KLಗೆ ಚಾನ್ಸ್.. BUMRAH ವಾಪಸ್ – ಬಾಂಗ್ಲಾ ಬೇಟೆಗೆ RO ಬಾಯ್ಸ್ ರೆಡಿ!
ಹೊಸಬರಿಗೆ ಚಾನ್ಸ್.. ಏನಿದು ಲಾಜಿಕ್?
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಿದೆ. ಭಾರತ ತಂಡ ಬರೋಬ್ಬರಿ 6 ತಿಂಗಳ ನಂತರ ಟೆಸ್ಟ್ ಸೀರೀಸ್ ಆಡ್ತಿದ್ದು, ಹೊಸ ಕೋಚ್ ಗೌತಮ್ ಗಂಭೀರ್ಗೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಇದು ಮೊದಲ ಸರಣಿ ಆಗಿದೆ. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಅಗ್ರಸ್ಥಾನ ಖಾತ್ರಿ ಮಾಡಿಕೊಳ್ಳಲು ಟೀಮ್ ಇಂಡಿಯಾಗೆ ಬಾಂಗ್ಲಾದೇಶ ವಿರುದ್ದ ಸರಣಿ ಅತ್ಯಂತ ಮಹತ್ವದ್ದಾಗಿದೆ. ಅಷ್ಟಕ್ಕೂ ಬಾಂಗ್ಲಾ ಸರಣಿಗೆ ಯಾರೆಲ್ಲಾ ಆಯ್ಕೆ ಆಗಿದ್ದಾರೆ? ಆರ್ಸಿಬಿಯ ಯಾವೆಲ್ಲಾ ಆಟಗಾರರಿಗೆ ಲಾಟರಿ ಹೊಡೆದಿದೆ? ಡ್ರಾಪ್ ಆಗಿರೋ ಸ್ಟಾರ್ ಆಟಗಾರರು ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಣಗುಡುತ್ತಿರುವ ರಾಮನಗರಿ! – ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಕೆ!
ಸೆಪ್ಟೆಂಬರ್ 19ರಿಂದ ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯದಾಗಿ ಭಾರತ ತಂಡ ಟೆಸ್ಟ್ ಸರಣಿ ಆಡಿತ್ತು. ಟೀಮ್ ಇಂಡಿಯಾ ಈ ಸರಣಿಯನ್ನು 4-1ರ ಅಂತರದಲ್ಲಿ ಗೆದ್ದಿತ್ತು. ಈಗ ಸತತ 6 ತಿಂಗಳ ಬಳಿಕ ಟೀಮ್ ಇಂಡಿಯಾ ರೆಡ್ ಬಾಲ್ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಿದೆ. ಇನ್ನು ಬಾಂಗ್ಲಾದೇಶದ ಆಟಗಾರರು ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಫುಲ್ ಜೋಶ್ನಲ್ಲಿದ್ದಾರೆ. ಹೀಗಾಗಿ ಬಾಂಗ್ಲಾ ಪಡೆಯನ್ನ ಸೀರಿಯಸ್ ಆಗಿ ತೆಗೆದುಕೊಂಡಿರೋ ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಿದೆ. ನಿರೀಕ್ಷೆಯಂತೆ ಕೆಲ ಆಟಗಾರರಿಗೆ ಬಂಪರ್ ಲಾಟರಿ ಹೊಡೆದಿದೆ. ಅಚ್ಚರಿ ಅಂದ್ರೆ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಸೇರಿದಂತೆ ಹಲವು ಆಟಗಾರರನ್ನ ಕೈ ಬಿಡಲಾಗಿದೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ 16 ಜನರ ಟೀಂ ಅನೌನ್ಸ್!
ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕತ್ವದ 16 ಸದಸ್ಯರ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಫೈನಲ್ ಮಾಡಿದೆ. ರೋಹಿತ್ ಶರ್ಮಾ ಜೊತೆ ಓಪನರ್ಸ್ ಆಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಿಡಲ್ ಆರ್ಡರ್ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ಅವಕಾಶ ಗಿಟ್ಟಿಸಿದ್ರೆ, ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಕೋಟಾದದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಇದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವಕಾಶ ಪಡ್ಕೊಂಡಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್ ದಯಾಳ್ ತಂಡಕ್ಕೆ ಜಾಯಿನ್ ಆಗಿದ್ದಾರೆ.
9 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ!
ಟೀಂ ಇಂಡಿಯಾ ಕೊನೆಯ ಬಾರಿಗೆ ಆಡಿದ್ದ ಇಂಗ್ಲೆಂಡ್ ಸರಣಿ ವೇಳೆ ವಿರಾಟ್ ಕೊಹ್ಲಿ ಆಡಿರಲಿಲ್ಲ. ಸೌತ್ ಆಫ್ರಿಕಾ ಟೆಸ್ಟ್ ಸರಣಿಯೇ ಲಾಸ್ಟ್ ಆಗಿತ್ತು. ಇದೀಗ ಬರೋಬ್ಬರಿ 9 ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ವಿರಾಟ್ ಕಾಣಿಸಿಕೊಳ್ಳಲಿದ್ದಾರೆ. ಅಲ್ದೇ ಅಪಘಾತದ ಬಳಿಕ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ರಿಷಭ್ ಪಂತ್, ಈಗ ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ಬರೋಬ್ಬರಿ 20 ತಿಂಗಳ ಬಳಿಕ ವೈಟ್ ಜರ್ಸಿಯಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.
ಟಿ-20 ವಿಶ್ವಕಪ್ ಬಳಿಕ ಜಸ್ಪ್ರೀತ್ ಬುಮ್ರಾ ಎಂಟ್ರಿ!
ಟೀಂ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಪರ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಟಿ-20 ವಿಶ್ವಕಪ್ ಬಳಿಕ ಬುಮ್ರಾ ಟಿ-20 ಹಾಗೇ ಏಕದಿನ ಸರಣಿಗಳಿಂದ ವಿಶ್ರಾಂತಿ ಪಡೆದಿದ್ರು. ಇದೀಗ ಬಾಂಗ್ಲಾ ಎದುರಿನ ಟೆಸ್ಟ್ ತಂಡಕ್ಕೆ ಬುಮ್ರಾ ವಾಪಾಸ್ ಆಗಿದ್ದಾರೆ. ಹಾಗೇ ಇಂಗ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಆಕಾಶ್, ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅದ್ರಲ್ಲೂ ದುಲೀಪ್ ಟ್ರೋಫಿಯಲ್ಲಿ ಮಿಂಚಿದ ವೇಗಿ ಯಶ್ ದಯಾಳ್, ಅಚ್ಚರಿ ಎನ್ನುವಂತೆ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಎಂಟ್ರಿ ಪಡೆದಿದ್ದಾರೆ. ಇನ್ನು ಆರ್ಸಿಬಿ ತಂಡದ ಭಾಗವಾಗಿರುವ ನಾಲ್ವರು ಆಟಗಾರರು ಚಾನ್ಸ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ಯಶ್ ದಯಾಳ್ಗೆ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದಾರೆ.
ಬಾಂಗ್ಲಾ ಸರಣಿಗೆ ಚಾನ್ಸ್ ಗಿಟ್ಟಿಸಿಕೊಂಡ ಕನ್ನಡಿಗ ರಾಹುಲ್
ಟೀ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆಯಾಗ್ತಾರೋ ಇಲ್ವೋ ಅನ್ನೋ ಅನುಮಾನ ಕಾಡಿತ್ತು. ಬಟ್ ಫೈನಲಿ ಕನ್ನಡಿಗ ಕೆಎಲ್ ಚಾನ್ಸ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡದ ಟಿ-20 ಸರಣಿಗಳಿಂದ ಈಗಾಗ್ಲೇ ರಾಹುಲ್ರನ್ನ ಕೈ ಬಿಡಲಾಗ್ತಿದೆ. ಲಂಕಾ ವಿರುದ್ಧದ ಏಕದಿನ ಸರಣಿಗೆ ಸೆಲೆಕ್ಟ್ ಆಗಿದ್ರೂ ಕೂಡ ಮೊದಲ ಎರಡು ಪಂದ್ಯಗಳನ್ನ ಅಷ್ಟೇ ಆಡಿಸಲಾಗಿತ್ತು. ಮೂರನೇ ಪಂದ್ಯದ ವೇಳೆಗೆ ಬೆಂಚ್ ಕಾಯಿಸಿದ್ರು. ಸೋ ಬಾಂಗ್ಲಾ ಸರಣಿಗೆ ರಾಹುಲ್ ಇರ್ತಾರೋ ಇಲ್ವೋ ಅನ್ನೋ ಕನ್ನಡಿಗರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಬಾಂಗ್ಲಾ ಬೇಟೆಗೆ ರೋಹಿತ್ ಪಡೆ ರೆಡಿ!
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ , ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ , ಯಶ್ ದಯಾಳ್, ಹೀಗೆ 16 ತಂಡದ ಸ್ಕ್ವಾಡ್ ಅನೌನ್ಸ್ ಆಗಿದೆ. ಬಟ್ ಅಂತಿಮವಾಗಿ ಪ್ಲೇಯಿಂಗ್ 11ನಲ್ಲಿ ಯಾರು ಚಾನ್ಸ್ ಪಡೆಯುತ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.
ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 11 ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಸೋ ಬಾಂಗ್ಲಾ ಈವರೆಗೂ ಭಾರತದ ವಿರುದ್ಧ ಟೆಸ್ಟ್ನಲ್ಲಿ ಗೆದ್ದಿರೋ ಇತಿಹಾಸವೇ ಇಲ್ಲ. ಆದ್ರೆ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ 2-0 ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಹೀಗಾಗಿ ಭಾರತದ ವಿರುದ್ಧ ಭರ್ಜರಿ ಪರ್ಫಾಮೆನ್ಸ್ ನೀಡೋ ಜೋಶ್ನಲ್ಲಿದ್ದಾರೆ. ಸೆಪ್ಟೆಂಬರ್ 19ರಂದು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಆರಂಭವಾಗಲಿದೆ. ಈ ಮೂಲಕ ಭಾರತದ ಟೆಸ್ಟ್ ಋತುವು ಕೂಡ ಪ್ರಾರಂಭವಾಗುತ್ತದೆ. ಸರಣಿಯ ಎರಡನೇ ಟೆಸ್ಟ್ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.