ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾಕಪ್ 2025 ಟೂರ್ನಿ ಫಿಕ್ಸ್ – ಭಾರತ & ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಾ?

2025ರ ಏಷ್ಯಾಕಪ್ ಆಯೋಜನೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದ್ರಲ್ಲೂ ಭಾರತ ಟೂರ್ನಿಯನ್ನೇ ಬಹಿಷ್ಕಾರ ಮಾಡುತ್ತೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ವು. ಆದ್ರೀಗ ಪಂದ್ಯಾವಳಿ ಕುರಿತಂತೆ ದೊಡ್ಡ ಬೆಳವಣಿಗೆ ನಡೆದಿದೆ. ಏಷ್ಯಾಕಪ್ ಟೂರ್ನಿ ಆಯೋಜನೆ ಮಾಡೋದು ಫಿಕ್ಸ್ ಆಗಿದೆ.
ಇದನ್ನೂ ಓದಿ : ರಿಷಭ್ ಪಂತ್ ಕಾಲು ಬೆರಳಿನ ಮೂಳೆ ಮುರಿತ – ಟೀಮ್ ಇಂಡಿಯಾದಲ್ಲಿ ಹತ್ತೇ ಪ್ಲೇಯರ್ಸ್ ಆಡ್ಬೇಕಾ?
ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯಾಕಪ್ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ನಡೆಯಬೇಕಿತ್ತು. ಆದ್ರೆ ಬಾಂಗ್ಲಾ ಜೊತೆಗಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ ಸಭೆಗೆ ಹಾಜರಾಗಲು ನಿರಾಕರಿಸಿತ್ತು. ಆದರೆ ಕೊನೆಗೆ ಬಿಸಿಸಿಐ ಆನ್ಲೈನ್ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದು, ಏಷ್ಯಾಕಪ್ ಆಯೋಜನೆಯ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಪಂದ್ಯಾವಳಿಯನ್ನು ಆಯೋಜಿಸಲು ಒಮ್ಮತ ಮೂಡಿಬಂದಿದೆ ಎಂದು ಹೇಳಲಾಗುತ್ತಿದ್ದು, ಪಂದ್ಯಾವಳಿ ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 24 ರಂದು ನಡೆಯಲಿದೆ. 8 ತಂಡಗಳ ನಡುವೆ ನಡೆಯಲಿರೋ ಈ ಟೂರ್ನಿಯಲ್ಲಿ ಭಾರತ, ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪೂರ್ಣ ಸದಸ್ಯತ್ವ ರಾಷ್ಟಗಳಾಗಿದ್ದರೆ, ಎಸಿಸಿ ಪ್ರೀಮಿಯರ್ ಕಪ್ ವಿಜೇತ ತಂಡ ಹಾಂಗ್ ಕಾಂಗ್, ಓಮನ್ ಮತ್ತು ಯುಎಇ ಕೂಡ ಭಾಗವಹಿಸಲಿವೆ. ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸಲಾಗುವುದು. ಆದರೆ ಬಿಸಿಸಿಐ ಬಳಿ ಇದರ ಆತಿಥ್ಯದ ಹಕ್ಕು ಇರಲಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಏಷ್ಯಾಕಪ್ ಟೂರ್ನಿ ಬಗೆಗಿನ ಮತ್ತೊಂದು ಮಾಹಿತಿ ಅಂದ್ರೆ ಪಂದ್ಯಾವಳಿಯನ್ನ ಟಿ-20 ಅಥವಾ ಏಕದಿನ ಮಾದರಿಯಲ್ಲಿ ಆಡಿಸಬೇಕಾ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. 2026 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ನಡೆಸಲಾಗುವುದು. ಕಳೆದ ಬಾರಿ ಏಕದಿನ ವಿಶ್ವಕಪ್ ಇದ್ದಾಗ ಪಂದ್ಯಾವಳಿಯನ್ನು ಏಕದಿನ ಸ್ವರೂಪದಲ್ಲಿ ಆಯೋಜಿಸಲಾಗಿತ್ತು. ಹೈಬ್ರಿಡ್ ಮಾದರಿಯಡಿ ನಡೆದ ಈ ಟೂರ್ನಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಏಷ್ಯಾಕಪ್ನ ಕೊನೆಯ ಸೀಸನ್ 2023 ರಲ್ಲಿ ನಡೆದಿತ್ತು. ಇದರ ಫೈನಲ್ ಪಂದ್ಯ ಕೊಲಂಬೊದಲ್ಲಿ ನಡೆದಿತ್ತು.
ಇನ್ನು ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳು ನಡೆಯುತ್ತಾ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಅಲ್ಲಿನ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿತ್ತು. ಇದಾದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಇದು ಕ್ರಿಕೆಟ್ ಮೇಲೂ ಪ್ರಭಾವ ಬೀರಿತ್ತು. ಭಾರತ ಇನ್ಮುಂದೆ ಪಾಕ್ ವಿರುದ್ಧ ಏಷ್ಯಾಕಪ್ ಸಹ ಆಡಲ್ಲ ಎಂದು ವರದಿಗಳಾಗಿದ್ದವು. ಇತ್ತೀಚೆಗೆ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಪಂದ್ಯ ಆಡೋದನ್ನ ನಿರಾಕರಿಸಿತ್ತು. ಹೀಗಾಗಿ ಏಷ್ಯಾಕಪ್ ನಲ್ಲಿ ಪಂದ್ಯ ಆಡ್ತಾರಾ ಅನ್ನೋದೇ ಅನುಮಾನ ಇದೆ.

ನೋಡಿರಿ

