ಸೀಟು ಹಂಚಿಕೆ ವಿಚಾರವಾಗಿ ಇಂಡಿಯಾ ಒಕ್ಕೂಟದಲ್ಲಿ ಮೂಡದ ಒಮ್ಮತ – ಕ್ಷೇತ್ರ ಬಿಟ್ಟುಕೊಡಲು ಒಪ್ಪದ ವಿಪಕ್ಷಗಳು
2024ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನ ಸೋಲಿಸಲು ವಿಪಕ್ಷಗಳೆಲ್ಲಾ ಮಹಾಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಮೂರು ಸಭೆಗಳನ್ನ ನಡೆಸಿ ಹಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಮಾತುಕತೆಯೂ ನಡೆದಿದೆ. ಆದರೆ ಅದೇ ಸೀಟಿಗಾಗಿ ವಿಪಕ್ಷಗಳ ನಡುವೆ ವೈಮನಸ್ಸು ಮೂಡುತ್ತಿದೆ.
ಇದನ್ನೂ ಓದಿ : ಮೂರು ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಸಚಿವ ಕೆ.ಎನ್ ರಾಜಣ್ಣ ಒತ್ತಾಯ – ಕಾಂಗ್ರೆಸ್ ಪಾಳಯದಲ್ಲಿ ಸಂಚಲನ
ಸೀಟು ಹಂಚಿಕೆಯಲ್ಲಿ ನಿರ್ಧಾರ ಕೈಗೊಳ್ಳಲು ಇಂಡಿಯಾ ಮೈತ್ರಿಕೂಟದ ನಾಯಕರು ಹಲವು ಸಭೆಗಳನ್ನ ನಡೆಸಿದ್ದಾರೆ. ಜಾತಿಗಣತಿ ನಡೆಸುವ ಮೈತ್ರಿಕೂಟದ ನಿರ್ಧಾರವನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ ಅವರು ಸೀಟು ಹಂಚಿಕೆಗೆ ಅಂತಿಮಗೊಳಿಸಲು ಅಡ್ಡಗಾಲು ಹಾಕಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಕೇರಳ, ದಿಲ್ಲಿ, ಜಮ್ಮು-ಕಾಶ್ಮೀರ, ಪಂಜಾಬ್ನಲ್ಲಿ ಸೀಟು ಹಂಚಿಕೆ ಸಂಬಂಧ ಯಾವುದೇ ಒಮ್ಮತ ಮೂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಹಾಗೂ ಕಾಂಗ್ರೆಸ್, ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು, ದಿಲ್ಲಿ ಹಾಗೂ ಪಂಜಾಬ್ಗಳಲ್ಲಿ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ನಡುವೆ ಮೊದಲಿನಿಂದಲೂ ರಾಜಕೀಯ ಜಿದ್ದಾಜಿದ್ದಿ ಇದ್ದು, ಈಗ ಆ ಪಕ್ಷಗಳ ನಡುವೆಯೇ ಸೀಟು ಹೊಂದಾಣಿಕೆ ಹಗ್ಗಜಗ್ಗಾಟ ನಡೆಯುತ್ತಿದೆ.
ಟಿಎಂಸಿ, ಆಪ್, ನ್ಯಾಷನಲ್ ಕಾನ್ಫರೆನ್ಸ್-ಪಿಡಿಪಿಗಳು ಕಡಿಮೆ ಸ್ಥಾನದ ಆಫರ್ ನೀಡುತ್ತಿರುವುದು ಕಾಂಗ್ರೆಸ್ ಅನ್ನು ಕೆರಳಿಸಿದೆ ಎಂದು ಹೇಳಲಾಗುತ್ತಿದೆ. ಈ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಡೆ ಸ್ಥಾನ ಹಂಚಿಕೆ ಒಪ್ಪಂದ ಸೂತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಮೈತ್ರಿಕೂಟದ ನಾಯಕರಿಂದ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಮೈತ್ರಿಕೂಟದ ಸಂಚಾಲನ ಸಮಿತಿ ಸಭೆಯಲ್ಲಿ ಸ್ಥಾನ ಹಂಚಿಕೆ ಸಂಬಂಧ ಸುದೀರ್ಘ ಸಮಾಲೋಚನೆ ಬಳಿಕ ಕೊಟ್ಟು-ತೆಗೆದುಕೊಳ್ಳುವ ನಿರ್ಣಯದಂತೆ ಎಲ್ಲಾ ಪಕ್ಷಗಳಿಗೂ ನ್ಯಾಯ ಸಮ್ಮತ ಸೀಟು ಹಂಚಿಕೆಗೆ ನಿರ್ಧರಿಸಲಾಗಿದೆ. ಎಲ್ಲಾ ಮೈತ್ರಿ ಪಕ್ಷಗಳು ಬಿಜೆಪಿ ಅಥವಾ ಎನ್ಡಿಎ ಅಭ್ಯರ್ಥಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಒಂದು ಕ್ಷೇತ್ರ – ಒಂದು ಅಭ್ಯರ್ಥಿ ಸೂತ್ರದಂತೆ 543 ಕ್ಷೇತ್ರಗಳ ಪೈಕಿ 443 ಕ್ಷೇತ್ರಗಳಿಗೆ ಸಮಾನ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಿವೆ.
ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ದಿಲ್ಲಿ ಹಾಗೂ ಜಮ್ಮು ಮತ್ತು ಕಾಶ್ಮೀರದ 100 ಕ್ಷೇತ್ರಗಳಿಗೆ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ನಡುವೆ ಸ್ಥಾನ ಹಂಚಿಕೆಗೆ ಸಹಮತ ಮೂಡಿ ಬಂದಿಲ್ಲ. ಬಂಗಾಳದ 42, ಕೇರಳದ 20, ದಿಲ್ಲಿಯ 7, ಪಂಜಾಬ್ನ 13, ಜಮ್ಮು ಮತ್ತು ಕಾಶ್ಮೀರದ 6 ಕ್ಷೇತ್ರಗಳ ಸ್ಥಾನ ಹಂಚಿಕೆ ವಿಚಾರದಲ್ಲಿಇನ್ನೂ ಮಾತುಕತೆ ನಡೆಯುತ್ತಿದೆ.
ಪಂಜಾಬ್(13) ಹಾಗೂ ದಿಲ್ಲಿ(7)ಯ ಒಟ್ಟು 20 ಕ್ಷೇತ್ರಗಳ ಸ್ಥಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಸ್ಥಾನ ಹಂಚಿಕೆ ವಿಚಾರದಲ್ಲಿ ಚೌಕಾಸಿ ಮಾಡುತ್ತಿವೆ. ದಿಲ್ಲಿಯಲ್ಲಿ 2, ಪಂಜಾಬ್ನಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನ ಬಿಟ್ಟುಕೊಡಲು ಆಪ್ ನಿರ್ಧರಿಸಿದೆ. ಆಮ್ ಆದ್ಮಿ ಪಕ್ಷದ ಆಫರ್ ನಿರಾಕರಿಸಿರುವ ಕಾಂಗ್ರೆಸ್, ಸಮಾನ ಸ್ಥಾನ ಹಂಚಿಕೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.