ನ್ಯೂಜಿಲೆಂಡ್ಗೆ ಪ್ರಧಾನಿ ಮೋದಿ ಭೇಟಿ – ಉಭಯ ದೇಶಗಳ ನಡುವೆ 10 ಮಹತ್ವದ ಒಪ್ಪಂದ ,18 ನಿರ್ಧಾರ

ಭಾರತದ ಪ್ರಧಾನಿ ನರೇಂದ್ರ ಮೋದಿ ನ್ಯೂಜಿಲೆಂಡ್ನ ಆಕ್ಲೆಂಡ್ ಪ್ರವಾಸದಲ್ಲಿದ್ದಾರೆ. ಮೋದಿ ಆಗಮಿಸುತ್ತಿದ್ದಂತೆ ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ತಾವೇ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದು ಅತ್ಯಂತ ಆತ್ಮೀಯವಾಗಿ ಮೋದಿಯನ್ನು ಸ್ವಾಗತಿಸಿದ್ದಾರೆ. ಕಳೆದ 4 ದಶಕಗಳಲ್ಲೇ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್ಗೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಹೀಗಾಗಿ, ನರೇಂದ್ರ ಮೋದಿಯವರ ಈ ಐತಿಹಾಸಿಕ ಭೇಟಿ ಬಹಳ ಮಹತ್ವ ಪಡೆದಿದೆ.
ಇದನ್ನೂ ಓದಿ: ಆಸೀಸ್ನಲ್ಲಿ ನಡೆಯುತ್ತಾ IPL – ಮೋದಿ ಮಾಡಿಕೊಂಡ್ರಾ ಮಹತ್ವದ ಒಪ್ಪಂದ?
ಈ ಭೇಟಿಯ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಅವರ ನ್ಯೂಜಿಲೆಂಡ್ ಸಹವರ್ತಿ ಆರ್ಥಿಕತೆ, ವ್ಯಾಪಾರ, ವಾಣಿಜ್ಯ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸುವ ಕುರಿತು ವ್ಯಾಪಕ ಚರ್ಚೆ ನಡೆಸಲಿದ್ದಾರೆ. ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಪರಾಮರ್ಶಿಸಲಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ನಡುವೆ ನಡೆದ ಸುದೀರ್ಘ ಉನ್ನತ ಮಟ್ಟದ ಮಾತುಕತೆಯ ನಂತರ, ಮುಂದಿನ ಐದು ವರ್ಷಗಳಲ್ಲಿ ಅಂದರೆ 2030 ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ಸರಕು ಮತ್ತು ಸೇವಾ ವ್ಯಾಪಾರವನ್ನು ಬರೋಬ್ಬರಿ 35,000 ಕೋಟಿ ರೂಪಾಯಿಗಳಿಗೆ (7 ಬಿಲಿಯನ್ ನ್ಯೂಜಿಲೆಂಡ್ ಡಾಲರ್) ದ್ವಿಗುಣಗೊಳಿಸುವ ಐತಿಹಾಸಿಕ ಗುರಿಯನ್ನು ನಿಗದಿಪಡಿಸಲಾಗಿದೆ.
ಈ ಐತಿಹಾಸಿಕ ಸಭೆಯಲ್ಲಿ ಉಭಯ ದೇಶಗಳ ನಡುವೆ 10 ಮಹತ್ವದ ಒಪ್ಪಂದಗಳು ಸೇರಿದಂತೆ ಒಟ್ಟು 18 ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಇಂಡೋ-ಪೆಸಿಫಿಕ್ ಸಾಮರಸ್ಯ, ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದಗಳು ಇದರಲ್ಲಿ ಸೇರಿವೆ. ನಾವು ಪ್ರತಿಯೊಂದು ವಲಯದಲ್ಲೂ ಸ್ಪಷ್ಟ ಗುರಿ ಮತ್ತು ಫಲಿತಾಂಶಗಳೊಂದಿಗೆ ಮುನ್ನಡೆಯಲಿದ್ದೇವೆ ಎಂದು ಪ್ರಧಾನಿ ಮೋದಿ ಮಾತುಕತೆಯ ನಂತರ ತಿಳಿಸಿದ್ದಾರೆ.

ನೋಡಿರಿ

