ ಚಚ್ಚಿ ಗೆಲುವಿನ ನಗೆ ಬೀರಿತು.
ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್!
ಐಪಿಎಲ್ನಲ್ಲೇ ಶರವೇಗದ ಬೌಲಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ ವೇಗಿ ಮಯಾಂಕ್ ಯಾದವ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ಈ ನಿರೀಕ್ಷೆಯನ್ನ ಮಯಾಂಕ್ ಹುಸಿ ಮಾಡಲಿಲ್ಲ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ರಾಕೆಟ್ ವೇಗಿ ಮಯಾಂಕ್ ದಾಖಲೆಯ ಪುಟ ತೆರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್ ಪ್ಲೇನಲ್ಲಿ ಮೇಡಿನ್ ಓವರ್ ಮಾಡಿ ದಾಖಲೆ ಬರೆದ್ರು. 4 ಓವರ್ ಬೌಲ್ ಮಾಡಿದ್ದ ಮಯಾಂಕ್ 1 ಮೇಡನ್ ಓವರ್ ನೀಡಿ 21 ರನ್ ಬಿಟ್ಟುಕೊಟ್ರು. ಹಾಗೇ ಒಂದು ವಿಕೆಟ್ ಬೇಟೆಯಾಡಿದ್ರು.
ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ಮಿಂಚಿದ ಪಾಂಡ್ಯ!
ಭಾನುವಾರದ ಪಂದ್ಯದಲ್ಲಿ ಮೇನ್ ಹೈಲೆಟ್ ಆಗಿದ್ದೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಅಬ್ಬರಿಸಿದ ಪಾಂಡ್ಯ ಹೀರೋ ಆಗಿದ್ರು. 16 ಎಸೆತಗಳನ್ನು ಎದುರಿಸಿ 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಸಿಡಿಸಿದರು. ಅದ್ರಲ್ಲೂ ಹಾರ್ದಿಕ್ 12ನೇ ಓವರ್‌ನಲ್ಲಿ ಹೊಡೆದ ನೋ ಲುಕ್ ಶಾಟ್ ಇಡೀ ಸ್ಟೇಡಿಯಮ್ಮೇ ಸ್ಟನ್ ಆಗುವಂತೆ ಮಾಡಿತ್ತು. ಬಾಂಗ್ಲಾದೇಶದ ಅನುಭವಿ ಬೌಲರ್ ತಸ್ಕಿನ್ ಅಹ್ಮದ್ ಅವರು ತಮ್ಮ ಮೂರನೇ ಎಸೆತವನ್ನು ಶಾರ್ಟ್ ಆಗಿ ಎಸೆತದರು. ಇದನ್ನು ಅರಿತ ಪಾಂಡ್ಯ ಚೆಂಡನ್ನು ನೋಡದೆ ಹಿಮ್ಮುಖವಾಗಿ ಅದ್ಭುತ ಶಾಟ್ ಹೊಡೆದರು. ಚೆಂಡು ಬೌಂಡರಿಗೆ ತಲುಪಿತು.
ಅ. 9 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2ನೇ ಪಂದ್ಯ!
ಸದ್ಯ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಅಕ್ಟೋಬರ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಹಾಗೆಯೇ ಮೂರನೇ ಟಿ20 ಪಂದ್ಯವು ಅಕ್ಟೋಬರ್ 12 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಒಟ್ನಲ್ಲಿ ಫಸ್ಟ್ ಮ್ಯಾಚ್ನಲ್ಲೇ ಅಬ್ಬರಿಸಿರೋ ಟೀಂ ಇಂಡಿಯಾ ಬಾಯ್ಸ್ ಎರಡು ಮತ್ತು ಮೂರನೇ ಪಂದ್ಯವನ್ನೂ ಗೆಲ್ಲೋ ಜೋಶ್ನಲ್ಲಿದ್ದಾರೆ. ಅದ್ರಲ್ಲೂ ತವರಿನಲ್ಲೇ ಸರಣಿ ನಡೆಯುತ್ತಾ ಇರೋದು ಮತ್ತೊಂದು ಪ್ಲಸ್ ಆಗಿದೆ.