IND & NZನಲ್ಲಿ ಸ್ಪಿನ್ನರ್ಸ್ ಅಸ್ತ್ರ – ದುಬೈ ಪಿಚ್ ನಲ್ಲಿ ಯಾರ ಕೈ ಮೇಲು?  

IND & NZನಲ್ಲಿ ಸ್ಪಿನ್ನರ್ಸ್ ಅಸ್ತ್ರ – ದುಬೈ ಪಿಚ್ ನಲ್ಲಿ ಯಾರ ಕೈ ಮೇಲು?  

ಆಸ್ಟ್ರೇಲಿಯಾವನ್ನ ಸೋಲಿಸಿ ಭಾರತ ಫಿನಾಲೆಗೆ ಲಗ್ಗೆ ಇಟ್ಟಿದ್ರೆ ಸೌತ್ ಆಫ್ರಿಕಾವನ್ನ ಮಣಿಸಿ ನ್ಯೂಜಿಲೆಂಡ್ ಫೈನಲ್ ಪ್ರವೇಶ ಪಡೆದಿದೆ. ಮಾರ್ಚ್ 9 ರಂದು ನಡೆಯಲಿರುವ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 25 ವರ್ಷಗಳ ಸೇಡು ತೀರಿಸಿಕೊಳ್ಳೋ ಸುವರ್ಣಾವಕಾಶ ಸಿಕ್ಕಿದೆ. ಹಾಗೇ ಮತ್ತೊಂದೆಡೆ 2015 ಮತ್ತು 2019 ಏಕದಿನ ವಿಶ್ವಕಪ್‌ ಮತ್ತು 2021ರ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ರನ್ನರ್ಸ್‌ ಅಪ್‌ ಆಗಿರುವ ನ್ಯೂಜಿಲೆಂಡ್‌ ಈ ಬಾರಿ ಪ್ರಶಸ್ತಿಯನ್ನ ಗೆದ್ದೇ ತೀರುವ ಹಠದಲ್ಲಿದೆ. ಅದಕ್ಕೆ ತಕ್ಕಂತೆ ಸೌತ್ ಆಫ್ರಿಕಾವನ್ನ ದಾಖಲೆಯ ರನ್​ಗಳಿಂದ ಸೋಲಿಸಿರೋದ್ರಿಂದ ಫೈನಲ್ ಪಂದ್ಯಕ್ಕೂ ಮುನ್ನ ಕಿವೀಸ್ ಪಡೆಗೆ ಜೋಶ್ ಸಿಕ್ಕಂತಾಗಿದೆ. ಅಲ್ದೇ ಒಂದೇ ಪಂದ್ಯದಲ್ಲಿ ಕಿವೀಸ್​ ತಂಡದ ಇಬ್ಬರು ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಕೂಡ ಫೈನಲ್ ಮ್ಯಾಚ್​ಗೆ ಮತ್ತಷ್ಟು ಕಾನ್ಫಿಡೆನ್ಸ್ ತಂದು ಕೊಟ್ಟಿದೆ.

ಇದನ್ನೂ ಓದಿ : ಸೋತು ಗೆದ್ದ ಸ್ಟೀವ್ ಸ್ಮಿತ್! 1 ವರ್ಷ ಬ್ಯಾನ್, ಹೈಸ್ಕೂಲ್ ಫೇಲ್

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿಯ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಒಂದೇ ಗುಂಪಿನಲ್ಲಿದ್ದವು. ಎರಡೂ ತಂಡಗಳ ನಡುವಿನ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿತ್ತು. ದುಬೈನಲ್ಲಿ ನಡೆದ ಗುಂಪು ಹಂತದ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಭಾರತ 44 ರನ್‌ಗಳಿಂದ ಗೆದ್ದುಕೊಂಡಿತು. ಈಗ ಫೈನಲ್‌ನಲ್ಲೂ ನ್ಯೂಜಿಲೆಂಡ್‌ ಮಣಿಸಿ ಚಾಂಪಿಯನ್ ಪಟ್ಟಕ್ಕೇರೋ ನಿರೀಕ್ಷೆಯಲ್ಲಿದೆ. ಇದ್ರ ಜೊತೆಗೆ 25 ವರ್ಷಗಳ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳೋ ಅವಕಾಶ ಸಿಕ್ಕಿದೆ.  2000ನೇ ಇಸವಿಯಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಅಂದ್ರೆ ಆಗ ಇದನ್ನ ಐಸಿಸಿ ನಾಕೌಟ್ ಟೂರ್ನಿ ಅಂತಾ ಕರೆಯಲಾಗ್ತಿತ್ತು. ಈ ಟೂರ್ನಿಯಲ್ಲಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಆದ್ರೆ ಆ ಪಂದ್ಯದಲ್ಲಿ ಕಿವೀಸ್ ಪಡೆಯೇ ಗೆದ್ದು ಬೀಗಿತ್ತು.

2000ನೇ ಇಸವಿಯಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೌರವ್ ಗಂಗೂಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ರು. ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಈ ಪಂದ್ಯದಲ್ಲಿ ಸೋಲು ಕಂಡಿತ್ತು. ಇದ್ರಿಂದಾಗಿ  ಮೊದಲ ಪ್ರಶಸ್ತಿಯನ್ನು ಗೆಲ್ಲುವ ಕನಸು ಭಗ್ನವಾಗಿತ್ತು. ಈ ಪಂದ್ಯದಲ್ಲಿ ಗಂಗೂಲಿ 117 ರನ್ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ 69 ರನ್ ಗಳಿಸಿದರು. ಆದರೆ ನ್ಯೂಜಿಲೆಂಡ್​ ಆಟಗಾರ ಕ್ರಿಸ್ ಕೈರ್ನ್ಸ್ ಅವರ ಅಜೇಯ 102 ರನ್​ಗಳ ಶತಕದಿಂದ ನ್ಯೂಜಿಲೆಂಡ್ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಸೋಲಿನ ಸೇಡನ್ನೂ ತೀರಿಸಿಕೊಳ್ಳೋ ಅವಕಾಶ ಸಿಕ್ಕಿದೆ. ಹಾಗೇ ಭಾರತ ತಂಡ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ತಲುಪಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು, ನ್ಯೂಜಿಲೆಂಡ್ ವಿರುದ್ಧ ಸೋಲೋ ಮೂಲಕ ಪ್ರಶಸ್ತಿ ಕೈ ಜಾರಿತ್ತು. ಹೀಗೆ ಇದೊಂದು ಮ್ಯಾಚ್ ಮೂಲಕ ಈ ಎಲ್ಲಾ ಸೋಲುಗಳಿಗೆ ತಿರುಗೇಟು ಕೊಡೋ ಟೈಂ ಬಂದಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 119 ಬಾರಿ ಮುಖಾಮುಖಿಯಾಗಿವೆ. ಇದ್ರಲ್ಲಿ ಭಾರತ 61 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತು ಮತ್ತು ಏಳು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಅದನ್ನ ಬಿಟ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು 2 ಸಲ ಮಾತ್ರವೇ ಈವರೆಗೂ ಮುಖಾಮುಖಿಯಾಗಿವೆ. 2000ನೇ ಇಸವಿಯ ಫೈನಲ್​ನಲ್ಲಿ ನ್ಯೂಜಿಲೆಂಡ್ ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಜಯಗಳಿಸಿತು. ಇದೀಗ ಮತ್ತೊಮ್ಮೆ ಈ ಬಾರಿಯ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳಲ್ಲಿ ಎದುರು ಬದುರಾಗಿದ್ವು. ಈ ಪಂದ್ಯದಲ್ಲಿ ಭಾರತವೇ ಗೆದ್ದು ಬೀಗಿತ್ತು. ಇದೀಗ ಮೂರನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗೋಕೆ ರೆಡಿಯಾಗಿವೆ.

ಈ ಟೂರ್ನಿಯಲ್ಲಿ ಭಾರತ ಒಂದೂ ಪಂದ್ಯವನ್ನ ಸೋಲದೆ ಅಜೇಯವಾಗಿ ಫೈನಲ್ ಗೆ ಕಾಲಿಟ್ಟಿದೆ. ಹಾಗೇ ಲೀಗ್ ಹಂತದ ಪಂದ್ಯದಲ್ಲಿ ಈಗಾಗ್ಲೇ ನ್ಯೂಜಿಲೆಂಡ್ ತಂಡವನ್ನ ಸೋಲಿಸಿದ್ದರಿಂದ ಫೈನಲ್​ನಲ್ಲೂ ಭಾರತವೇ ಗೆಲ್ಲುವ ಫೇವರೆಟ್ ಟೀಂ ಎನಿಸಿಕೊಂಡಿದೆ. ಜೊತೆಗೆ ನ್ಯೂಜಿಲೆಂಡ್ ಕೂಡ ಸ್ಥಿರ ಪ್ರದರ್ಶನ ನಿಡ್ತಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಗುಂಪು ಹಂತದಲ್ಲಿ ಭಾರತದ ವಿರುದ್ಧ ಕಿವೀಸ್​ ಸೋತರೂ ಸಹ, ಅವರು ಭಾರತದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದರು. ಇದಲ್ಲದೆ, ದುಬೈ ಪಿಚ್ ಸ್ಪಿನ್ ಬೌಲಿಂಗ್‌ಗೆ ಅನುಕೂಲಕರವಾಗಿರುವುದರಿಂದ, ಕಿವೀಸ್ ಪಡೆ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಭಾರತಕ್ಕೆ ದೊಡ್ಡ ಸವಾಲನ್ನೊಡ್ಡಿದ್ದರು. ಭಾರತದ ತಂತ್ರಗಾರಿಕೆಯನ್ನೇ ಅನುಸರಿಸುವ ಕಿವೀಸ್​ ಭಾರತಕ್ಕೆ ಹೆಚ್ಚು ಅಪಾಯಕಾರಿಯೂ ಆಗಬಹುದು. ಹಾಗೇ  ಸೌತ್ ಆಫ್ರಿಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಇಬ್ಬರು ಆಟಗಾರರು ಶತಕ ಸಿಡಿಸಿರೋದ್ರಿಂದ ಗೆಲುವಿನ ಕಾನ್ಸಿಡೆನ್ಸ್ ಕೂಡ ಹೆಚ್ಚಾಗಿದೆ.

Shantha Kumari

Leave a Reply

Your email address will not be published. Required fields are marked *