ಭಾರತ ಅಭಿವೃದ್ಧಿ ಪ್ರಧಾನ ದೇಶ.. ನಾವು ಪ್ರಚೋದಿಸುವ ಕೆಲಸ ಮಾಡಲ್ಲ – ಕೊನೆಗೂ ಸೈಲೆಂಟಾದ ಕೆನಡಾ ಪ್ರಧಾನಿ

ಭಾರತ ಅಭಿವೃದ್ಧಿ ಪ್ರಧಾನ ದೇಶ.. ನಾವು ಪ್ರಚೋದಿಸುವ ಕೆಲಸ ಮಾಡಲ್ಲ – ಕೊನೆಗೂ ಸೈಲೆಂಟಾದ ಕೆನಡಾ ಪ್ರಧಾನಿ

ಖಲಿಸ್ತಾನಿ ಉಗ್ರರ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಕೆನಡಾದಲ್ಲಿ ವಾಸವಿರುವ ಭಾರತ ಮೂಲದ ಹಿಂದೂಗಳಿಗೂ ಆತಂಕ ಶುರುವಾಗಿದೆ. ಈ ನಡುವೆ ಖಲಿಸ್ತಾನಿ ಉಗ್ರನ ಹತ್ಯೆ ಸಂಬಂಧ ಭಾರತದ ಮೇಲೆ ಗಂಭೀರ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಈಗ ಭಾರತದ ಪರ ಮಾತನಾಡಿದ್ದಾರೆ.

ಭಾರತ ಹಾಗೂ ಕೆನಡಾ (India And Canada) ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ  ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಈಗ ಭಾರತದ ಪರ ಮೃದುವಾಗಿ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಭಾರತವು ಅಭಿವೃದ್ಧಿ ಪ್ರಧಾನ ದೇಶವಾಗಿದೆ, ನಾವು ಯಾವುದೇ ಕಾರಣಕ್ಕೂ ಭಾರತವನ್ನು ಪ್ರಚೋದಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಜಸ್ಟಿನ್‌ ಟ್ರುಡೋ ತಿಳಿಸಿದ್ದಾರೆ. ಅಲ್ಲದೆ ಭಾರತ ಅಭಿವೃದ್ಧಿ ಪ್ರಧಾನ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ದೇಶದೊಂದಿಗೆ ನಾವು ಜೊತೆಗೂಡಿ ಪ್ರಾದೇಶಿಕ ಹಾಗೂ ಜಾಗತಿಕ ಏಳಿಗೆ ದಿಸೆಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಹಾಗಾಗಿ, ನಾವು ಪ್ರಚೋದನೆ ನೀಡುವ ಹಾಗೂ ಯಾವುದೇ ಸಮಸ್ಯೆ ಸೃಷ್ಟಿಸುವ ಪ್ರಯತ್ನ ಮಾಡುವುದಿಲ್ಲ. ಕೆನಡಿಯನ್ನರು (Canadians) ಮತ್ತು ನಮ್ಮ ಮೌಲ್ಯಗಳನ್ನು ರಕ್ಷಿಸುವುದಕ್ಕೆ ನಾವು ಪ್ರಾಮುಖ್ಯತೆ ನೀಡುತ್ತೇವೆ ಎಂದು ಮೃದುವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ : ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌, ಬುರ್ಖಾ ನಿಷೇಧ! – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ!

ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಯಾವುದೇ ಕಾರಣಕ್ಕೆ ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ನಯವಾಗಿ ಹೇಳುತ್ತಲೇ ಈ ಆರೋಪ ಮಾಡಿದ್ದಾರೆ. ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನ ಉಚ್ಚಾಟನೆಗೊಳಿಸಿದ ಬಳಿಕ ಭಾರತವೂ ಹಲವು ಕ್ರಮಗಳ ಮೂಲಕ ತಿರುಗೇಟು ನೀಡಿದೆ. ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನ ಉಚ್ಚಾಟನೆ ಮಾಡುವ ಜೊತೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೂ ಸ್ಥಗಿತಗೊಳಿಸಿದೆ. ಇನ್ನು ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದಿದೆ. ಮತ್ತೊಂದೆಡೆ, ಕೆನಡಾ ಆರೋಪ ಮಾಡುವ ಬದಲು ಸಾಕ್ಷ್ಯ ಒದಗಿಸಲಿ ಎಂದು ಭಾರತ ಪ್ರತ್ಯುತ್ತರ ಕೊಟ್ಟಿದೆ.

 

Shantha Kumari