ಮಾಲ್ಡೀವ್ಸ್ ನಲ್ಲಿ ‘ಇಂಡಿಯಾ ಔಟ್’ ಅಭಿಯಾನ – ಭಾರತದ ನೆರವನ್ನೇ ಮರೆತರಾ ನೂತನ ಅಧ್ಯಕ್ಷ?
ಮಾಲ್ಡೀವ್ಸ್ ಒಂದು ಅತ್ಯದ್ಭುತ ತಾಣ. ದ್ವೀಪಗಳ ರಾಷ್ಟ್ರವಾಗಿರುವ ಮಾಲ್ಡೀವ್ಸ್ ಪ್ರವಾಸಿಗರ ಸ್ವರ್ಗ. ಭಾರತ ಸೇರಿದಂತೆ ವಿದೇಶಗಳಿಂದ ಲಕ್ಷಾಂತರ ಮಂದಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುತ್ತಾರೆ. ಆದ್ರೀಗ ಅದೇ ಮಾಲ್ಡೀವ್ಸ್‌ನಲ್ಲಿ ‘ಇಂಡಿಯಾ ಔಟ್’ ಎನ್ನುವ ಘೋಷಣೆಗಳು ಕೇಳುತ್ತಿವೆ. ಭಾರತೀಯ ಸೇನೆಯನ್ನ ವಾಪಸ್ ಕಳಿಸಬೇಕೆಂಬ ಕೂಗು ಹೆಚ್ಚುತ್ತಿದೆ. ಇಷ್ಟು ದಿನದ ಭಾರತದ ನೆರಳಿನಲ್ಲೇ ಬದುಕಿ ವಿಷ ಕಕ್ಕುತ್ತಿದ್ದಾರೆ.
ವಿಶ್ವದ ಸಣ್ಣ ದೇಶಗಳ ಪಟ್ಟಿಯಲ್ಲಿರೋ ಪುಟ್ಟ ರಾಷ್ಟ್ರ ಮಾಲ್ಡೀವ್ಸ್. ಹಿಂದೂ ಮಹಾಸಾಗರದ ಮುತ್ತು ಅಂತಾನೇ ಕರೆಸಿಕೊಳ್ಳೋ ಈ ದೇಶದ ವಿಸ್ತೀರ್ಣ ಕೂಡ 90 ಸಾವಿರ ಚದರ ಕಿಲೋಮೀಟರ್. ಹಾಗೇ ಜನಸಂಖ್ಯೆ ಬರೀ 5 ಲಕ್ಷದ 30 ಸಾವಿರ ಅಷ್ಟೇ. ನಮ್ಮ ಕರ್ನಾಟಕದ ಒಂದು ಜಿಲ್ಲೆಗೂ ಸಮನಲ್ಲದ ಈ ಪುಟ್ಟ ರಾಷ್ಟ್ರ ಇದೀಗ ಭಾರತದ ವಿರುದ್ಧವೇ ತಿರುಗಿ ಬಿದ್ದಿದೆ. ಮಾಲ್ಡೀವ್ಸ್ನಲ್ಲೀಗ ಭಾರತದ ವಿರುದ್ಧ ಫಲಕಗಳನ್ನ ಹಿಡಿದು ಇಂಡಿಯಾ ಔಟ್ ಎನ್ನುವ ಘೋಷಣೆಗಳನ್ನ ಕೂಗಲಾಗುತ್ತಿದೆ. ಇಷ್ಟು ದಿನ ಭಾರತದ ನೆರಳಲ್ಲೇ ಬದುಕಿದ ದ್ವೀಪರಾಷ್ಟ್ರದಲ್ಲಿ ಇಂಡಿಯಾ ಔಟ್ ಅನ್ನೋ ಕ್ಯಾಂಪೇನ್ ಶುರುವಾಗಿದೆ. ಇದಕ್ಕೆ ಕಾರಣ ಮಾಲ್ಡೀವ್ಸ್ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು. ಅಕ್ಟೋಬರ್ ತಿಂಗಳ ಮೊದಲ ವಾರವಷ್ಟೇ ಮಾಲ್ಡೀವ್ಸ್ ನೂತನ ಅಧ್ಯಕ್ಷರಾಗಿ ಮುಯಿಜ್ಜು ಆಯ್ಕೆಯಾಗಿದ್ದಾರೆ. ಚುನಾವಣೆಗೂ ಮುನ್ನವೇ ತಾವು ಗೆದ್ದು ಅಧಿಕಾರಕ್ಕೆ ಬಂದರೆ ಭಾರತದ ಸೇನೆಯನ್ನ ಮಾಲ್ಡಿವ್ಸ್ನಿಂದ ಹೊರ ಕಳಿಸೋದಾಗಿ ಘೋಷಣೆ ಮಾಡಿದ್ದರು. ಅದ್ರಂತೆಯೇ ಇದೀಗ ಮಾಲ್ಡೀವ್ಸ್‌ನಲ್ಲಿ ಇಂಡಿಯಾ ಔಟ್ ಎನ್ನುವ ಅಭಿಯಾನ ಶುರುವಾಗಿದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆ ಈಗ ಕ್ಯಾಂಪೇನ್ ಆಗಿ ಬದಲಾಗಿದೆ.
ಮಾಲ್ಡೀವ್ಸ್ ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊಹಮ್ಮದ್ ಮುಯಿಜ್ಜು ಶೇಕಡಾ 53 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಶೇಕಡಾ 46 ಮತಗಳೊಂದಿಗೆ ಸೋಲು ಕಂಡಿದ್ದಾರೆ. ಚುನಾವಣಾ ಪ್ರಚಾರ ವೇಳೆಯೇ ಮುಯಿಜ್ಜು ತಾವು ಅಧಿಕಾರಕ್ಕೆ ಬಂದರೆ ಮಾಲ್ಡೀವ್ಸ್ ನಲ್ಲಿ ಬೀಡುಬಿಟ್ಟಿರುವ ಭಾರತೀಯ ಸೇನೆಯನ್ನ ವಾಪಸ್ ಕಳಿಸೋದಾಗಿ ಭರವಸೆ ನೀಡಿದ್ದರು. ಮಾಲ್ಡೀವಿಯನ್ ನೆಲದಲ್ಲಿ ನಮಗೆ ಯಾವುದೇ ವಿದೇಶಿ ಸೈನಿಕರು ಬೇಡ ಎಂದು ಘೋಷಣೆ ಮಾಡಿದ್ದರು.
ಅಷ್ಟಕ್ಕೂ ಇಲ್ಲಿ ಭಾರತದ ಸೇನೆ ಮಾಲ್ಡೀವ್ಸ್‌ನಲ್ಲಿ ನಿಯೋಜನೆಗೊಂಡಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಮಾಲ್ಡೀವ್ಸ್ ದಂಗೆ. ದಶಕಗಳ ಹಿಂದೆ ನಡೆದಿದ್ದ ಈ ದಂಗೆಯನ್ನ ಹತ್ತಿಕ್ಕಿದ್ದೇ ಭಾರತ. ಅಂದಿನಿಂದ ಇಂದಿನವರೆಗೂ ಸ್ನೇಹ ಸಂಬಂಧ ಗಟ್ಟಿಯಾಗಿ ಮುಂದುವರಿದಿತ್ತು. ಅಲ್ಲದೆ ಮಾಲ್ಡೀವ್ಸ್‌ಗೆ ಭಾರತ ಸಾಕಷ್ಟು ವಸ್ತುಗಳನ್ನ ಸರಬರಾಜು ಮಾಡುತ್ತದೆ. ಈ ಪೈಕಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನೂ ರಫ್ತು ಮಾಡುತ್ತದೆ. ಕಳೆದ ಸಾಲಿನಲ್ಲಿ ಎರಡೂ ದೇಶದ ನಡುವೆ 498 ಮಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ನಡೆದಿದ್ದು, ಈ ಪೈಕಿ ಬಹುತೇಕ ಮೊತ್ತವು ಶಸ್ತ್ರಾಸ್ತ್ರ ಖರೀದಿಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಒಡನಾಟ ಇದ್ದರೂ ಇದೀಗ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಭಾರತದ ಮಾಡಿದ ಉಪಕಾರವನ್ನೇ ಮರೆತಿದ್ದಾರೆ. ಮಾಲ್ಡೀವ್ಸ್‌ಗೆ ಭಾರತ ಮಾಡಿದ ಸಹಾಯ ಎಂಥಾದ್ದು ಅನ್ನೋದನ್ನ ತಿಳಿಯಲೇಬೇಕು.
1988ರ ನವೆಂಬರ್ 3 ರಂದು ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಬೃಹತ್ ದಂಗೆ ಎದ್ದಿತ್ತು. ಅದೇ ದಿನ ಭಾರತಕ್ಕೆ ಆಗಮಿಸಬೇಕಾಗಿದ್ದ ಮಾಲ್ಡೀವ್ಸ್ ನ ಆಗಿನ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ರ ಪ್ರವಾಸವನ್ನ ಅನಿವಾರ್ಯವಾಗಿ ರದ್ದು ಮಾಡಲಾಗಿತ್ತು. ಅಸಲಿಗೆ ಗಯೂಮ್‌ರನ್ನು ಅಧ್ಯಕ್ಷ ಪಟ್ಟದಿಂದ ಉರುಳಿಸಲೇಬೇಕೆಂದು ಶ್ರೀಲಂಕಾದಲ್ಲಿ ನೆಲೆಸಿದ್ದ ಮಾಲ್ಡೀವಿಯನ್ ಉದ್ಯಮಿ ಅಬ್ದುಲ್ಲಾಲತುಫಿ ಹಠ ತೊಟ್ಟಿದ್ದ. ಲಂಕೆಯ ಉಗ್ರಗಾಮಿಗಳನ್ನು ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ಕಳುಹಿಸಿ ದಾಂಧಲೆ ಎಬ್ಬಿಸಿದ್ದ. ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಬ್ದುಲ್ಲಾಲತುಫಿ ಅಣತಿಯ ಮೇರೆಗೆ ಮಾಲ್ಡೀವ್ಸ್‌ನಲ್ಲಿ ಸರ್ಕಾರಿ ಕಟ್ಟಡಗಳನ್ನ ವಶಕ್ಕೆ ಪಡೆಯಲಾರಂಭಿಸಿದ್ದರು. ಅಪಾರ ಪ್ರಮಾಣದಲ್ಲಿ ನಾಗರಿಕರ ಸಾವು-ನೋವುಗಳು ಉಂಟಾಗಿತ್ತು. ಅಂದಿನ ಅಧ್ಯಕ್ಷ ಗಯೂಮ್ ಮುಂದೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಈ ವೇಳೆ ಭಾರತೀಯ ಸೇನೆಯನ್ನು ತಕ್ಷಣ ಮಾಲ್ಡೀವ್ಸ್ ಗೆ ಕಳುಹಿಸಿಕೊಡುವಂತೆ ಭಾರತಕ್ಕೆ ಮನವಿ ಮಾಡಿದ್ದರು. ಮಾಲ್ಡೀವ್ಸ್ ಅಧ್ಯಕ್ಷರ ಕೋರಿಕೆಗೆ ಭಾರತದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಆಪರೇಷನ್ ಕ್ಯಾಕ್ಟಸ್ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿತ್ತು. ವಿಮಾನವನ್ನೇರಿ ಕೇವಲ ನಾಲ್ಕೇ ಗಂಟೆಗಳಲ್ಲಿ ಭಾರತೀಯ ಸೇನೆ ಆಗ್ರಾದಿಂದ ಮಾಲ್ಡೀವ್ಸ್ ತಲುಪಿತ್ತು. ದ್ವೀಪಗಳಲ್ಲಿ ಅಡಗಿ ಕುಳಿತಿದ್ದ ಅಷ್ಟೂ ಉಗ್ರರನ್ನೂ ಮಾಲೆಯಿಂದ ಹೊರ ದಬ್ಬುವಲ್ಲಿ ಭಾರತೀಯ ಸೇನೆ ಸಫಲವಾಗಿತ್ತು. ಈ ವೇಳೆ ಅದೇ ವೇಳೆ ಉಗ್ರರು ಮಾಲ್ಡೀವ್ಸ್ ಹಾದಿಯಲ್ಲಿದ್ದ ಹಡಗೊಂದನ್ನು ಅಪಹರಿಸಿದ್ದರು. ಆಗ ಅಮೆರಿಕದ ನೌಕಾಪಡೆ ಇದನ್ನು ತಡೆದು, ಭಾರತೀಯ ಸೇನೆಗೆ ಮಾಹಿತಿ ನೀಡಿತ್ತು. ಬಳಿಕ ಭಾರತೀಯ ನೌಕಾಪಡೆಯ ಮರೈನ್ ಕಮಾಂಡೋಗಳು ಕಾರ್ಯಾಚರಣೆ ನಡೆಸಿ ಹಡಗನ್ನ ವಶಕ್ಕೆ ಪಡೆದಿದ್ದರು. ಈ ವೇಳೆ 19 ಜನ ಸಾವನ್ನಪ್ಪಿದ್ದರು.
ದಶಕಗಳ ಹಿಂದೆ ಮಾಲ್ಡೀವ್ಸ್‌ಗೆ ತೆರಳಿದ್ದ ಸೇನೆ ಅಲ್ಲಿಯೇ ನೆಲೆ ನಿಂತಿದ್ದು, ಭಾರತೀಯ ತುಕಡಿಯೇ ರಕ್ಷಣಾ ಗೋಡೆಯಾಗಿದೆ. ಆದ್ರೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಷ್ಟ್ರಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಮೊಹಮ್ಮದ್ ಮುಯಿಝ್ಝು ಮಾತ್ರ ಭಾರತೀಯ ಸೇನೆಗೆ ಇಂಡಿಯಾ ಔಟ್ ಎನ್ನುತ್ತಿದ್ದಾರೆ. ಹಾಗಂತ ಭಾರತ ಮಾಲ್ಡೀವ್ಸ್ ಗೆ ಮಾಡಿರುವ ಉಪಕಾರ ಅಷ್ಟಿಷ್ಟಲ್ಲ. ಪುಟ್ಟ ರಾಷ್ಟ್ರದ ಬೆನ್ನಿಗೆ ನಿಂತಿದ್ದ ಭಾರತ ಹಲವು ರೀತಿಯ ನೆರವುಗಳನ್ನ ನೀಡಿದೆ. 1988ರಲ್ಲಿ ಅಂದಿನ ಮಾಲ್ಡೀವ್ಸ್ ಅಧ್ಯಕ್ಷರ ಕೋರಿಕೆ ಮೇರೆಗೆ ತೆರಳಿದ್ದ ಭಾರತದ ಸೇನಾ ತುಕಡಿ ಅಂದಿನಿಂದ ಇಂದಿನವರೆಗೂ ಅಲ್ಲಿಯೇ ಬೀಡು ಬಿಟ್ಟಿದೆ. ಇದಲ್ಲದೆ ಭಾರತ 2010 ಮತ್ತು 2013ರಲ್ಲಿ ಮಾಲ್ಡೀವ್ಸ್‌ಗೆ 2 ಹೆಲಿಕಾಪ್ಟರ್‌ಗಳನ್ನು ನೀಡಿದೆ. 2020ರಲ್ಲಿ ಚಿಕ್ಕ ವಿಮಾನ ಡಾರ್ನಿಯರ್ ಅನ್ನೂ ಉಡುಗೊರೆಯಾಗಿ ಕೊಟ್ಟಿದೆ. ಈ ಹೆಲಿಕಾಪ್ಟರ್ ಗಳು ಮತ್ತು ಚಿಕ್ಕ ವಿಮಾನಗಳಿಂದ ವೈದ್ಯಕೀಯ ಸ್ಥಳಾಂತರಕ್ಕೆ ಸಹಾಯವಾಗುತ್ತವೆ. ಸಣ್ಣ ದ್ವೀಪಗಳಿಂದ ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲು ಮಾಲ್ಡೀವ್ಸ್ ಜನ ಮೊರೆ ಹೋಗುವುದೇ ಈ ಡಾರ್ನಿಯರ್ ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ. ಭಾರತೀಯ ಸೇನೆಯ 75ಕ್ಕೂ ಹೆಚ್ಚು ಯೋಧರು ಪ್ರಸ್ತುತ ಮಾಲ್ಡೀವ್ಸ್ ನಲ್ಲಿ ನಿಯೋಜನೆಗೊಂಡಿದ್ದು ವಿಮಾನ, ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ತಂತ್ರಜ್ಞರು, ಪೈಲಟ್‌ಗಳೂ ಭಾರತದವರೇ ಆಗಿದ್ದಾರೆ. 2013ರಿಂದ ಲಾಮು ಮತ್ತು ಅಡ್ಡು ದ್ವೀಪಗಳಲ್ಲೂ ಭಾರತೀಯ ಸೇನೆ ನಿಯೋಜನೆ ಮಾಡಲಾಗಿದೆ. ಭಾರತೀಯ ನೌಕಾಪಡೆಯು ಮಾಲ್ಡೀವ್ಸ್‌ನಾದ್ಯಂತ 10 ಕರಾವಳಿ ಕಣ್ಗಾವಲು ರಾಡಾರ್ಗಳನ್ನ ಸ್ಥಾಪನೆ ಮಾಡಿದ್ದು ಇವುಗಳ ನಿರ್ವಹಣೆ ಕೂಡ ಭಾರತೀಯ ಯೋಧರಿಂದಲೇ ಆಗುತ್ತಿದೆ.
ಇಷ್ಟು ಮಾತ್ರವಲ್ಲದೆ ಸುನಾಮಿ ಅಪ್ಪಳಿಸಿದಾಗ, ಕೋವಿಡ್ ಬಂದಾಗ ಮಾಲ್ಡೀವ್ಸ್‌ಗೆ ನೆರವಾಗಿದ್ದೇ ನಮ್ಮ ಭಾರತ. 6.1 ಶತಕೋಟಿ ಡಾಲರ್ ಜಿಡಿಪಿ ಹೊಂದಿರುವ ಮಾಲ್ಡೀವ್ಸ್ ತನ್ನ ಜಿಡಿಪಿಗಿಂತ ಶೇ. 113ರಷ್ಟು ಸಾಲವನ್ನು ಹೊಂದಿದೆ. ಮಾಲ್ಡೀವ್ಸ್ ತನ್ನ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತದ ನೆರವನ್ನು ಮೊದಲಿನಿಂದಲೂ ಪಡೆದುಕೊಳ್ಳುತ್ತಿದೆ. ಸೋಲಿಹ್ ಸರ್ಕಾರ ಇರುವವರೆಗೂ ಭಾರತ, ಚೀನಾದೊಂದಿಗೆ ಮಧುರ ಬಾಂಧವ್ಯವನ್ನೇ ಹೊಂದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾಲ್ಡೀವ್ಸ್ ನಲ್ಲಿ ಚೀನಾ ವ್ಯಾಪಕ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹೀಗೆ ದಶಕಗಳ ಕಾಲ ಭಾರತದ ಸೇನೆಯ ಸಹಾಯ ಪಡೆದು ಭಾರತದ ಪರವೇ ಇದ್ದ ದ್ವೀಪರಾಷ್ಟ್ರದ ನಿಲುವು ಈಗ ದಿಢೀರ್ ಬದಲಾಗಿದ್ದೇಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ಕುತಂತ್ರಿ ಚೀನಾ ದೇಶ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ಡ್ರ್ಯಾಗನ್ ರಾಷ್ಟ್ರ ಭಾರತದ ಮೇಲೆ ಕ್ಯಾತೆ ತೆಗೆದುಕೊಂಡು ಬರೋದು ಹೊಸತೇನಲ್ಲ. ಇದೀಗ ಮಾಲ್ಡೀವ್ಸ್ ಬೆನ್ನಿಗೆ ನಿಂತು ಭಾರತದ ವಿರುದ್ಧ ಛೂ ಬಿಟ್ಟಿದೆ ಅಷ್ಟೇ
2013 ರಿಂದ 2018ರವರೆಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಯಮೀನ್ ಚೀನಾ ದೇಶಕ್ಕೆ ಹತ್ತಿರವಾಗಿದ್ದರು. ಯಮೀನ್ ಅಧ್ಯಕ್ಷರಾಗಿದ್ದಾಗ ಚೀನಾದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ ಪ್ರಾಜೆಕ್ಟ್ ಗೆ ಮಾಲ್ಡೀವ್ಸ್ ಸಹಿ ಹಾಕಿತ್ತು. ಮಾಲ್ಡೀವ್ಸ್‌ನಲ್ಲಿ ದ್ವೀಪ-ದ್ವೀಪಗಳನ್ನು ಸಂಪರ್ಕಿಸುವ ಸೇತುವೆ, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಚೀನಾ ದೇಶ ಮಾಲ್ಡೀವ್ಸ್ ಗೆ ಶತಕೋಟಿ ಡಾಲರ್ ಸಾಲ ನೀಡಿತ್ತು. ಆದ್ರೀಗ ಯಮೀನ್ ಅವ್ರು ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿ 11 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಯಮೀನ್ ಅವ್ರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿದ್ದ ಕಾರಣ ಯಮೀನ್ ಬದಲು ಅವರ ಬೆಂಬಲಿಗ ಮುಯಿಜ್ಜು ಚುನಾವಣೆಗೆ ಸ್ಪರ್ಧಿಸಿದ್ದರು. ಯಮೀನ್ ರ ಉತ್ತರಾಧಿಕಾರಿಯಾದ ಮೊಹಮ್ಮದ್ ಮುಯಿಜ್ಜು ಮಾಲ್ಡೀವ್ಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾದ ಉಪಕಾರವನ್ನು ತೀರಿಸಲು ಮುಯಿಜ್ಜು ಭಾರತದ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ತಾವು ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಜೈಲಿನಲ್ಲಿದ್ದ ತಮ್ಮ ಗುರು ಯಮೀನ್ ಅವರನ್ನ ರಿಲೀಸ್ ಮಾಡಿಸಿದ್ದಾರೆ. ಮಾಲೆಯಲ್ಲಿ ಗೃಹ ಬಂಧನದಲ್ಲಿ ಇರಿಸಿ ತಮ್ಮ ರಕ್ಷಣೆಗೆ ನಿಂತಿದ್ದಾರೆ. ಅಸಲಿಗೆ ಹಿಂದೂ ಮಹಾಸಾಗರದಲ್ಲಿರುವ ಮಾಲ್ಡೀವ್ಸ್ ದ್ವೀಪಗಳು ಭಾರತ ಹಾಗೂ ಚೀನಾಗಳ ಕಾರ್ಯತಂತ್ರಕ್ಕೆ ಬಹುಮುಖ್ಯ. ಇದೇ ಕಾರಣಕ್ಕಾಗಿಯೇ ಚೀನಾ, ಭಾರತದ ಮೇಲೆ ಕಣ್ಣಿಡಲು ಮಾಲ್ಡೀವ್ಸ್ ಮೇಲೆ ಹಿಡಿತ ಸಾಧಿಸುತ್ತಿದೆ. ಭಾರತದ ಲಕ್ಷದ್ವೀಪದಿಂದ ಮಾಲ್ಡೀವ್ಸ್ ಕೇವಲ 700 ಕಿಲೋ ಮೀಟರ್ ದೂರದಲ್ಲಿದೆ. ಬೀಜಿಂಗ್ ಅಲ್ಲಿ ಅಧಿಪತ್ಯ ಸಾಧಿಸಿದಷ್ಟೂ ಮಾಲ್ಡೀವ್ಸ್‌ನಿಂದ ಭಾರತದ ಮೇಲೆ ಕಣ್ಣಿಡಲು ಚೀನಾಕ್ಕೆ ಸುಲಭವಾಗುತ್ತದೆ. ಮಾಲ್ಡೀವ್ಸ್, ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಅಲ್ಲಿನ ವಾಣಿಜ್ಯ ಮಾರ್ಗದ ಮೇಲೂ ಹಿಡಿತ ಹೊಂದಿದಂತಾಗುತ್ತೆ. ಈ ಬೆಳವಣಿಗೆಯೇ ಮಾಲ್ಡೀವ್ಸ್, ಭಾರತದಿಂದ ಎಷ್ಟು ದೂರ ಸಾಗುತ್ತಿದೆ ಹಾಗೇ ಚೀನಾಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಭಾರತ ಜಾಗತಿಕವಾಗಿ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಹೊಸ ಮೈಲುಗಲ್ಲು ಸ್ಥಾಪಿಸುತ್ತಿದೆ. ಅಮೆರಿಕ ಹಾಗೂ ಯುರೋಪ್ ಭಾಗದ ಶ್ರೀಮಂತ ದೇಶಗಳೇ ಭಾರತದ ಸ್ನೇಹ ಬಯಸುತ್ತಿವೆ. ಆದರೆ ನಮ್ಮ ಜಿಲ್ಲೆಗಳಷ್ಟೂ ವಿಸ್ತೀರ್ಣ ಹೊಂದಿರದ ಮಾಲ್ಡೀವ್ಸ್ ಇಷ್ಟು ದಿನ ಭಾರತ ನೀಡಿದ ಸಹಾಯವನ್ನ ಮರೆತು ಚೀನಾ ಕಡೆ ನಿಂತಿದೆ. ಮಾಲ್ಡೀವ್ಸ್ ನ ಈ ನಡೆಯಿಂದ ಭಾರತಕ್ಕೇನು ನಷ್ಟವಾಗುವುದಿಲ್ಲ. ಯಾಕಂದ್ರೆ ಇಷ್ಟು ವರ್ಷ ಮಾಲ್ಡೀವ್ಸ್ನ ಅಸ್ತಿತ್ವ ಉಳಿದಿರುವುದೇ ಭಾರತದಿಂದ. ಯಾವುದೇ ರಾಷ್ಟ್ರಗಳು ಕಣ್ಣು ಹಾಕಿದ್ರೂ ರಕ್ಷಣೆ ಪಡೆಯಲು ಇದ್ದ ಏಕೈಕ ದಾರಿ ಅಂದ್ರೆ ಅದು ಭಾರತ ಮಾತ್ರ. ಆದ್ರೀಗ ಹೊಸ ಅಧ್ಯಕ್ಷರ ನಡೆಯಿಂದ ಇದ್ದೊಂದು ಭರವಸೆಯನ್ನೂ ಕಳೆದುಕೊಳ್ಳುವ ಸಾದ್ಯತೆ ಇದೆ. ಭಾರತ ಈಗ ಇದಕ್ಕೆ ಯಾವ ರೀತಿ ಪ್ರತಿತಂತ್ರ ರೂಪಿಸಲಿದೆ? ಚೀನಾ ಆಡುತ್ತಿರುವ ಆಟಕ್ಕೆ ಭಾರತದ ತಿರುಗೇಟು ಹೇಗಿರಲಿದೆ? ಅನ್ನೋದನ್ನ ಈಗ ಕಾದು ನೋಡಬೇಕಿದೆ.