97 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಒಪ್ಪಿಗೆ – ಭಾರತೀಯ ವಾಯುಪಡೆಗಿನ್ನು ಆನೆ ಬಲ
ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿರುವ ಭಾರತ ಇದೀಗ ತನ್ನ ರಕ್ಷಣಾ ಸಾಮರ್ಥ್ಯದಲ್ಲಿ ಹಿಂದೆಂದಿಗಿಂತಲೂ ಬಲಿಷ್ಠವಾಗ್ತಿದೆ. ತೇಜಸ್ ಯುದ್ಧ ವಿಮಾನ ಹಾಗೂ ಪ್ರಚಂಡ್ ಯುದ್ಧ ಹೆಲಿಕಾಪ್ಟರ್ ಗಳ ಬಲ ಹೆಚ್ಚಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದೀಗ ರಕ್ಷಣಾ ಇಲಾಖೆಗೆ ತೇಜಸ್ ಯುದ್ಧ ವಿಮಾನ ಹಾಗೂ ಪ್ರಚಂಡ್ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ. ಈ ಅನುಮತಿಯು ವಿಶ್ವಮಟ್ಟದಲ್ಲಿ ಭಾರತದ ಬಲವನ್ನ ಹಿಂದೆಂದಿಗಿಂತಲೂ ಶಕ್ತಿಯುತಗೊಳಿಸಲಿದೆ.
ತೇಜಸ್ ಲಘು ಯುದ್ಧ ವಿಮಾನ ಈಗಾಗಲೇ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾರತದ ಈ ಯುದ್ಧ ವಿಮಾನಕ್ಕೆ ವಿದೇಶಗಳಿಂದಲೂ ಡಿಮ್ಯಾಂಡ್ ಇದೆ. ಅಷ್ಟಕ್ಕೂ ಈ ಯುದ್ಧ ವಿಮಾನಕ್ಕೆ ತೇಜಸ್ ಎಂದು ಹೆಸರಿಟ್ಟಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 2003ರಲ್ಲಿ ಅವರು ಈ ಪುಟ್ಟ ಶಕ್ತಿಶಾಲಿ ಯುದ್ಧ ವಿಮಾನಕ್ಕೆ ತೇಜಸ್ ಎಂದು ಹೆಸರಿಟ್ಟಿದ್ದರು. ಇದೇ ಈಗ ವಿಶ್ವಮಟ್ಟದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದೆ. ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಎನ್ನುವಂತೆ ತೇಜಸ್ ಹಾಗೂ ಪ್ರಚಂಡ್ ಭಾರತದ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ತಮ್ಮ ಸಂಖ್ಯಾ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಮೂಲಕ ರಕ್ಷಣಾ ವಲಯದಲ್ಲಿ ಭರವಸೆ ಮೂಡಿಸಿವೆ.
ಇದನ್ನೂ ಓದಿ : ವಿಶ್ವದಾದ್ಯಂತ ಪತನಗೊಂಡಿದ್ದ UFO, ಅನ್ಯಗ್ರಹ ಜೀವಿಗಳ ಶವಗಳು ಅಮೆರಿಕ ವಶದಲ್ಲಿ!
ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ವಾಯುಪಡೆಗಾಗಿ 97 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದೆ. ಅಲ್ಲದೆ, ಭಾರತೀಯ ಸೇನೆಗಾಗಿ 156 ಪ್ರಚಂಡ್ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಖರೀದಿಸಲು ಕೌನ್ಸಿಲ್ ಅನುಮೋದನೆ ನೀಡಿದೆ. ರಕ್ಷಣಾ ಅಧಿಕಾರಿಗಳ ಪ್ರಕಾರ ಸುಮಾರು 65,000 ಕೋಟಿ ರೂ. ವೆಚ್ಚದಲ್ಲಿ 97 LCA ಮಾರ್ಕ್ 1A ತೇಜಸ್ ಫೈಟರ್ ಜೆಟ್ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಹಾಗೂ 156 LCH ಪ್ರಚಂಡ್ ಚಾಪರ್ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ರಕ್ಷಣಾ ಸ್ವಾಧೀನ ಮಂಡಳಿಯು ಅನುಮೋದಿಸಿದೆ. ಜೊತೆಗೆ 84 Su-30MKI ಫೈಟರ್ಗಳ ಅಪ್ಗ್ರೇಡ್ ಯೋಜನೆಗೆ ಸಹ ಅನುಮೋದನೆ ನೀಡಲಾಗಿದೆ. ಈ ಪ್ರಸ್ತಾವನೆಗಳು 1.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮತ್ತು ಸ್ವದೇಶಿ ಯೋಜನೆಗಳಾಗಿವೆ. ಭಾರತವು 2030 ರ ವೇಳೆಗೆ 160 ಮತ್ತು 2035 ರ ವೇಳೆಗೆ 175 ಯುದ್ಧನೌಕೆಗಳನ್ನು ಹೊಂದಲು ಯೋಜಿಸಿದ್ದು, ಇದಕ್ಕೆ ಅಂದಾಜು 2 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಅಲ್ಲದೆ ಭಾರತೀಯ ನೌಕಾಪಡೆಯ 60ಕ್ಕೂ ಹೆಚ್ಚು ಹಡಗುಗಳು ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿವೆ.
ತೇಜಸ್ ಲಘು ಯುದ್ಧ ವಿಮಾನ ಭಾರತದ ಮೊದಲ ಸ್ವಯಂ ನಿರ್ಮಿತ ಯುದ್ಧವಿಮಾನವಾಗಿದೆ. 2019ರ ಫೆಬ್ರವರಿಯಲ್ಲಿ ಸಂಪೂರ್ಣ ಶಸ್ತ್ರಸಜ್ಜಿತ ಫೈಟರ್ ಜೆಟ್ ಆಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲು ಅಂತಿಮ ಅನುಮತಿಯನ್ನು ಪಡೆದಿತ್ತು. ಪ್ರಚಂಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ಗಳ ಮೊದಲ ಬ್ಯಾಚ್ ಅನ್ನು ಕಳೆದ ವರ್ಷ ಐಎಎಫ್ ಮತ್ತು ಸೇನೆಗೆ ಸೇರಿಸಲಾಗಿತ್ತು.. ತೇಜಸ್ ಎಂದರೆ ಪ್ರಕಾಶಮಾನವಾದ ಎಂದರ್ಥ. ಈ ಯುದ್ಧ ವಿಮಾನ ಅನೇಕ ಯುಎಸ್ಪಿಗಳನ್ನು ಹೊಂದಿದೆ. ಸ್ಟಾರ್ಟರ್ ಗಳಿಗೆ, ಇದು ನಿರ್ಣಾಯಕ ಕಾರ್ಯಾಚರಣೆ ಸಾಮರ್ಥ್ಯಕ್ಕಾಗಿ ಸಕ್ರಿಯ ವಿದ್ಯುನ್ಮಾನ ಸ್ಕ್ಯಾನ್ ಮಾಡಿದ ರಾಡಾರ್ ಅನ್ನು ಹೊಂದಿದೆ. ಹಾಗೇ ಗಾಳಿಯಲ್ಲಿ ಇಂಧನ ತುಂಬಿಸಿಕೊಳ್ಳಬಹುದು ಮತ್ತು ಯುದ್ಧಕ್ಕೆ ಸಿದ್ಧವಾಗಬಹುದು. ದೂರದಿಂದಲೇ ಶತ್ರು ವಿಮಾನಗಳನ್ನು ಗುರಿಯಾಗಿಸಬಲ್ಲದು ಮತ್ತು ಶತ್ರುವಿನ ರಾಡಾರ್ ನಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಸಹ ಹೊಂದಿದೆ. ಅದರ ವೈಶಿಷ್ಟ್ಯಗಳಿಂದಾಗಿ, ತೇಜಸ್ ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾದ ಅಭಿವೃದ್ಧಿ ಹೊಂದಿದ ವಿಮಾನಗಳೊಂದಿಗೆ ಸ್ಪರ್ಧಿಸುವಷ್ಟು ಸಾಮರ್ಥ್ಯ ಹೊಂದಿದೆ.
ಪ್ರಸ್ತುತ ತೇಜಸ್ ಯುದ್ಧ ವಿಮಾನ ಮೂರು ಆವೃತ್ತಿಗಲ್ಲಿ ಉತ್ಪಾದನೆಗೊಳ್ಳುತ್ತಿದೆ. ತೇಜಸ್ ಮಾರ್ಕ್-1, ಮಾರ್ಕ್-1ಎ ಹಾಗೂ ತರಬೇತಿ ವಿಮಾನ. ಎಲ್ ಸಿಎ ತೇಜಸ್ 13.2 ಮೀಟರ್ ಉದ್ದದ, 8.2 ಮೀಟರ್ ರೆಕ್ಕೆಯ ವ್ಯಾಪ್ತಿ ಹೊಂದಿರುವ 4.4 ಮೀಟರ್ ಎತ್ತರವಿರುವ ವಿಮಾನವಾಗಿದೆ. ಇದು ಅತ್ಯಂತ ಶಕ್ತಿಶಾಲಿಯಾದ ಯುದ್ಧ ವಿಮಾನವಾಗಿದ್ದು, ಒಂಟಿ ಇಂಜಿನ್, ಒಂಟಿ ಪೈಲಟ್ ಆಸನ ಹೊಂದಿದೆ. ಡೆಲ್ಟಾ ವಿಂಗ್, ಟೈಲ್ ಲೆಸ್, ಹಗುರ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ಸವಾಲಿನ, ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಸಮರ್ಥವಾಗಿ ಕಾರ್ಯಾಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮೂರೂ ಉತ್ಪಾದನಾ ಆವೃತ್ತಿಗಳಿಗೆ 85 ಕೆಎನ್ ಥ್ರಸ್ಟ್ ಹೊಂದಿರುವ ಜಿಇ-404-ಐಎನ್20 ಒಂಟಿ ಇಂಜಿನ್ ಶಕ್ತಿ ನೀಡುತ್ತದೆ. ಗಾಳಿಯಲ್ಲಿ ಇರುವಾಗಲೇ ಇಂಧನ ಮರುಪೂರಣ ನಡೆಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 4,000 ಕೆಜಿ ಪೇಲೋಡ್ ಸಾಮರ್ಥ್ಯ ಹೊಂದಿದೆ. ವಿಮಾನ ಗರಿಷ್ಠ 1.8 ಮ್ಯಾಕ್ ಅಂದ್ರೆ ಪ್ರತಿ ಗಂಟೆಗೆ 2,200 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲದು. ಇದರ ಗರಿಷ್ಠ ಟೇಕಾಫ್ ತೂಕ 13,300 ಕೆಜಿ ಆಗಿದೆ. ವಿಮಾನ ಸಾಮಾನ್ಯವಾಗಿ 850 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಯುದ್ಧಕ್ಕಾಗಿ 500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಗರಿಷ್ಠ 50,000 ಅಡಿಗಳ ಎತ್ತರದಲ್ಲಿ ಚಲಿಸಬಲ್ಲದು.