ರಾಂಚಿ ಗೆಲುವಿನೊಂದಿಗೆ ಸತತ 17ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ರಾಂಚಿ ಗೆಲುವಿನೊಂದಿಗೆ ಸತತ 17ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ಇಂಗ್ಲೆಂಡ್‌ ವಿರುದ್ಧದ 4 ನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ 5 ವಿಕೆಟ್‌ಗಳ ಜಯ ಸಾಧಿಸಿದ್ದು, ಈ ಮೂಲಕ ಭಾರತವು ತವರಿನಲ್ಲಿ ನಡೆದ ಸತತ 17 ಟೆಸ್ಟ್ ಸರಣಿಗಳನ್ನು ಗೆದ್ದ ವಿಶೇಷ ಸಾಧನೆ ಮಾಡಿದಂತಾಗಿದೆ.

ರಾಂಚಿಯ ಇಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 192 ರನ್‌ಗಳ ಗುರಿ ಪಡೆದ ಭಾರತ 61 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. 40 ರನ್‌ಗಳಿಂದ 4ನೇ ದಿನದ ಕ್ರೀಸ್ ಆರಂಭಿಸಿದ ಭಾರತ, ಆಂಗ್ಲರ ಸ್ಪಿನ್ ದಾಳಿಯ ನಡುವೆಯೂ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಲ್ಲಿ ಭಾರತ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ:  ಇಂಗ್ಲೆಂಡ್ 353 ರನ್‌ಗೆ ಆಲೌಟ್ – ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ ಶುರು

4ನೇ ದಿನದಾಟದಲ್ಲಿ ಭಾರತ ಭಾರತ 120 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ  ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿದ್ದರು. ಆದ್ರೆ 37 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಔಟಾಗುತ್ತಿದ್ದಂತೆ, ಅರ್ಧಶತಕ ಗಳಿಸಿದ್ದ ರೋಹಿತ್, ರಜತ್ ಪಾಟೀದಾರ್, ರವೀಂದ್ರ ಜಡೇಜಾ ಹಾಗೂ ಸರ್ಫರಾಜ್ ಖಾನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಹೊರ ನಡೆದರು. ಜಡೇಜಾ 33 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ರೆ, ಪಾಟೀದಾರ್ ಹಾಗೂ ಸರ್ಫರಾಜ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ವೇಳೆ ಶುಭಮನ್‌ಗಿಲ್ ಜೊತೆಗೂಡಿದ ಧ್ರುವ್ ಜುರೆಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇದರಿಂದ ಗೆಲುವು ಭಾರತದತ್ತ ವಾಲಿತು.

ಅಂತಿಮವಾಗಿ ಶುಭಮನ್‌ ಗಿಲ್‌ 124 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳೊಂದಿಗೆ 52 ರನ್‌ ಗಳಿಸಿದ್ರೆ, ಧ್ರುವ್‌ ಜುರೆಲ್‌ 77 ಎಸೆತಗಳಲ್ಲಿ 39 ರನ್‌ ಗಳಿಸಿ ಅಜೇಯರಾಗುಳಿದರು.

ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 28 ರನ್​ಗಳ ಜಯ ಸಾಧಿಸಿತ್ತು. ಇನ್ನು 2ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 106 ರನ್​ಗಳ ಭರ್ಜರಿ ಜಯ ದಾಖಲಿಸಿತು. ಹಾಗೆಯೇ 3ನೇ ಟೆಸ್ಟ್ ಪಂದ್ಯದಲ್ಲಿ 434 ರನ್​ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಹೊಸ ಇತಿಹಾಸ ನಿರ್ಮಿಸಿತ್ತು. ಇದೀಗ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಹ್ಯಾಟ್ರಿಕ್ ಸೋಲುಣಿಸಿದೆ.

Shwetha M