ವೈಭವ್ ಸೂರ್ಯವಂಶಿ ನಾಯಕತ್ವದಲ್ಲಿ ಭರ್ಜರಿ ಜಯ – ದ. ಆಫ್ರಿಕಾ ವಿರುದ್ಧದ U19 ಏಕದಿನ ಸರಣಿ ಕ್ಲೀನ್ ಸ್ವೀಪ್

ವೈಭವ್ ಸೂರ್ಯವಂಶಿ ನಾಯಕತ್ವದಲ್ಲಿ ಭರ್ಜರಿ ಜಯ – ದ. ಆಫ್ರಿಕಾ ವಿರುದ್ಧದ U19 ಏಕದಿನ ಸರಣಿ ಕ್ಲೀನ್ ಸ್ವೀಪ್

ವೈಭವ್ ಸೂರ್ಯವಂಶಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಅಂಡರ್-19 ತಂಡವು  ಕ್ಲೀನ್ ಸ್ವೀಪ್ ಮಾಡಿದೆ. ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯರನ್ನು 233 ರನ್​​ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ಇದರೊಂದಿಗೆ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ್ದ ವೈಭವ್ ಸೂರ್ಯವಂಶಿಗೆ ಭರ್ಜರಿ ಜಯ ದಾಖಲಿಸಿದೆ. ಇಡೀ ಸರಣಿಯಲ್ಲಿ ಆಟಗಾರನಾಗಿ ಮಾತ್ರವಲ್ಲದೆ ನಾಯಕತ್ವದಲ್ಲೂ ಮಿಂಚಿದ ವೈಭವ್  ಅತಿ ಕಿರಿಯ ವಯಸ್ಸಿಗೆ ಕ್ಲೀನ್ ಸ್ವೀಪ್ ಮಾಡಿದ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್‌ ಗಲಾಟೆ ಕೇಸ್!‌ – ಬಂಧನ ಭೀತಿಯಿಂದ ಬಳ್ಳಾರಿ ತೊರೆದ ಕಾರ್ಯಕರ್ತರು!

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 393 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಆರನ್ ಜಾರ್ಜ್ ಅದ್ಭುತ ಶತಕ ಬಾರಿಸಿದರು. ನಾಯಕ ವೈಭವ್ 127 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರೆ, ಆರನ್ 118 ರನ್‌ಗಳ ಕೊಡುಗೆ ನೀಡಿದರು. ಇವರಿಬ್ಬರು ಜೊತೆಯಾಗಿ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಇವರಿಬ್ಬರನ್ನು ಹೊರತುಪಡಿಸಿ ವೇದಾಂತ್ ತ್ರಿವೇದಿ ಕೂಡ 34 ರನ್​ಗಳ ಇನ್ನಿಂಗ್ಸ್ ಆಡಿದರೆ, ಮೊಹಮ್ಮದ್ ಎನಾನ್ 28 ರನ್‌ಗಳ ಕೊಡುಗೆ ನೀಡಿದರು.

394 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಅಂಡರ್-19 ತಂಡವು ಭಾರತೀಯ ಬೌಲರ್‌ಗಳ ವಿರುದ್ಧ ಸಂಪೂರ್ಣವಾಗಿ ಅಸಹಾಯಕವಾಗಿ ಕಾಣಿಸಿಕೊಂಡಿತು. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಕಿಶನ್ ಸಿಂಗ್, ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡಿದರು. ಇದರಿಂದಾಗಿ ಒತ್ತಡಕ್ಕೆ ಸಿಲುಕಿದ ಆತಿಥೇಯರು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲೇ ಸೋಲಿನ ಸುಳಿವು ನೀಡಿದರು. ತಂಡದ ಪರ ಹೋರಾಟ ನೀಡಿದ ಡೇನಿಯಲ್ ಬೋಸ್ಮನ್ ಮತ್ತು ಪಾಲ್ ಜೇಮ್ಸ್ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರೂ ಅದು ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ಪಾಲ್ ಜೇಮ್ಸ್ 41 ರನ್ ಗಳಿಸಿದರೆ, ಡೇನಿಯಲ್ ಬೋಸ್ಮನ್ 40 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 35 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು.

Kishor KV