ಹೊರಾಂಗಣ ಮಾಲಿನ್ಯದಲ್ಲಿ ಭಾರತ ನಂ.2 – ವಾಯು ಮಾಲಿನ್ಯದಿಂದ ಪ್ರತೀ ವರ್ಷ ಬರೋಬ್ಬರಿ 21 ಲಕ್ಷ ಜನ ಬಲಿ!

ಹೊರಾಂಗಣ ಮಾಲಿನ್ಯದಲ್ಲಿ ಭಾರತ ನಂ.2 – ವಾಯು ಮಾಲಿನ್ಯದಿಂದ ಪ್ರತೀ ವರ್ಷ ಬರೋಬ್ಬರಿ 21 ಲಕ್ಷ ಜನ ಬಲಿ!

ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಗುಣಮಟ್ಟ ತೀರಾ ಕಳಪೆಯಾಗುತ್ತಿದೆ. ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕವಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಕುಖ್ಯಾತಿಗೆ ರಾಷ್ಟ್ರರಾಜಧಾನಿ ದೆಹಲಿ ಪಾತ್ರವಾದ ಬೆನ್ನಲ್ಲೇ, ವಾಯುಮಾಲಿನ್ಯದಿಂದ ಹೆಚ್ಚು ಸಾವು ಸಂಭವಿಸುವ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಆಂಧ್ರದ 400 ಪೊಲೀಸರಿಂದ ತೆಲಂಗಾಣ ಡ್ಯಾಂಗೆ ಮುತ್ತಿಗೆ – 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ವಿಶ್ವದ ಪುರಾತನ ವೈದ್ಯ ಜರ್ನಲ್‌ಗಳಲ್ಲಿ ಒಂದಾಗಿರುವ ಬ್ರಿಟನ್‌ ಮೂಲದ ಬಿಎಂಜೆ ಅನೇಕ ರಾಷ್ಟ್ರಗಳಲ್ಲಿ ವಾಯುಗುಣಮಟ್ಟದ ಕುರಿತು ಅಧ್ಯಯನ ನಡೆಸಿದೆ. ಈ ಅಧ್ಯಯನ ವರದಿಯಲ್ಲಿ ಎಲ್ಲ ಬಗೆಯ ಹೊರಾಂಗಣ ವಾಯುಮಾಲಿನ್ಯವು ಭಾರತದಲ್ಲಿ ಪ್ರತಿವರ್ಷ 21.8 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಜೊತೆಗೆ ವಾಯುಮಾಲಿನ್ಯದಿಂದ ಹೆಚ್ಚು ಸಾವು ಸಂಭವಿಸುವ ರಾಷ್ಟ್ರಗಳ ಪೈಕಿ ಚೀನಾದ (24.4 ಲಕ್ಷ) ಬಳಿಕ ಭಾರತ 2ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಕೈಗಾರಿಕೆ, ವಿದ್ಯುತ್ ಉತ್ಪಾದನೆ ಮತ್ತು ಸಾರಿಗೆಯಲ್ಲಿ ಪಳೆಯುಳಿಕೆ (ಫಾಸಿಲ್‌) ಇಂಧನಗಳನ್ನು ಬಳಸುವುದರಿಂದ ಉಂಟಾಗುವ ವಾಯು ಮಾಲಿನ್ಯವು ವಿಶ್ವಾದ್ಯಂತ ವಾರ್ಷಿಕ 51 ಲಕ್ಷ ಹೆಚ್ಚುವರಿ ಸಾವುಗಳಿಗೆ ಕಾರಣವಾಗುತ್ತಿದೆ. ಇದು 2019ರಲ್ಲಿ ಪ್ರಪಂಚಾದ್ಯಂತ ಎಲ್ಲ ಮೂಲದ ಹೊರಾಂಗಣ ವಾಯುಮಾಲಿನ್ಯದಿಂದ ಸಂಭವಿಸಿದ 83 ಲಕ್ಷ ಸಾವುಗಳ ಪ್ರಮಾಣದ ಶೇ.61ರಷ್ಟಕ್ಕೆ ಸಮನಾಗಿದೆ. ಅಂದರೆ ಜಗತ್ತಿನಲ್ಲಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳ ಬಳಕೆಯಿಂದ ವಾಯುಮಾಲಿನ್ಯದ ಪ್ರಮಾಣದ ಹೆಚ್ಚಾಗುತ್ತಿದೆ ಹಾಗೂ ಇದು ದಿನೇ ದಿನೇ ಹೆಚ್ಚಿನ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ. ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನಕ್ಕೆ ಸಂಬಂಧಿಸಿದ ಸಾವು ಸಂಭವಿಸುತ್ತಿವೆ. ಹೀಗಾಗಿ, ಪಳೆಉಳಿಕೆ ಇಂಧನವನ್ನು ತೊಡೆದು ಹಾಕಬೇಕಾಗಿದೆ ಎಂಬ ವಿಚಾರ ಅಧ್ಯಯನ ವರದಿಯಿಂದ  ಬಹಿರಂಗವಾಗಿದೆ.

Shwetha M