ಭಾರತಕ್ಕೆ ಮುಳ್ಳಾದ ಭಾರತೀಯ ಮೂಲದ ಕ್ರಿಕೆಟಿಗ – ಫೈನಲ್‌ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ ಯುವಪಡೆ
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. ಇದೀಗ ಮತ್ತೊಮ್ಮೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ. ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತದ ಯುವ ಪಡೆ ಮಂಡಿಯೂರಿದೆ. ಭಾರತದ ವಿಶ್ವಕಪ್ ಆಸೆಗೆ ತಣ್ಣೀರೆರಚಿರುವುದು ಮತ್ತೊಬ್ಬ ಭಾರತೀಯ ಆಟಗಾರನೇ ಅನ್ನೋದು ಅರಗಿಸಿಕೊಳ್ಳಲಾಗದ ಸತ್ಯ.
ಇದನ್ನೂ ಓದಿ:ದೇಶಕ್ಕಿಂತಲೂ ಹೆಚ್ಚಾಯ್ತಾ ವೈಯಕ್ತಿಕ ವಿಚಾರ? – ವಿರಾಟ್ ಕೊಹ್ಲಿ ಬಗ್ಗೆ ಪರ ವಿರೋಧದ ಚರ್ಚೆ
ಇಡೀ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದ ಭಾರತ ತಂಡ ಫೈನಲ್‌ನಲ್ಲಿ ಮುಗ್ಗರಿಸಿರುವುದು ಅಭಿಮಾನಿಗಳ ಪಾಲಿಗೆ ನಿರಾಶೆ ತಂದಿದೆ. ಲೀಗ್‌ನ ಮೊದಲ ಪಂದ್ಯದಿಂದ ಹಿಡಿದು ಸೆಮಿಫೈನಲ್ ಪಂದ್ಯದವರೆಗೂ ಬಲಿಷ್ಠ ತಂಡಗಳನ್ನು ಟೀಂ ಇಂಡಿಯಾ ಭಾರೀ ಅಂತರದಿಂದ ಮಣಿಸಿತ್ತು. ಆದರೆ ಫೈನಲ್ನಲ್ಲಿ ಮಾತ್ರ ಹಿರಿಯರ ತಂಡದಂತೆ ಕಿರಿಯರ ತಂಡವೂ ಮುಗ್ಗರಿಸಿತು. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಬೇಸರಗೊಳ್ಳುವಂತೆ ಮಾಡಿದೆ. ಈ ಎಲ್ಲದರ ನಡುವೆ ಭಾರತ ವಿಶ್ವಕಪ್ ಗೆಲ್ಲುವ ಹಾದಿಗೆ ಮುಳ್ಳಾಗಿದ್ದು, ಮಾತ್ರ ಭಾರತೀಯ ಮೂಲದ ಒಬ್ಬ ಆಟಗಾರ. ಭಾರತ ಮೂಲದ ಆಸ್ಟ್ರೇಲಿಯಾ ಕ್ರಿಕೆಟರ್ ಹರ್ಜಾಸ್ ಸಿಂಗ್.
ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಂತಹ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಕಲೆಹಾಕುವ ಮೂಲಕ ಅರ್ಧಶತಕದ ಜೊತೆಯಾಟವನ್ನು ನೀಡಿದ ಬೆನ್ನಲ್ಲೇ ಔಟಾದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಹರ್ಜಾಸ್ ಸಿಂಗ್, ಟೀಂ ಇಂಡಿಯಾದ ಯೋಜನೆಯನ್ನೇ ಬುಡಮೇಲು ಮಾಡಿದರು. ಇಡೀ ಟೂರ್ನಿಯಲ್ಲಿ ಸೈಲೆಂಟಾಗಿದ್ದ ಹರ್ಜಾಸ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿದರು. ಈ ವಿಶ್ವಕಪ್‌ನಲ್ಲಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 49 ರನ್ ಸಿಡಿಸಿದ್ದ ಹರ್ಜಾಸ್, ಭಾರತದ ವಿರುದ್ಧ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 55 ರನ್‌ಗಳ ಮ್ಯಾಚ್ ಟರ್ನಿಂಗ್ ಇನ್ನಿಂಗ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಹರ್ಜಾಸ್ ಬ್ಯಾಟಿಂಗ್ ಮತ್ತೆ ಬೂಸ್ಟ್ ನೀಡಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಲ್ಲದೆ ಹರ್ಜಾಸ್ ತಂಡದ ಇನ್ನಿಂಗ್ಸ್‌ಗೂ ವೇಗ ನೀಡಿದರು. 65 ಎಸೆತಗಳನ್ನು ಎದುರಿಸಿದ ಹರ್ಜಾಸ್, 3 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 55 ರನ್‌ಗಳ ಮ್ಯಾಚ್ ಟರ್ನಿಂಗ್ ಇನ್ನಿಂಗ್ಸ್ ಆಡಿದರು. ಹರ್ಜಾಸ್ ಆಡಿದ ಈ ಇನ್ನಿಂಗ್ಸ್ ಭಾರತಕ್ಕೆ ಬಲು ಭಾರವಾಯಿತು.
ಭಾರತಕ್ಕೆ ಮುಳ್ಳಾದ ಈ ಹರ್ಜಾಸ್ ಸಿಂಗ್ ಯಾರು?
ಹರ್ಜಾಸ್ ಸಿಂಗ್ ಭಾರತ ಮೂಲದವರು. ಹರ್ಜಾಸ್ 2005 ರಲ್ಲಿ ಸಿಡ್ನಿಯಲ್ಲಿ ಜನಿಸಿದರು. ಇವರ ತಂದೆ ಭಾರತದ ಚಂಡೀಗಢದವರು. ಹರ್ಜಾಸ್ ಅವರ ತಂದೆ ಇಂದರ್ಜಿತ್ ಸಿಂಗ್, ಪಂಜಾಬ್‌ನ ಚಂಡೀಗಢದಲ್ಲಿ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ. ತಾಯಿ ಅವಿಂದರ್ ಕೌರ್ ರಾಜ್ಯ ಮಟ್ಟದ ಲಾಂಗ್ ಜಂಪ್ ಆಟಗಾರ್ತಿಯಾಗಿದ್ದರು. ತಮ್ಮ ಎಂಟನೇ ವಯಸ್ಸಿನಲ್ಲಿ ರೆವೆಸ್ಬಿ ವರ್ಕರ್ಸ್ ಕ್ರಿಕೆಟ್ ಕ್ಲಬ್ನೊಂದಿಗೆ ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದ ಹರ್ಜಾಸ್, ಭಾರತದ ವಿಶ್ವಕಪ್ ಕನಸಿಗೆ ಬೇಲಿಯಾದರು. ಈಗಲೂ ಚಂಡೀಗಢದಲ್ಲಿ ಇವರ ಮನೆ ಇದೆ. ವಿಶ್ವಕಪ್ ಆರಂಭದಲ್ಲಿ ತಾನು ಭಾರತದ ಮೂಲದವನು ಎಂಬುದನ್ನು ಬಹಿರಂಗಪಡಿಸಿದ್ದ ಹರ್ಜಾಸ್, ತನ್ನ ಕುಟುಂಬ ಇನ್ನೂ ಭಾರತದಲ್ಲಿದೆ. ನಾನು ಕೊನೆಯದಾಗಿ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ನನ್ನ ಕುಟುಂಬ ಇನ್ನೂ ಚಂಡೀಗಢ ಮತ್ತು ಅಮೃತಸರದಲ್ಲಿದೆ. ಕ್ರಿಕೆಟ್ ಅಭ್ಯಾಸಕ್ಕಿಳಿದ ಬಳಿಕ ನಾನು ಮತ್ತೆ ಭಾರತಕ್ಕೆ ಹೋಗಿಲ್ಲ. ಆದರೆ ನನ್ನ ಚಿಕ್ಕಪ್ಪ ಇನ್ನೂ ಅಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದರು.