ಏಷ್ಯನ್ ಗೇಮ್ಸ್ ನಲ್ಲಿ 71 ಪದಕ ಗೆದ್ದ ಭಾರತ – 2018ರ ದಾಖಲೆ ಮುರಿದು ಭಾರತೀಯ ಸ್ಪರ್ಧಿಗಳ ನಾಗಾಲೋಟ

ಏಷ್ಯನ್ ಗೇಮ್ಸ್ ನಲ್ಲಿ 71 ಪದಕ ಗೆದ್ದ ಭಾರತ – 2018ರ ದಾಖಲೆ ಮುರಿದು ಭಾರತೀಯ ಸ್ಪರ್ಧಿಗಳ ನಾಗಾಲೋಟ

ಏಷ್ಯನ್ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ಚೀನಾದಲ್ಲಿ (China) ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ (Asian Games) ಭಾರತ (India) ಅದ್ಭುತ ಪ್ರದರ್ಶನ ನೀಡುತ್ತಿದ್ದು, ದಾಖಲೆ ಬರೆದಿದೆ. ಒಟ್ಟು 71 ಪದಕಗಳನ್ನು ಗೆಲ್ಲುವ ಮೂಲಕ 2018ರ ದಾಖಲೆಯನ್ನು ಬ್ರೇಕ್‌ ಮಾಡಿದೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಸಂಯುಕ್ತ ಮಿಶ್ರ ಅರ್ಚರಿ ಸ್ಪರ್ಧೆಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಜೋಡಿಯನ್ನು ಸೋಲಿಸಿ, ಭಾರತದ ಓಜಸ್ ಪ್ರವೀಣ್ ಮತ್ತು ಜ್ಯೋತಿ ಸುರೇಖಾ ಆರ್ಚರಿ ಜೋಡಿ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಈ ಮೂಲಕ ಬುಧವಾರ ಭಾರತೀಯ ತಂಡವು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ತನ್ನ ಹಿಂದಿನ ಅತ್ಯುತ್ತಮ 70 ಪದಕಗಳ ಸಾಧನೆಯನ್ನು ಮೀರಿ ಪದಕ ಗಳಿಸಿದೆ.

ಇದನ್ನೂ ಓದಿ : ಜಲ್ಲಿಕಟ್ಟು, ಕಂಬಳ‌ಕ್ಕೆ ಸುಪ್ರೀಂ ಕೋರ್ಟ್ ರಿಲೀಫ್ – ರಕ್ತಸಿಕ್ತ ಕ್ರೀಡೆಯಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದೇಕೆ?

2018ರ ಏಷ್ಯನ್ ಗೇಮ್ಸ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದಿತ್ತು. 2023ರ ಕ್ರೀಡಾಕೂಟದಲ್ಲಿ ಭಾರತೀಯ ಪಡೆ ಇದುವರೆಗೆ 16 ಚಿನ್ನ, 26 ಬೆಳ್ಳಿ ಮತ್ತು 29 ಕಂಚಿನ ಪದಕಗಳನ್ನು ಗೆದ್ದಿದೆ. ಇನ್ನೂ ಕೆಲವು ಪದಕಗಳು ಈಗಾಗಲೇ ವಿವಿಧ ಸ್ಪರ್ಧೆಗಳಲ್ಲಿ ಖಚಿತವಾಗಿವೆ.  ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.

ಸದ್ಯ ಭಾರತ 71 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. 2018ರ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು. ಇಲ್ಲಿಯವರೆಗೆ  ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್‌ ಎರಡನೇ ಸ್ಥಾನದಲ್ಲಿದೆ. 32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

Shantha Kumari