ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದ ಕ್ರಿಕೆಟ್ ಶಿಶುಗಳು – ಭಾರತದ ಸೊಕ್ಕು ಮುರಿದ ಐರ್ಲೆಂಡ್

ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದ ಕ್ರಿಕೆಟ್ ಶಿಶುಗಳು – ಭಾರತದ ಸೊಕ್ಕು ಮುರಿದ ಐರ್ಲೆಂಡ್

ಐರ್ಲೆಂಡ್ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾ 2-0 ಅಂತರದಿಂದ ಸರಣಿ ಸೋತು ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮೊದಲ ಹಾಗೂ ಎರಡನೇ ಪಂದ್ಯ ಗೆದ್ದಿರುವ ಐರ್ಲೆಂಡ್, ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:12ಕ್ಕೆ ರಣಜಿ.. 14ಕ್ಕೆ IPL.. 15ಕ್ಕೆ ಭಾರತ – 3 ವರ್ಷದಲ್ಲೇ WONDER ಆದ ವೈಭವ್  

ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಎರಡು ಪಂದ್ಯಗಳಲ್ಲೂ ಸೋತು ಭಾರೀ ಮುಖಭಂಗ ಎದುರಿಸಿದೆ. ಮೊದಲ ಟಿ20 ಪಂದ್ಯವನ್ನು 34 ರನ್​ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ಎರಡನೇ ಪಂದ್ಯವನ್ನು ಕೇವಲ 1 ರನ್ನಿಂದ ಗೆದ್ದುಕೊಳ್ಳುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿದೆ. ಎರಡು ಬಾರಿಯ ಹಾಲಿ ಟಿ20 ವಿಶ್ವ ಚಾಂಪಿಯನ್‌ಗಳನ್ನು ಸತತ ಪಂದ್ಯಗಳಲ್ಲಿ ಸೋಲಿಸಿ, 2-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಐರ್ಲೆಂಡ್ ತಂಡದ ಸಾಧನೆ ನಿಜಕ್ಕೂ ಬೆರಗಾಗಿಸಿದೆ.

ಈ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಎಂಟನೇ ಓವರ್ ವೇಳೆಗೆ ಕೇವಲ 48 ರನ್‌ ಕಲೆಹಾಕಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಹ್ಯಾರಿ ಟೆಕ್ಟರ್ ಮತ್ತು ಬೆನ್ ಕ್ಯಾಲಿಟ್ಜ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಟೆಕ್ಟರ್ ಎಂಟು ಇನ್ನಿಂಗ್ಸ್‌ಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದರೆ ಜಾರ್ಜ್ ಡಾಕ್ರೆಲ್ ಕೂಡ ಅಲ್ಪ ಕಾಣಿಕೆ ನೀಡುವ ಮೂಲಕ ತಂಡವನ್ನು 154 ರನ್‌ಗಳಿಗೆ ಕೊಂಡೊಯ್ದರು. ಟೀಂ ಇಂಡಿಯಾ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಬೌಲರ್ ಪ್ರಿನ್ಸ್ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರು.

156 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭದಲ್ಲೇ ಆಘಾತ ಎದುರಿಸಿತು.ಐರ್ಲೆಂಡ್  ವೇಗಿ ಜೇ ಮುಂಧ್ರಾ, ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಮತ್ತು ಅದೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಈ ಇಬ್ಬರೂ ಶ್ರೇಷ್ಠ ಬ್ಯಾಟ್ಸಮನ್‌ಗಳು ಸೊನ್ನೆಗೆ ವಿಕೆಟ್ ಒಪ್ಪಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ, ಮುಂಧ್ರಾ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಐದನೇ ಓವರ್‌ನಲ್ಲಿ ಇಶಾನ್ ಕಿಶನ್ ಕೂಡ ರನೌಟ್ ಆದರು. ಈ ಹೊತ್ತಿಗೆ, ಸ್ಕೋರ್ ಕೇವಲ 35 ರನ್‌ಗಳಾಗಿತ್ತು. ಹೀಗಾಗಿ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಸೋಲು ಖಚಿತ ಎಂಬುದು ಆರಂಭದಲ್ಲೇ ಕಾಡಲಾರಂಭಿಸಿತು. ಆದರೆ ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಉತ್ತಮ ಜೊತೆಯಾಟ ನಿರ್ಮಿಸುತ್ತಿದ್ದಂತೆ ಗೆಲುವಿನ ಭರವಸೆ ಮೂಡಿತು. ಆದರೆ, ಇಬ್ಬರೂ ರನ್ ಗಳಿಸಲು ಕಷ್ಟಪಡುತ್ತಿರುವುದು ಕಂಡುಬಂತು. ನಂತರ ಬಂದ ಶಿವಂ ದುಬೆ ಬಂದು ಸ್ವಲ್ಪ ಆಕ್ರಮಣಕಾರಿಯಾಗಿ ಆಡಿದರಾದರೂ ನಿರ್ಣಾಯಕ ಹಂತದಲ್ಲಿ ಅಂದರೆ 17 ನೇ ಓವರ್‌ನಲ್ಲಿ ಔಟಾದರು. ತಿಲಕ್‌ವರ್ಮಾ 55 ರನ್‌ಗಳಿಸಿ ಔಟಾದರು. ಕೊನೆಯ ಓವರ್‌ನಲ್ಲಿ ಗೆಲುವಿಗೆ 20 ರನ್‌ಗಳು ಬೇಕಾಗಿದ್ದವು. ಯುವ ಆಲ್​ರೌಂಡರ್ ಹರ್ಷಿತ್ ರಾಣಾ ತಂಡದ ಗೆಲುವಿಗೆ ಪ್ರಯತ್ನ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಕೊನೆಯ ಎಸೆತದಲ್ಲಿ ಪ್ರಿನ್ಸ್ ಯಾದವ್ ಸಿಕ್ಸ್ ಬಾರಿಸಿದರೂ, ತಂಡವು ಒಂದು ರನ್‌ನಿಂದ ಸೋತಿತು.

Sulekha

Leave a Reply

Your email address will not be published. Required fields are marked *